ಮಂಗಳವಾರ, ಜನವರಿ 28, 2020
25 °C
ಮಕ್ಕಳ ಬಿಸಿಯೂಟಕ್ಕೆ ಕೈತೋಟದ ಕಾಯಿಪಲ್ಲೆ

ತರಕಾರಿ ತೋಟದಲ್ಲೊಂದು ಶಾಲೆ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ತಾಲ್ಲೂಕಿನ ಅಜ್ಜರಣಿ ಎಂಬ ಪುಟ್ಟ ಹಳ್ಳಿಯ ಮಕ್ಕಳು ತರಕಾರಿ ಹೆಸರನ್ನು ಕೇಳಿದರೆ ಪಟಪಟನೆ ಹೇಳಬಲ್ಲರು. ಅಷ್ಟೇ ಅಲ್ಲ, ತರಕಾರಿ ಕೃಷಿಯ ಬಗ್ಗೆಯೂ ತಜ್ಞರಂತೆ ಮಾಹಿತಿ ನೀಡಬಲ್ಲರು.

ಹೌದು, ಅಜ್ಜರಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಪಠ್ಯದ ಪಾಠ ಮಾಡುವ ಜೊತೆಗೆ ಜೀವನ ಪಾಠವನ್ನೂ ಕಲಿಸುತ್ತಾರೆ. ಶಾಲೆಯಂಗಳದಲ್ಲಿ ತರಕಾರಿ ಬೆಳೆಸುತ್ತ, ಮಕ್ಕಳಿಗೆ ಮನುಷ್ಯ ಮತ್ತು ಮಣ್ಣಿನ ಸಂಬಂಧವನ್ನು ತಿಳಿಸುತ್ತಾರೆ. ತರಕಾರಿ ಕೈತೋಟ ರಚಿಸುವ ಮೂಲಕ ಈ ಶಾಲೆ ಎಲ್ಲರ ಗಮನ ಸೆಳೆದಿದೆ.

88 ಮಕ್ಕಳಿರುವ ಶಾಲೆಯಲ್ಲಿ ಐವರು ಶಿಕ್ಷಕರಿದ್ದಾರೆ. ಎಜುಸ್ಯಾಟ್ ಸೌಲಭ್ಯ ಹೊಂದಿರುವ ಗುಡ್ನಾಪುರ ಕ್ಲಸ್ಟರ್‌ನ ಮೊದಲ ಶಾಲೆ ಇದಾಗಿದೆ. ಉತ್ತಮ ಗ್ರಂಥಾಲಯವೂ ಈ ಶಾಲೆಯಲ್ಲಿದೆ. ಸುಸಜ್ಜಿತ ಪ್ರಯೋಗಾಲಯದಲ್ಲಿ ಮಕ್ಕಳು ವಿಜ್ಞಾನ ಪ್ರಯೋಗಗಳನ್ನು ಮಾಡುತ್ತಾರೆ. ಇನಸ್ಪೈಯರ್ ಅವಾರ್ಡ್ ಸ್ಪರ್ಧೆಯಲ್ಲಿ ಸತತ ಎರಡು ವರ್ಷ ಈ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದರು. ಇವೆಲ್ಲಕ್ಕೂ ಕಿರೀಟಪ್ರಾಯವಾಗಿ ಶಿಕ್ಷಕ ಪ್ರಸಾದ ಹೆಗಡೆ ಅವರು ಶಿಕ್ಷಕರ ಸಹಪಠ್ಯ ಚಟುವಟಿಕೆ ಪಾಠೋಪಕರಣ ತಯಾರಿಕಾ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು, ಊರವರ ಮೆಚ್ಚುಗೆ ಪಡೆದಿದ್ದಾರೆ.

ಇವೆಲ್ಲ ಶೈಕ್ಷಣಿಕ ಚಟುವಟಿಕೆಯ ಭಾಗ. ಬಿಡುವಿನ ಅವಧಿಯಲ್ಲಿ ಶಿಕ್ಷಕರು, ಮಕ್ಕಳು ಸೇರಿ ಕೈತೋಟದಲ್ಲಿ ಬೆಳೆಸಿದ ತರಕಾರಿ ಆರೈಕೆ ಮಾಡುತ್ತಾರೆ. ಮಕ್ಕಳು ಗಿಡಗಳಿಗೆ ನೀರು ಹಾಯಿಸಿ, ತರಕಾರಿ ಬೆಳವಣಿಗೆಯ ಹಂತವನ್ನು ಕುತೂಹಲಿಗಳಾಗಿ ವೀಕ್ಷಿಸುತ್ತಾರೆ. ಮಳೆಗಾಲದಲ್ಲಿ ಬೀನ್ಸ್, ಮೂಲಂಗಿ, ಸೌತೆ, ಹೀರೆ, ಬದನೆ, ಚಳಿಗಾಲದಲ್ಲಿ ಹರಿವೆ, ಟೊಮೆಟೊ, ಪಾಲಕ್‌ ಸೊಪ್ಪು, ಬೇಸಿಗೆಯಲ್ಲಿ ಹಸಿಮೆಣಸು, ಬೆಂಡೆಕಾಯಿ, ಬದನೆ, ಮೂಲಂಗಿ ಮೊದಲಾದ ಹಂಗಾಮಿಗೆ ಹೊಂದಾಣಿಕೆಯಾಗಿರುವ ತರಕಾರಿ ಬೆಳೆಯುತ್ತಾರೆ.

ಪಂಜರಗಡ್ಡೆ, ಕರಿಬೇವು, ಕಹಿಬೇವು, ಬಜೆಬೇರು, ನೆಲನೆಲ್ಲಿ, ತುಳಸಿ, ಸಾಂಬಾರಸೊಪ್ಪು, ಅಲೊವೆರಾ, ಎಲವರಿಗೆಯಂತಹ ಅಡುಗೆಗೆ ಬಳಸುವ ಔಷಧ ಸಸ್ಯಗಳೂ ಈ ತರಕಾರಿ ಉದ್ಯಾನದಲ್ಲಿವೆ. ಶಾಲೆಯ ಆವರಣದಲ್ಲಿ ತೆಂಗು, ಅಡಿಕೆ, ನುಗ್ಗೆ ಮರಗಳಿವೆ. ‘ಶಾಲೆಯ ಬಿಸಿಯೂಟಕ್ಕೆ ಬೇಕಾಗುವ ಅರ್ಧದಷ್ಟು ತರಕಾರಿಗಳನ್ನು ಇಲ್ಲಿಯೇ ಬೆಳೆಸುತ್ತೇವೆ. ನಾವೇ ಬೆಳೆಸಿದ ತರಕಾರಿ ಅಡುಗೆ ಮಾಡಿ ಊಟ ಮಾಡುವಾಗ ದುಡಿದು ಉಂಡ ತೃಪ್ತಿ ಸಿಗುತ್ತದೆ’ ಎನ್ನುತ್ತಾರೆ ಮುಖ್ಯ ಶಿಕ್ಷಕ ಗೋಣಿ ಬಸಪ್ಪ.

‘ಶಾಲಾಭಿವೃದ್ಧಿ ಸಮಿತಿ ಪ್ರಮುಖರು, ಊರವರು, ಎಲ್ಲ ಶಿಕ್ಷಕರ ಸಹಕಾರ ಮನೋಭಾವದಿಂದ ಇವೆಲ್ಲ ಸಾಧ್ಯವಾಗಿದೆ. ಶಿಕ್ಷಣ ಇಲಾಖೆ ಪ್ರಮುಖರ ಪ್ರೋತ್ಸಾಹ ನಮ್ಮ ಉತ್ಸಾಹವನ್ನು ಇಮ್ಮಡಿಸಿದೆ’ ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು