ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ: ದಡಕ್ಕೆ ಬಂದ ಮೂರು ಟ್ರ್ಯಾಕ್ಟರ್ ತ್ಯಾಜ್ಯ

ದೇವರ ಹೊಂಡವನ್ನು ಸ್ವಚ್ಛಗೊಳಿಸಿದ ಯುವಕರು, ವಯಸ್ಕರು
Last Updated 21 ಜುಲೈ 2019, 19:45 IST
ಅಕ್ಷರ ಗಾತ್ರ

ಮುಂಡಗೋಡ: ತುಂತುರು ಮಳೆ ಬೀಳುತ್ತಿತ್ತು. ಕೈಗವಸು ಧರಿಸಿದ್ದ ಯುವಕರು, ವಯಸ್ಕರು ಕಸವನ್ನು ಎತ್ತಿ ದಡಕ್ಕೆ ಹಾಕುತ್ತಿದ್ದರು. ಮೆಟ್ಟಿಲುಗಳ ಮೇಲಿದ್ದ ಗಿಡಗಂಟಿಗಳನ್ನು ಕತ್ತರಿಸುತ್ತ, ಎಲ್ಲೆಂದರಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿಗಳನ್ನು ಮಹಿಳೆಯರು ಒಂದೆಡೆ ರಾಶಿ ಹಾಕಿದರು.

ಆಳೆತ್ತರಕ್ಕೆ ಬೆಳೆದಿದ್ದ ನಿರುಪಯುಕ್ತ ಬಳ್ಳಿಯನ್ನು ಇಬ್ಬರು ಪೌರ ಸಿಬ್ಬಂದಿ, ರೈತರು ಸಹ ಕುಡಗೋಲಿನಿಂದ ಕತ್ತರಿಸಿದರು.
ಸುಮಾರು ಮೂರೂವರೆ ಗಂಟೆಗಳ ಕಾಲ ನಡೆದ ಸ್ವಚ್ಛತಾ ಕಾರ್ಯಕ್ರಮದಿಂದ ಇಲ್ಲಿನ ಬಸವಣ್ಣ ಹೊಂಡ ಮೊದಲಿನ ರೂಪ ಪಡೆದುಕೊಂಡಿತು.

ನಮ್ಮ ಕನಸಿನ ಮುಂಡಗೋಡ, ರೋಟರಿ ಕ್ಲಬ್ ಹಾಗೂ ಬಸವೇಶ್ವರ ದೇವಸ್ಥಾನಸಮಿತಿಸದಸ್ಯರು ಭಾನುವಾರ ಬಸವಣ್ಣ ಹೊಂಡವನ್ನು ಸ್ವಯಂ ಪ್ರೇರಿತರಾಗಿ ಸ್ವಚ್ಛಗೊಳಿಸಿದರು. ಮದ್ಯದ ಬಾಟಲಿಗಳು, ತೆಂಗಿನಕಾಯಿ, ಭಿನ್ನಗೊಂಡ ದೇವರ ಫೋಟೊಗಳು, ಪ್ಲಾಸ್ಟಿಕ್‌ ಚೀಲಗಳು, ಬಟ್ಟೆಯ ತುಂಡುಗಳು ಸೇರಿದಂತೆ ತ್ಯಾಜ್ಯ ವಸ್ತುಗಳು ಹೊಂಡದಿಂದ ಬೇರ್ಪಡಿಸಿದರು.

ಶುಭ್ರ ನೀರಿನಿಂದ ತುಂಬಿರಬೇಕಾಗಿದ್ದ ಹೊಂಡದಲ್ಲಿ ಪಾಚಿ, ಪ್ಲಾಸ್ಟಿಕ್‌ ಬಾಟಲಿಗಳು, ಚೀಲಗಳು, ಮುಳ್ಳಿನ ಕಂಟಿಗಳು ಆವರಿಸಿದ್ದವು. ಒಂದೊಂದು ತಂಡವನ್ನು ಕಟ್ಟಿಕೊಂಡ ಸದಸ್ಯರು ನಾಲ್ಕು ಮೂಲೆಯಲ್ಲಿಯೂ ಸ್ವಚ್ಛತಾ ಕಾರ್ಯ ಕೈಗೊಂಡರು.

‘ಬಸವಣ್ಣ ಹೊಂಡದಲ್ಲಿಯೇ ಪಟ್ಟಣದ ಎಲ್ಲ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗುತ್ತದೆ. ಆದರೆ, ಹೊಂಡದಲ್ಲಿ ಬೇಡವಾದ ವಸ್ತುಗಳನ್ನು ಎಸೆದು ಮಲಿನಗೊಳಿಸಿದ್ದಾರೆ. ಹೊಂಡವನ್ನು ಸ್ವಚ್ಛ ಮಾಡಲಾಯಿತು’ ಎಂದು ರೋಟರಿ ಕ್ಲಬ್‌ನ ಡಾ.ಪಿ.ಪಿ.ಛಬ್ಬಿ ಹೇಳಿದರು.

‘ಮೂರು ಟ್ರ್ಯಾಕ್ಟರ್‌ಗಿಂತ ಹೆಚ್ಚು ಕಸ ಹಾಗೂ ಗಿಡಗಂಟಿಗಳನ್ನು ದಡದಲ್ಲಿ ರಾಶಿ ಹಾಕಲಾಯಿತು. ನೀರಿಗೆ ತ್ಯಾಜ್ಯ ಎಸೆಯವುದು ನಿಲ್ಲಬೇಕು. ಪ್ಲಾಸ್ಟಿಕ್ ತ್ಯಾಜ್ಯ ಬಹಳಷ್ಟಿತ್ತು’ ಎಂದು ನಮ್ಮ ಕನಸಿನ ಮುಂಡಗೋಡ ವೇದಿಕೆಯ ಮಹೇಶ ಹೆಗಡೆ ಹೇಳಿದರು.

‘ಬಸವಣ್ಣ ಹೊಂಡದಲ್ಲಿ ಸ್ವಚ್ಛತಾ ಕಾರ್ಯ ಮಾಡಿರುವುದಕ್ಕೆ ಸಂತಸವಾಗಿದೆ. ಬೇಡವಾದ ಕಸವನ್ನೆಲ್ಲ ಇಲ್ಲಿ ತಂದು ಹಾಕಬಾರದು. ದೇವರ ಹೊಂಡದ ಪಾವಿತ್ರ್ಯವನ್ನು ಉಳಿಸಿಕೊಳ್ಳಬೇಕು’ ಎಂದು ಬಸವಣ್ಣ ದೇವಸ್ಥಾನ ಸಮಿತಿ ಅಧ್ಯಕ್ಷರೂ ಆಗಿರುವ ಹಿರಿಯ ವಕೀಲ ಸಿ.ಎಸ್.ಗಾಣಿಗೇರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT