ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬ ರಾಕ್ಷಸ, ಇನ್ನೊಬ್ಬ ಬ್ರಹ್ಮ ರಾಕ್ಷಸ: ರವಿಕೃಷ್ಣ ರೆಡ್ಡಿ ವಾಗ್ದಾಳಿ

Last Updated 30 ಏಪ್ರಿಲ್ 2019, 17:00 IST
ಅಕ್ಷರ ಗಾತ್ರ

ಕಾರವಾರ: ‘ಈ ಲೋಕಸಭಾ ಚುನಾವಣೆಯಲ್ಲಿ ಒಂದು ಕಡೆ ಆನಂದ ಅಸ್ನೋಟಿಕರ್, ಇನ್ನೊಂದು ಕಡೆ ಅನಂತಕುಮಾರ ಹೆಗಡೆ, ‘ಅತ್ತ ದರಿ ಇತ್ತ ಪುಲಿ’ ಎಂದು ಪರಿಗಣಿಸಬಾರದು. ಒಬ್ಬ ರಾಕ್ಷಸ, ಇನ್ನೊಬ್ಬ ಬ್ರಹ್ಮ ರಾಕ್ಷಸ. ಮತದಾರರು ಪ್ರಜಾಪ್ರಭುತ್ವದಲ್ಲಿ ಆಯ್ಕೆಗಳನ್ನು ಇಟ್ಟುಕೊಳ್ಳಿ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣರೆಡ್ಡಿ ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆಗಳು ಇಲ್ಲವೆಂದಾಗ ನಾವೇ ಚುನಾವಣೆಗೆ ನಿಲ್ಲುವಂತಾಗಬೇಕು. ಅಯೋಗ್ಯರಿಗೆ ಮತ ಹೋಗಬಾರದು. ಇಬ್ಬರು ವ್ಯಕ್ತಿಗಳನ್ನು ನೋಡಿಕೊಂಡು ಪ್ರಜಾಪ್ರಭುತ್ವವನ್ನು ತೀರ್ಮಾನಿಸಬೇಡಿ. ಅಯೋಗ್ಯ, ಭ್ರಷ್ಟರನ್ನು ಚುನಾಯಿಸಬೇಡಿ’ ಎಂದು ಸಲಹೆ ನೀಡಿದರು.

‘ನಮ್ಮ ಅಭ್ಯರ್ತಿಗಳು ಸಾಲ ಮಾಡಿ ಚುನಾವಣೆಗೆ ನಿಲ್ಲುವುದಿಲ್ಲ. ಚುನಾವಣೆಗಾಗಿ ಆಸ್ತಿ ಮಾರುವುದಿಲ್ಲ. ಜನರಿಂದ ದೇಣಿಗೆ ಪಡೆಯುತ್ತಾರೆ. ಮತದಾರರೇ ಅವರಿಗೆ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಉಪಾಧ್ಯಕ್ಷ ಲಿಂಗೇಗೌಡ ಎಸ್.ಎಚ್. ಮಾತನಾಡಿ, ‘ಕರ್ನಾಟಕ ರಾಷ್ಟ್ರ ಸಮಿತಿಯಿಂದ ಈ ಬಾರಿ 12 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿರುವುದರಿಂದ ಪಕ್ಷೇತರರಾಗಿ ಅಭ್ಯರ್ಥಿಗಳನ್ನು ಹಾಕಿದ್ದೇವೆ. ಅವರಿಗೆ ನಾವು ಬೆಂಬಲ ನೀಡುತ್ತಿದ್ದೇವೆ’ ಎಂದು ತಿಳಿಸಿದರು.

‘ಹೊಸ ತಲೆ ಮಾರಿನ ರಾಜಕಾರಣ ಬಯಸುವವರಿಗೆ, ಸ್ವಚ್ಛ, ಪ್ರಾಮಾಣಿಕ ಆಡಳಿತ ಬಯಸುವ ರಾಜಕಾರಣಗಳಿಗೆ ವೇದಿಕೆ ಒದಗಿಸಿಕೊಡಲು ಈ ಪಕ್ಷ ಸ್ಥಾಪನೆ ಮಾಡಿದ್ದೇವೆ. ಮುಂಬರುವ ಎಲ್ಲ ಚುನಾವಣೆಯಲ್ಲೂ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ರಾಜಕೀಯಕ್ಕೆ ಬರಲು ಇಚ್ಛಿಸುವವರು ಮೊ.ಸಂ: 7975625575ಗೆ ಸಂಪರ್ಕಿಸಬಹುದು’ ಎಂದರು.

‘ದೇವೇಗೌಡರು ನಿರ್ಲಜ್ಜ ರಾಜಕಾರಣಿ’:‘ಕರ್ನಾಟಕದಲ್ಲಿ ಕುಟುಂಬ ರಾಜಕಾರಣ, ಸ್ವಜನಪಕ್ಷಪಾತ ರಾಜಕಾರಣ ನಡೆಯುತ್ತಿದೆ. ಇದು ರಾಜ್ಯದ ಜನರು ತಲೆ ತಗ್ಗಿಸುವಂತೆ ಮಾಡಿದೆ. ಎಚ್.ಡಿ.ದೇವೇಗೌಡರ ಕುಟುಂಬದ ನಿರ್ಲಜ್ಜ, ಜನದ್ರೋಹಿ, ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ ಜನರಿಗೆ ಅಸಹ್ಯ ಹುಟ್ಟಿಸಿದೆ’ ಎಂದು ರವಿಕೃಷ್ಣ ರೆಡ್ಡಿ ವಾಗ್ದಾಳಿ ನಡೆಸಿದರು.

‘ದೇವೇಗೌಡರು, ರೈತನ ಮಗನಾಗಿ ಬೆಳೆದು, ಶಾಸಕ, ವಿರೋಧ ಪಕ್ಷದ ನಾಯಕರಾಗಿ, ಮಂತ್ರಿ, ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ದೇಶ ಕಂಡಂಥ ಉತ್ಕೃಷ್ಟ ವ್ಯಕ್ತಿಯಾಗಿದ್ದರು. ಆದರೆ, ಅದಕ್ಕೆ ಅವರು ಈಗ ಅವಮಾನ ಮಾಡಿದ್ದಾರೆ’ ಎಂದು ಕಿಡಿಕಾರಿದರು.

‘ಇಂದಿನ ರಾಜಕಾರಣಿಗಳು ನೀಚ ರಾಜಕಾರಣಕ್ಕೆ ಇಳಿದಿದ್ದಾರೆ. ಹಣ, ಹೆಂಡ, ಬಾಡೂಟದ ಚುನಾವಣೆ ಇತ್ತೀಚಿಗೆ ನಡೆಯುತ್ತಿದೆ. ಜಾತಿ ರಾಜಕಾರಣ, ವಂಶಪಾರ್ಯದ ರಾಜಕಾರಣ ಮುಂದುವರಿದಿದೆ. ‘ಜೆಸಿಬಿ‘ (ಜೆಡಿಎಸ್, ಕಾಂಗ್ರೆಸ್, ಬಿಜೆಪಿ) ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ’ ಎಂದು ಹೇಳಿದರು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕುಂದಾಬಾಯಿ ಪರುಳೇಕರ್, ಅವರ ಪತಿ ಸದಾನಂದ ದೇಶಭಂಡಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT