ಗುರುವಾರ , ಮಾರ್ಚ್ 23, 2023
30 °C

ಯಲ್ಲಾಪುರ: ಅಂತರಜಿಲ್ಲಾ ಕಳವು ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲ್ಲಾಪುರ: ಮೂರು ನಾಲ್ಕು ವರ್ಷಗಳಿಂದ ಮನೆಗಳಲ್ಲಿ ಕಳವು ಮಾಡುತ್ತಿದ್ದ ಇಬ್ಬರು ಅಂತರ ಜಿಲ್ಲಾ ಆರೋಪಿಗಳನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿಗೆ ಹುಡುಕಾಟ ಮುಂದುವರಿದಿದೆ.

ಧಾರವಾಡ ಜಿಲ್ಲೆಯ ಲಕ್ಷ್ಮೀಸಿಂಗನಕೇರಿ ನಿವಾಸಿ, ಗೌಂಡಿ ಕೆಲಸ ಮಾಡುವ ಹುಲಗಪ್ಪ ಬಂಡಿವಡ್ಡರ (32) ಹಾಗೂ ಮತ್ತೊಬ್ಬ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಬಂಧಿತರು. ಆರೋಪಿಗಳಿಂದ 42 ಗ್ರಾಂ ತೂಕದ ಬಂಗಾರದ ಆಭರಣಗಳಾದ ಒಂದು ನೆಕ್ಲೇಸ್, ಎರಡು ಉಂಗುರಗಳು, ಕಿವಿಯ ಕುಡುಕು ಎರಡು ಜೊತೆ, 100 ಗ್ರಾಂ ಬೆಳ್ಳಿಯ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳ ಅಂದಾಜು ಮೌಲ್ಯ ₹ 2.20 ಲಕ್ಷ ಎಂದು ‍ಪೊಲೀಸರು ತಿಳಿಸಿದ್ದಾರೆ.

ಯಲ್ಲಾಪುರ ಶಾರದಾ ಗಲ್ಲಿ ನಿವಾಸಿ ಶಿಕ್ಷಕ ಚಂದ್ರಶೇಖರ ನರಸಿಂಹ ಹೆಗಡೆ ಅವರು, 2020ರ ಡಿ.18ರಂದು ಸಂಜೆ 5ರಿಂದ ಡಿ.19 ರಾತ್ರಿ 8ರ ನಡುವೆ ತಮ್ಮ ಮನೆಯ ಮುಂಬಾಗಿಲ ಬೀಗವನ್ನು ಒಡೆದು ಕಳ್ಳರು ಒಳನುಗ್ಗಿದ್ದರು. ಕಪಾಟಿನಲ್ಲಿದ್ದ ಆಭರಣಗಳನ್ನು ಕಳವು ಮಾಡಿದ್ದಾರೆ ಎಂದು ಡಿ.20ರಂದು ದೂರು ನೀಡಿದ್ದರು.

ಈ ಪ್ರಕರಣದ ತನಿಖೆ ಕೈಗೊಂಡ ಯಲ್ಲಾಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದರು. ಅವರು ಕಾರವಾರ, ಯಲ್ಲಾಪುರ, ಭಟ್ಕಳ, ಸಿದ್ದಾಪುರ ಹಾಗೂ ಶಿವಮೊಗ್ಗ ಜಿಲ್ಲೆಯ ಸೊರಬ, ಆನವಟ್ಟಿ, ಧಾರವಾಡ ಜಿಲ್ಲೆಯ ಕಲಘಟಗಿ, ಹುಬ್ಬಳ್ಳಿ ಕಡೆಗಳಲ್ಲಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಮೂರು, ನಾಲ್ಕು ವರ್ಷಗಳಲ್ಲಿ ಯಲ್ಲಾಪುರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆಗಳಲ್ಲಿ ಕಳವು ಮತ್ತು ಬ್ಯಾಂಕ್‌ಗಳಲ್ಲಿ ಕಳವು ಮಾಡಿದ ಬಗ್ಗೆಯೂ ತನಿಖೆಯಿಂದ ಗೊತ್ತಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದರಿನಾಥ, ಶಿರಸಿ ಡಿ.ವೈ.ಎಸ್‌.ಪಿ ರವಿ ನಾಯ್ಕ, ಯಲ್ಲಾಪುರ ಠಾಣೆಯ ಸಿ.ಪಿ.ಐ ಸುರೇಶ ಯಳ್ಳೂರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಇನ್‌ಸ್ಪೆಕ್ಟರ್ ಮಂಜುನಾಥ ಗೌಡರ್, ಪ್ರೊಬೆಷನರಿ ಪಿ.ಎಸ್‌.ಐ ಮುಷಾಹಿದ್ ಅಹ್ಮದ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು