ಮಂಗಳವಾರ, ಡಿಸೆಂಬರ್ 7, 2021
20 °C

ಶಿರಸಿ: ಪಂಚಾಯತರಾಜ್ ಸಂಘಟನೆ ಸಭೆಯಲ್ಲಿ ‘ಹಳಿಯಾಳ ರಾಜಕೀಯ’ ಜಟಾಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಇಲ್ಲಿನ ಅಂಬೇಡ್ಕರ ಭವನದಲ್ಲಿ ಬುಧವಾರ ನಡೆದ ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ಜಿಲ್ಲಾ ಸಮಾವೇಶ ಹಳಿಯಾಳ ಕ್ಷೇತ್ರದ ರಾಜಕೀಯ ಜಟಾಪಟಿಗೆ ಕಾರಣವಾಯಿತು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ್ ಭಾಷಣದ ವೇಳೆ ‘ಕಾಂಗ್ರೆಸ್ಸಿಗರಿಗೆ ಕಾಂಗ್ರೆಸ್ಸಿಗರೇ ಶತ್ರುಗಳು. ಬಿಜೆಪಿಯವರನ್ನು ಕರೆತಂದರೆ ಅದಕ್ಕೆ ತಡೆ ನೀಡಲಾಗುತ್ತದೆ. ನಲ್ವತ್ತು ವರ್ಷ ಇಲ್ಲದ ನಿಯಮ ಈಗ ಹಳಿಯಾಳ ಕಾಂಗ್ರೆಸ್ಸಿನಲ್ಲಿ ಹೇರಲಾಗುತ್ತಿದೆ’ ಎಂದು ಅಸಮಾಧಾನ ತೋಡಿಕೊಂಡರು.

‘ನನಗೆ ಪಂಚಾಯತ್‌ರಾಜ್ ವ್ಯವಸ್ಥೆ ಬಗ್ಗೆ ಹೆಚ್ಚು ಗೊತ್ತಿಲ್ಲ. ಅದನ್ನು ನಾನು ಅಧ್ಯಯನ ಮಾಡಿಲ್ಲ’ ಎಂದೂ ಹೇಳಿದ್ದರು.

ಘೋಟ್ನೇಕರ್ ಮಾತು ಸಭೆಯಲ್ಲಿದ್ದ ಶಾಸಕ ಆರ್.ವಿ.ದೇಶಪಾಂಡೆ ಬೆಂಬಲಿಗರನ್ನು ಕೆಣಕಿತು. ಪಂಚಾಯತ್‌ರಾಜ್ ವ್ಯವಸ್ಥೆ ಗೊತ್ತಿಲ್ಲದವರನ್ನು ಎರಡು ಬಾರಿ ಎಂ.ಎಲ್.ಸಿ. ಮಾಡಿ ತಪ್ಪು ಮಾಡಿದೆವು ಎಂದು ಹಳಿಯಾಳದ ಕೆಲ ಸದಸ್ಯರು ಅಸಮಾಧಾನ ತೋಡಿಕೊಂಡರು.

ದೇಶಪಾಂಡೆ ಪರ ಕೆಲವರು ಘೋಷಣೆ  ಕೂಗಿದರು. ಇದಕ್ಕೆ ಪ್ರತಿಯಾಗಿ ಘೋಟ್ನೇಕರ್ ಬೆಂಬಲಿಗರ ಘೋಷಣೆ ಮೊಳಗಿತು. ಇದು ಸಭೆಯಲ್ಲಿ ಕೆಲಹೊತ್ತು ಗೊಂದಲಕ್ಕೆ ಕಾರಣವಾಯಿತು.

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಭೀಮಣ್ಣ ನಾಯ್ಕ ಮತ್ತಿತರರು ಪರಿಸ್ಥಿತಿ ತಿಳಿಗೊಳಿಸಿದರು.

ಎರಡು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿರುವ ಎಸ್.ಎಲ್.ಘೋಟ್ನೇಕರ್ ಮುಂಬರುವ ವಿಧಾನಸಭಾ ಚುನಾವಣೆಗೆ ಹಳಿಯಾಳ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಲು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಹಾಲಿ ಶಾಸಕ ಆರ್.ವಿ.ದೇಶಪಾಂಡೆ ವಿರುದ್ಧ ಬಹಿರಂಗ ಹೇಳಿಕೆಯನ್ನೂ ನೀಡಿದ್ದಾರೆ. ಹೀಗಾಗಿ ಅವರ ಬೆಂಬಲಿಗರ ನಡುವೆ ಗುದ್ದಾಟ ಹೆಚ್ಚಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು