ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದರು ವಿಸ್ತರಣೆ: 20ರವರೆಗೆ ಸ್ಥಗಿತ

ಜೆ.ಸಿ.ಬಿ ಯಂತ್ರ ತಡೆದು ಮೀನುಗಾರರ ಪ್ರತಿಭಟನೆ: ಸಚಿವರ ಜೊತೆ ಚರ್ಚಿಸಲು ನಿರ್ಧಾರ
Last Updated 18 ಡಿಸೆಂಬರ್ 2019, 13:35 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನಲ್ಲಿ ‘ಸಾಗರ ಮಾಲಾ’ ಯೋಜನೆಯ ಭಾಗವಾದ ಬಂದರಿನ ಎರಡನೇ ಹಂತದವಿಸ್ತರಣೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.ಮೊದಲ ದಿನದ ಕಾಮಗಾರಿಗೆಬುಧವಾರ ಮೀನುಗಾರರು ಜೆಸಿಬಿ ಯಂತ್ರವನ್ನು ತಡೆದು ಪ್ರತಿಭಟಿಸಿದರು. ಇದರ ಪರಿಣಾಮ ಕಾಮಗಾರಿಯನ್ನು ಡಿ.20ರವರೆಗೆ ಮುಂದೂಡಲಾಯಿತು.

ಅಂದು ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಗರಕ್ಕೆ ಭೇಟಿ ನೀಡಲಿದ್ದಾರೆ. ಅವರಸಲಹೆ, ಅಭಿಪ್ರಾಯ ಪಡೆದು ನಂತರವೇಮುಂದಿನ ನಿರ್ಧಾರ ಕೈಗೊಳ್ಳಲು ಮೀನುಗಾರರು ತೀರ್ಮಾನಿಸಿದರು. ಬಂದರು ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ತಾರಾನಾಥ ರಾಥೋಡ್ ಕೂಡ ಅಲ್ಲಿಯವರೆಗೆ ಕಾಮಗಾರಿ ನಡೆಸದಿರಲು ಸಮ್ಮತಿಸಿದರು.

ಕಾಮಗಾರಿ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರಬಾರದು ಎಂದುಪೊಲೀಸ್ ಅಧಿಕಾರಿಗಳು ಮೀನುಗಾರರ ಜೊತೆ ಮಂಗಳವಾರ ಸೌಹಾರ್ದ ಸಭೆ ಹಮ್ಮಿಕೊಂಡಿದ್ದರು. ಆದರೆ, ಬುಧವಾರ ಬೆಳಿಗ್ಗೆ ಕಾಮಗಾರಿ ಆರಂಭಿಸಲು ಮುಂದಾಗುತ್ತಿದ್ದಂತೆ ನೂರಾರು ಮೀನುಗಾರರು ಕಡಲತೀರದ ಬಳಿ ಸೇರಿ ಆಕ್ರೋಶ ಹೊರಹಾಕಿದರು.

‘ನೌಕಾನೆಲೆ ಯೋಜನೆಗೆ ಭೂಮಿತ್ಯಾಗ ಮಾಡಿದವರು ಈಗ ಟ್ಯಾಗೋರ್ ಕಡಲತೀರವನ್ನೇ ಅವಲಂಬಿಸಿದ್ದಾರೆ. ಸ್ಥಳೀಯರ ವಿರೋಧದ ನಡುವೆಯೂ ಕೆಲಸ ಪ್ರಾರಂಭವಾದರೆ ನಾವು ಎಂತಹ ಹೋರಾಟಕ್ಕೂ ಸಿದ್ಧ’ ಎಂದು ಮೀನುಗಾರರ ಮುಖಂಡರು ಎಚ್ಚರಿಕೆ ನೀಡಿದರು.

‘ನಿಮಗೆ ಕಾಮಗಾರಿ ಮಾಡಲೇಬೇಕಿದ್ದರೆ ಮಾಡಿ, ನಾವೂ ನಮ್ಮ ಕೆಲಸ ಮಾಡುತ್ತೇವೆ. ಸುಖಾಸುಮ್ಮನೆ ಘರ್ಷಣೆಗೆ ಆಸ್ಪದ ನೀಡಬೇಡಿ’ ಎಂದು ಜಿಲ್ಲಾ ಮೀನು ಮಾರಾಟಗಾರರ ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ ಎಚ್ಚರಿಸಿದರು.

‘ಕಾಮಗಾರಿ ನಡೆಸುವ ಮೊದಲು ನಮ್ಮನ್ನು ಬಂಧಿಸಿ. ಎಲ್ಲರೂ ಜೈಲಿಗೆ ಹೋಗಲು ಸಿದ್ಧರಿದ್ದೇವೆ’ ಎಂದು ಸೇರಿದ್ದ ಮೀನುಗಾರರು ಸಿಟ್ಟಿನಿಂದ ನುಡಿದರು.

ಸಚಿವರಿಂದ ಚರ್ಚಿಸುವ ಭರವಸೆ:ಜಿಲ್ಲಾಧಿಕಾರಿ ಡಾ.ಕೆ.ಹರೀಶ ಕುಮಾರ್ ಅವರ ತುರ್ತು ಭೇಟಿಗೆ ಮೀನುಗಾರ ಮುಖಂಡರು ಅವರ ಕಚೇರಿಗೆ ಹೋದರು. ಆದರೆ, ಅವರಭೇಟಿ ಸಾಧ್ಯವಾಗಲಿಲ್ಲ.

ನಂತರ ಮೀನುಗಾರ ಮುಖಂಡರು, ಮೀನುಗಾರಿಕೆ ಹಾಗೂ ಬಂದರು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನುಸ್ಥಳದಲ್ಲೇ ದೂರವಾಣಿ ಮೂಲಕ ಸಂಪರ್ಕಿಸಿದರು.

ಎಂಜಿನಿಯರ್ ಜೊತೆ ದೂರವಾಣಿಯಲ್ಲಿ ಮಾತನಾಡಿದ ಸಚಿವರು, ‘ಡಿ.20ರಂದು ಕಾರವಾರಕ್ಕೆ ಭೇಟಿ ನೀಡಿ ಮೀನುಗಾರರೊಂದಿಗೆ ಸಭೆ ನಡೆಸಿ ಚರ್ಚೆ ನಡೆಸುತ್ತೇನೆ. ಅಲ್ಲಿಯವರೆಗೆ ಕಾಮಗಾರಿ ನಡೆಸಬೇಡಿ’ ಎಂದು ತಾಕೀತು ಮಾಡಿದರು. ಇದಕ್ಕೆ ಎಂಜಿನಿಯರ್ ತಾರಾನಾಥ ರಾಥೋಡ್ ಕೂಡ ಸಮ್ಮತಿಸಿದರು.

ಬೆಳಿಗ್ಗೆ 9ರ ಸುಮಾರಿಗೆ ಆರಂಭವಾದ ಪ್ರತಿಭಟನೆಯು ಮಧ್ಯಾಹ್ನ 3.30ಕ್ಕೆ ಅಂತ್ಯವಾಯಿತು.

‘ಸ್ಥಳೀಯರಿಗೆ ತೊಂದರೆ ನೀಡುವುದು ನಮ್ಮ ಉದ್ದೇಶವಲ್ಲ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಕಾನೂನನ್ನು ಪ್ರತಿಯೊಬ್ಬರೂ ಪಾಲಿಸಬೇಕು’ ಎಂದು ಡಿವೈಎಸ್‌ಪಿ ಶಂಕರ ಮಾರಿಹಾಳ ಪ್ರತಿಭಟನಾಕಾರರಿಗೆ ಸೂಚಿಸಿದರು.

ಮೀನುಗಾರರ ಮುಖಂಡರಾದ ರಾಜು ತಾಂಡೇಲ, ಕೆ.ಟಿ.ತಾಂಡೇಲ, ವಾಮನ ಹರಿಕಂತ್ರ, ಮೋಹನ ಬೋಳಶೆಟ್ಟಿಕರ್, ವೆಂಕಟೇಶ ಹರಿಕಂತ್ರ, ವಿನಾಯಕ ಹರಿಕಂತ್ರ ಸೇರಿದಂತೆ ಹಲವು ಮಂದಿ ಮೀನುಗಾರ ಮುಖಂಡರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT