ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಯಮಾವಳಿ ಉಲ್ಲಂಘನೆ ತಡೆಗೆ ಪೊಲೀಸ್ ಇಲಾಖೆ ಕಟಿಬದ್ಧ’- ಶಿವಪ್ರಕಾಶ ದೇವರಾಜು

ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಇಲಾಖೆ ನಿರತ: ಶಿವಪ್ರಕಾಶ ದೇವರಾಜು
Last Updated 21 ಮೇ 2021, 13:13 IST
ಅಕ್ಷರ ಗಾತ್ರ

ಕಾರವಾರ: ‘ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಜಾರಿಯಲ್ಲಿರುವ ಲಾಕ್‌ಡೌನ್ ನಿಯಮಾವಳಿಗಳ‍ ಉಲ್ಲಂಘನೆ ತಡೆಯಲು ಪೊಲೀಸ್ ಇಲಾಖೆ ಕಾರ್ಯ ಪ್ರವೃತ್ತವಾಗಿದೆ. ಅನಗತ್ಯ ಸಂಚರಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಾದ್ಯಂತ ಇರುವ ಚೆಕ್‌ಪೋಸ್ಟ್‌ಗಳಲ್ಲಿ ಇಲಾಖೆಯ ಸಿಬ್ಬಂದಿಯನ್ನು ನೇಮಿಸಲಾಗಿದೆ. ಸುಳ್ಳು ದಾಖಲೆಗಳನ್ನು ತೋರಿಸಿ ವಿನಾ ಕಾರಣ ಸಂಚರಿಸುವವರ ಮೇಲೆಯೂ ನಿಗಾ ಇಡಲಾಗಿದೆ. ಅಲ್ಲದೇ ಕೋವಿಡ್ ಸಂದರ್ಭದಲ್ಲಿ ಜನರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಜಾಗೃತಿ ಮೂಡಿಸಲಾಗಿದೆ’ ಎಂದು ವಿವರಿಸಿದರು.

‘ಕಂದಾಯ ಇಲಾಖೆಯವರು ತಿಳಿಸುವ ವಿಶೇಷ ನಿರ್ಬಂಧಿತ ಪ್ರದೇಶಗಳಿಗೆ ಬಂದೊಬಸ್ತ್ ಮಾಡಲಾಗುತ್ತಿದೆ. ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯಕೀಯ ಸಿಬ್ಬಂದಿಯ ಭದ್ರತೆಗೆ ಪೊಲೀಸರು ದಿನಪೂರ್ತಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸಂಬಂಧಿತ ಕರ್ತವ್ಯಗಳಿಗಾಗಿ ಜಿಲ್ಲೆಯಲ್ಲಿ 12 ಸಿ.ಪಿ.ಐ.ಗಳು, 49 ಪಿ.ಎಸ್.ಐ.ಗಳು, 143 ಎ.ಎಸ್.ಐ.ಗಳು, 1,004 ಹಿರಿಯ ಪೊಲೀಸ್ ಕಾನ್‌ಸ್ಟೆಬಲ್‌ಗಳು ಹಾಗೂ 200 ಹೋಮ್‌ ಗಾರ್ಡ್‌ಗಳನ್ನು ನಿಯುಕ್ತಿಗೊಳಿಸಲಾಗಿದೆ. ಜೊತೆಗೇ ಕೆ.ಎಸ್.ಆರ್.ಪಿ ಮತ್ತು ಡಿ.ಎ.ಆರ್.ನ ತಲಾ ಒಂದು ತುಕಡಿಯನ್ನು ನಿಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕೋವಿಡ್ 19 ಕರ್ತವ್ಯದಲ್ಲಿದ್ದ 251 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಅವರಲ್ಲಿ 188 ಮಂದಿ ಗುಣಮುಖರಾಗಿದ್ದು, 63 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಎಲ್ಲರೂ ಆರೋಗ್ಯವಾಗಿದ್ದಾರೆ. ಇಲಾಖೆಯ ಸಿಬ್ಬಂದಿ ಮತ್ತು ಕುಟುಂಬದವರಿಗೆ ‍ಪ್ರತ್ಯೇಕವಾಗಿ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ’ ಎಂದೂ ತಿಳಿಸಿದರು.

‘112’ಗೆ ಉತ್ತಮ ಸ್ಪಂದನ:

ಪೊಲೀಸ್ ಸಹಾಯವಾಣಿ ‘112’ಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನ ವ್ಯಕ್ತವಾಗುತ್ತಿದೆ. ದಿನಕ್ಕೆ 15ರಿಂದ 20 ಕರೆಗಳು ಬರುತ್ತಿವೆ. ಇದಕ್ಕಾಗಿಯೇ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಕಟ್ಟಡದಲ್ಲಿ ಇದಕ್ಕೆಂದೇ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಕರೆಗಳಿಗೆ ಇಲಾಖೆಯಿಂದ ತ್ವರಿತವಾಗಿ ಸ್ಪಂದಿಸಲಾಗುತ್ತಿದೆ ಎಂದೂ ಮಾಹಿತಿ ನೀಡಿದರು.

‘ವೈರ್‌ಲೆಸ್ ಡಿಜಿಟಲೀಕರಣ’:

ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯ ಸಿಸ್ತಂತು ವಿಭಾಗ (ವೈರ್‌ಲೆಸ್) ಸಂಪೂರ್ಣವಾಗಿ ಡಿಜಿಟಲ್ ಆಗಿ ಪರಿವರ್ತನೆಯಾಗಿದೆ. ಈವರೆಗೆ ಅನಲಾಗ್ ಪದ್ಧತಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು.

ಈ ಬಗ್ಗೆ ಮಾಹಿತಿ ನೀಡಿದ ಶಿವಪ್ರಕಾಶ ದೇವರಾಜು, ‘ರಾಜ್ಯದಲ್ಲಿ ಈ ಬದಲಾವಣೆ ಹೊಂದಿದ ಮೊದಲ ಕೆಲವು ಜಿಲ್ಲೆಗಳಲ್ಲಿ ಉತ್ತರ ಕನ್ನಡವೂ ಒಂದು. ಮೊದಲ ಹಂತದಲ್ಲಿ ಬೆಳಗಾವಿ, ಬೆಂಗಳೂರು, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಡಿಜಿಟಲ್ ಮಾಡಲಾಗಿತ್ತು. ಎರಡನೇ ಹಂತದಲ್ಲಿ ಉತ್ತರ ಕನ್ನಡವೂ ಸೇರಿದಂತೆ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರಿನಲ್ಲಿ ಅಳವಡಿಸಲಾಗಿದೆ’ ಎಂದು ತಿಳಿಸಿದರು.

‘ಡಿಜಿಟಲ್ ಪದ್ಧತಿಗೆ ಬದಲಾಗಿರುವ ಕಾರಣ, ನಿಸ್ತಂತು ವಿಭಾಗದ ಸಂವಹನ ಮತ್ತಷ್ಟು ಪರಿಣಾಮಕಾರಿ ಆಗಲಿದೆ. ಅನಲಾಗ್ ಪದ್ಧತಿಯಲ್ಲಿ ಕೆಲವೆಡೆ ಸಿಗ್ನಲ್ ಸಮಸ್ಯೆಯಾಗುತ್ತಿತ್ತು. ಧ್ವನಿ ಸ್ಪಷ್ಟವಾಗಿ ಬರುತ್ತಿರಲಿಲ್ಲ. ಈಗ ಮತ್ತಷ್ಟು ಆ್ಯಂಟೆನಾಗಳನ್ನು ಹಾಗೂ ಸುಧಾರಿತ ಉಪಕರಣಗಳನ್ನು ಅಳವಡಿಸಲಾಗಿದೆ. ಗುಡ್ಡಗಾಡು ಪ್ರದೇಶಗಳಿರುವ ಈ ಜಿಲ್ಲೆಗೆ ಇದರಿಂದ ಅನುಕೂಲವಾಗಲಿದೆ’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದರಿನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

ಲಾಕ್‌ಡೌನ್ ಅವಧಿಯಲ್ಲಿ ಕಾನೂನು ಕ್ರಮ

ದಿನಾಂಕ;ಮಾಸ್ಕ್ ಧರಿಸದವರು;ದಂಡ ವಸೂಲಿ (₹ಗಳಲ್ಲಿ)

22.3.2020ರಿಂದ 31.12.2020;5,965;6,19,700

1.1.2021ರಿಂದ 31.3.2021;1,910;1,91,000

1.4.2021ರಿಂದ 20.5.2021;6,362;6,48,650

ಒಟ್ಟು;14,237;14,59,350

* ವಶಪಡಿಸಿಕೊಂಡ ವಾಹನಗಳು;2,655

* ನಿರ್ಬಂಧಗಳನ್ನು ವಿಧಿಸಿರುವುದು ನಾಗರಿಕರ ಆರೋಗ್ಯ ರಕ್ಷಣೆಗಾಗಿ. ಜಿಲ್ಲೆಯಲ್ಲಿ ಲಾಠಿಚಾರ್ಜ್ ಅನ್ನು ಆದಷ್ಟು ಮಟ್ಟಿಗೆ ತಡೆಯುವಂತೆ ಇಲಾಖೆಯ ಸಿಬ್ಬಂದಿಗೆ ಸೂಚಿಸಲಾಗಿದೆ.

– ಶಿವಪ್ರಕಾಶ ದೇವರಾಜು, ಎಸ್.ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT