ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ರೇಸ್‌ನಲ್ಲಿದ್ದ ಕಾಗೇರಿಗಿಲ್ಲ ಸಚಿವ ಸ್ಥಾನ, ಮತ್ತೆ ಮಂತ್ರಿಯಾದ ಹೆಬ್ಬಾರ್‌

ಹಿರಿತನದ ಬದಲು ಧಾಡಸಿತನಕ್ಕೆ ಒಲಿದ ಸಚಿವ ಸ್ಥಾನ * ಎರಡನೇ ಬಾರಿ ಸಂಪುಟ ಸೇರಿದ ಹೆಬ್ಬಾರ
Last Updated 4 ಆಗಸ್ಟ್ 2021, 15:08 IST
ಅಕ್ಷರ ಗಾತ್ರ

ಶಿರಸಿ: ಮೂರು ಅವಧಿಗೆ ಶಾಸಕರಾದ ಯಲ್ಲಾಪುರದ ಶಿವರಾಮ ಹೆಬ್ಬಾರ ಬಸವರಾಜ ಬೊಮ್ಮಾಯಿ ಸರ್ಕಾರದ ಸಚಿವ ಸಂಪುಟಕ್ಕೆ ಬುಧವಾರ ಸೇರ್ಪಡೆಗೊಂಡರು. ಅಲ್ಲಿಗೆ ಆರು ಅವಧಿಗೆ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಕನಸು ಈ ಬಾರಿ ಕಮರಿತು!

ಉತ್ತರ ಕನ್ನಡಕ್ಕೆ ಸಿಗಬೇಕಿದ್ದ ಪ್ರಾತಿನಿಧ್ಯ, ಬ್ರಾಹ್ಮಣ ಕೋಟಾದಡಿಯ ಅವಕಾಶ ಕಾಗೇರಿ ಬದಲು ಹೆಬ್ಬಾರ ಪಾಲಿಗೆ ಒಲಿಯಿತು. ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಹಿರಿತನದ ಬದಲು ಧಾಡಸೀತನವೇ ಮೇಲುಗೈ ಸಾಧಿಸಿತು ಎಂಬ ವಿಶ್ಲೇಷಣೆ ಈಗ ಜಿಲ್ಲೆಯಲ್ಲಿ ಆರಂಭಗೊಂಡಿದೆ.

1994ರಿಂದ ಅಂಕೋಲಾ ಕ್ಷೇತ್ರವನ್ನು ಸತತ ಮೂರು ಅವಧಿಗೆ, 2008ರಿಂದ ಸತತ ಮೂರು ಅವಧಿಗೆ ಶಿರಸಿ ಕ್ಷೇತ್ರವನ್ನು ಕಾಗೇರಿ ಪ್ರತಿನಿಧಿಸಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು, ಬಸವರಾಜ ಬೊಮ್ಮಾಯಿ ಚುಕ್ಕಾಣಿ ಹಿಡಿದ ಬಳಿಕ ಕಾಗೇರಿ ಸಚಿವರಾಗಬಹುದು ಎಂಬ ಲೆಕ್ಕಾಚಾರವಿತ್ತು.

ಯಲ್ಲಾಪುರ ಕ್ಷೇತ್ರದಲ್ಲಿ 2013, 2018ರಲ್ಲಿ ಕಾಂಗ್ರೆಸ್‍ನಿಂದ ಮತ್ತು 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೇರಿ ಗೆದ್ದು ಒಟ್ಟಾರೆ ಮೂರು ಬಾರಿ ಶಾಸಕರೆನಿಸಿಕೊಂಡ ಶಿವರಾಮ ಹೆಬ್ಬಾರ ಕಾಗೇರಿಗಿಂತ ಕಿರಿಯರು.

ಆದರೆ, ಹಿಂದಿನ ಯಡಿಯೂರಪ್ಪ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿ ಕೆಲಸ ಮಾಡಿದ್ದ ಅನುಭವ, ಕೋವಿಡ್, ನೆರೆ ಹಾವಳಿ ಸಂದಿಗ್ಧ ಸ್ಥಿತಿಯನ್ನು ನಿಭಾಯಿಸಿದ ಸಾಧನೆ ಮತ್ತೊಮ್ಮೆ ಅವರನ್ನು ಮಂತ್ರಿ ಸ್ಥಾನದಲ್ಲಿ ಕೂರಿಸಿದೆ! ಜತೆಗೆ 2019ರಲ್ಲಿ ಕಾಂಗ್ರೆಸ್‍ನಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಶಾಸಕರ ಲಾಬಿಯೂ ಕೆಲಸ ಮಾಡಿದೆ ಎಂಬುದು ಬಿಜೆಪಿ ಪಾಳಯದಲ್ಲಿ ಚರ್ಚಿತವಾಗುತ್ತಿರುವ ಸಂಗತಿ.

ವಿದ್ಯಾರ್ಥಿ ಜೀವನದ ಹೋರಾಟದಿಂದ ರಾಜಕೀಯ ವೇದಿಕೆ ಕಲ್ಪಿಸಿಕೊಂಡ ಕಾಗೇರಿ ಸತತವಾಗಿ ವಿಧಾನಸಭೆಗೆ ಆಯ್ಕೆಯಾಗುತ್ತಿದ್ದರೂ 2008ರಲ್ಲಿ ಒಂದು ಅವಧಿಗೆ ಮಾತ್ರ ಶಿಕ್ಷಣ ಸಚಿವರಾಗಿದ್ದರು.

ಲಾರಿ ಚಾಲಕನಾಗಿ ವೃತ್ತಿ ಆರಂಭಿಸಿ, ಸಹಕಾರ ಕ್ಷೇತ್ರದ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಶಿವರಾಮ ಹೆಬ್ಬಾರ ಮೂರು ಅವಧಿಗೆ ಶಾಸಕರಾದರೂ ಎರಡನೇ ಬಾರಿ ಸಚಿವ ಸ್ಥಾನ ಅಲಂಕರಿಸಿದಂತಾಗಿದೆ.

‘ಕ್ಷೇತ್ರದ ಜನರು ಹಾಗೂ ಪಕ್ಷದ ವರಿಷ್ಠರ ಆಶೀರ್ವಾದದಿಂದ ಸಚಿವನಾಗಿದ್ದೇನೆ. ಜನರ ನಿರೀಕ್ಷೆಗೆ ತಕ್ಕಂತೆ, ಕ್ಷೇತ್ರದ ಹಾಗೂ ರಾಜ್ಯದ ಜನತೆಗೆ ಚ್ಯುತಿ ಬರದಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ’ ಎಂದು ನೂತನ ಸಚಿವ ಶಿವರಾಮ ಹೆಬ್ಬಾರ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿಯ ಐವರು ಶಾಸಕರು ಇರುವ ಉತ್ತರ ಕನ್ನಡಕ್ಕೆ ಎರಡು ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಜನರಲ್ಲಿತ್ತು. ಮಹಿಳಾ ಕೋಟಾದಡಿ ಕಾರವಾರ ಶಾಸಕಿ ರೂಪಾಲಿ ನಾಯ್ಕ ಮಂತ್ರಿಯಾಗುವ ನಿರೀಕ್ಷೆಯೂ ಹುಸಿಯಾಗಿದೆ.

ಸಿ.ಎಂ.ರೇಸ್ ನಲ್ಲಿದ್ದರು, ಸಚಿವ ಸ್ಥಾನವೂ ತಪ್ಪಿತು:ಪ್ರಸ್ತುತ ವಿಧಾನಸಭಾ ಅಧ್ಯಕ್ಷರಾಗಿರುವ ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಯಡಿಯೂರಪ್ಪ ನಂತರ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂಬ ಚರ್ಚೆ ನಡೆದಿತ್ತು. ಸಿ.ಎಂ. ರೇಸ್‍ನಲ್ಲಿದ್ದವರ ಪೈಕಿ ಅವರ ಹೆಸರನ್ನೂ ಮುನ್ನೆಲೆಗೆ ತರಲಾಗಿತ್ತು. ಆದರೆ ಬದಲಾದ ರಾಜಕೀಯ ಲೆಕ್ಕಾಚಾರದಲ್ಲಿ ಹೊಸ ಸರ್ಕಾರದಲ್ಲಿ ಸಚಿವ ಸ್ಥಾನವೂ ಅವರಿಗೆ ದಕ್ಕಲಿಲ್ಲ.

ಬಿಜೆಪಿ ಮೂಲಗಳ ಪ್ರಕಾರ ಯಡಿಯೂರಪ್ಪ ವಿರೋಧಿ ಬಣದಲ್ಲಿ ಕಾಗೇರಿ ಗುರುತಿಸಿಕೊಂಡಿದ್ದೇ ಅವರಿಗೆ ಸಚಿವ ಸ್ಥಾನ ತಪ್ಪಲು ಕಾರಣ ಎನ್ನಲಾಗಿದೆ. ಬೊಮ್ಮಾಯಿ ಸರ್ಕಾರದ ಮಂತ್ರಿ ಮಂಡಲ ರಚನೆ ವೇಳೆ ಯಡಿಯೂರಪ್ಪ ಬೇಡಿಕೆಯನ್ನೂ ಪರಿಗಣಿಸಬೇಕಾಗಿದ್ದ ಪರಿಣಾಮ ಕಾಗೇರಿ ಸಹಿತ ಕೆಲವರಿಗೆ ಸ್ಥಾನ ಕೈತಪ್ಪಿರಬಹುದು ಎಂಬುದು ಬಿಜೆಪಿ ಮುಖಂಡರೊಬ್ಬರ ಅಭಿಪ್ರಾಯ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಕಾಗೇರಿ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT