ಶಿರಸಿ: ಮನೆ ಮಗಳ ಮದುವೆಗೆ ಇಡೀ ಊರಿಗೆ ಊರೇ ಸಂಭ್ರಮದಲ್ಲಿ ಮುಳುಗಿದೆ. ಎತ್ತ ನೋಡಿದರೂ ಪತಾಕೆಗಳು, ತೋರಣಗಳು ಗಾಳಿಗೆ ತೊನೆದಾಡುತ್ತಿವೆ. ಹೆಂಗಳೆಯರು, ಯುವತಿಯರು ಹೊಸ ವಸ್ತ್ರತೊಟ್ಟು ಲಗುಬಗೆಯಿಂದ ಓಡಾಡುತ್ತಿದ್ದಾರೆ. ಪಂಚೆ–ಶಾಲು ತೊಟ್ಟ ಪುರುಷರು ಮದುವೆಮನೆ ಶೃಂಗಾರದಲ್ಲಿ ತೊಡಗಿದ್ದಾರೆ. ಮದುವೆ ಗಂಡಿನ ಮೆರವಣಿಗೆ ಊರತುಂಬ ಸುತ್ತುತ್ತಿದೆ.

ಊರು–ಪರವೂರಿನ ತುಂಬೆಲ್ಲ ಬಂಧು–ಬಾಂಧವರನ್ನು ಹೊಂದಿರುವ ಆಕೆಯ ವಿವಾಹ ಮಹೋತ್ಸವಕ್ಕೆ, ಜನರೇ ಸೇರಿ ಕರೆಯೋಲೆ ಹಂಚುತ್ತಿದ್ದಾರೆ. ನಾಡಿನ ಗಣ್ಯರಿಗೆ ವೀಳ್ಯಕೊಟ್ಟು ಆಹ್ವಾನ ಪತ್ರಿಕೆ ನೀಡುತ್ತಿದ್ದಾರೆ. ಆಕೆಗೆ ಎಲ್ಲರೂ ಪಾಲಕರು, ಆಕೆ ಎಲ್ಲರನ್ನೂ ಪೊರೆವವಳು. ಹೀಗಾಗಿ ಹತ್ತಾರು ಜನರು ಮದುವೆಯ ಕಂಕಣ ಕಟ್ಟಿಕೊಂಡಿದ್ದಾರೆ.

ಹೌದು, ಮನೆ ಮಗಳಾಗಿರುವ ಮಾರಿಕಾಂಬಾ ದೇವಿಯ ಕಲ್ಯಾಣ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇವೆ. ಮಾ.3ರ ನಡುರಾತ್ರಿ ಕಲ್ಯಾಣಿಯಾಗುವ ದೇವಿ, ಮಾ.4ರ ಬೆಳಿಗ್ಗೆ ಅಲಂಕೃತ ರಥದಲ್ಲಿ ಮೆರವಣಿಗೆ ಹೊರಡಲಿದ್ದಾಳೆ.

‘ವೈದಿಕರು ಜಾತ್ರೆಯ ಮುಹೂರ್ತ ಘೋಷಿಸಿದ ಕೆಲವೇ ದಿನಗಳಲ್ಲಿ ಕಲ್ಯಾಣ ಮಹೋತ್ಸವದ ಆಮಂತ್ರಣ ಪತ್ರಿಕೆ ಸಿದ್ಧವಾಗುತ್ತದೆ. ನಗರದ ಪ್ರತಿ ಮನೆಗೆ ಮಾರಿಪಟ್ಟಿ ಕೊಡುವ ಉಗ್ರಾಣಿಗಳು ಅದರ ಜೊತೆಯಲ್ಲಿ ಜಾತ್ರಾ ಮಹೋತ್ಸವದ ಕರೆಯೋಲೆ ತಲುಪಿಸುತ್ತಾರೆ. ಸುತ್ತಲಿನ 48 ಸೀಮೆಗಳ ರೈತರು, ಭಕ್ತರ ಮನೆಗಳಿಗೆ ಆಹ್ವಾನ ಪತ್ರಿಕೆ ತಲುಪುತ್ತದೆ. ಪ್ರತಿ ಊರಿಗೆ 200–300 ಆಮಂತ್ರಣ ಪತ್ರಿಕೆ ಕಳುಹಿಸಿದರೆ, ಊರವರೇ ಮುಂದಾಗಿ ಅದನ್ನು ಮನೆಗಳಿಗೆ ತಲುಪಿಸುತ್ತಾರೆ’ ಎನ್ನುತ್ತಾರೆ ಧರ್ಮದರ್ಶಿ ಮಂಡಳದ ಉಪಾಧ್ಯಕ್ಷ ಮನೋಹರ ಮಲ್ಮನೆ.

‘ದೇವಾಲಯದ ಭಕ್ತಕೋಟಿಯ 18ಸಾವಿರ ಸದಸ್ಯರಿಗೆ ಅಂಚೆ ಮೂಲಕಆಹ್ವಾನ ಪತ್ರಿಕೆ ರವಾನೆಯಾಗಿದೆ. ನಗರವಾಸಿಗಳು ಅವರ ಸಂಬಂಧಿಗಳಿಗೆ ಪತ್ರ ಬರೆದು ಜಾತ್ರೆಗೆ ಕರೆಯುವ ಬದಲಾಗಿ, ದೇವಾಲಯದ ಆಮಂತ್ರಣ ಪತ್ರಿಕೆಯನ್ನೇ ಅಂಚೆಯಲ್ಲಿ ಕಳುಹಿಸುತ್ತಾರೆ’ ಎನ್ನುತ್ತಾರೆ ಅವರು.

‘ಸಾಂಪ್ರದಾಯಿಕ ಪದ್ಧತಿಯಲ್ಲಿ ಗಣ್ಯರನ್ನು ಆಹ್ವಾನಿಸುವ, ಆ ಮೂಲಕ ದೇವಾಲಯ ಮತ್ತು ಅವರ ನಡುವಿನ ಸಂಬಂಧ ಗಟ್ಟಿಗೊಳಿಸುವ ಉದ್ದೇಶದಿಂದ ನ್ಯಾಯಾಧೀಶರು, ಅಧಿಕಾರಿಗಳು, ಜನಪ್ರತಿನಿಧಿಗಳು, ಹಿರಿಯರಿಗೆ ವೀಳ್ಯ ನೀಡಿ ಆಹ್ವಾನಿಸಲಾಗಿದೆ. ಕೆಲವು ಕಡೆಗಳಲ್ಲಿ ಧರ್ಮದರ್ಶಿ ಮಂಡಳಿಯ ಎಲ್ಲ ಸದಸ್ಯರು ಹೋಗಿದ್ದೇವೆ. ಇನ್ನು ಕೆಲವು ಸಂದರ್ಭದಲ್ಲಿ ಜವಾಬ್ದಾರಿಯನ್ನು ಹಂಚಿಕೊಂಡಿದ್ದೇವೆ’ ಎಂದು ಮಂಡಳಿ ಸದಸ್ಯರಾದ ಲಕ್ಷ್ಮಣ ಕಾನಡೆ, ಶಾಂತಾರಾಮ ಹೆಗಡೆ ಹೇಳಿದರು.

‘ಈ ಬಾರಿ 70ಸಾವಿರದಷ್ಟು ಆಹ್ವಾನ ಪತ್ರಿಕೆ ಸಿದ್ಧಪಡಿಸಲಾಗಿದೆ. ಪ್ರಚಾರಕ್ಕೆ ಸಾಮಾಜಿಕ ಜಾಲತಾಣ, ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಗಳನ್ನು ಬಳಸಿಕೊಳ್ಳಲಾಗುತ್ತಿದೆ. ಜಾತ್ರೆಗೆ ನಾವು ಕರೆಯುವ ಜನರಿಗಿಂತ, ಜಾತ್ರೆಯ ವಿಷಯ ತಿಳಿದು ಬರುವವರೇ ಅಧಿಕ. ಒಂಬತ್ತು ದಿನಗಳಲ್ಲಿ 15 ಲಕ್ಷ ಭಕ್ತರು ಭೇಟಿ ನೀಡುವ ನಿರೀಕ್ಷೆಯಿದೆ’ ಎಂದು ಮಂಡಳಿ ಸದಸ್ಯೆ ಶಶಿಕಲಾ ಚಂದ್ರಾಪಟ್ಟಣ ಹೇಳಿದರು.

ಗಣ್ಯರಿಗೆ ಸಾಂಪ್ರದಾಯಿಕ ವೀಳ್ಯ

ಸಮಾಜದ ಗಣ್ಯರಿಗೆ ಸಾಂಪ್ರದಾಯಿಕವಾಗಿ ವೀಳ್ಯ ನೀಡಿ ಆಹ್ವಾನಿಸಿರುವ ಜತೆಗೆ, ಈ ಬಾರಿ ಎಲ್ಲ ಮಾಧ್ಯಮ ಕ್ಷೇತ್ರದ ಪ್ರಮುಖರಿಗೆ ಆಹ್ವಾನ ಪತ್ರಿಕೆ ತಲುಪಿಸಲಾಗುತ್ತಿದೆ
– ಡಾ.ವೆಂಕಟೇಶ ನಾಯ್ಕ,ಧರ್ಮದರ್ಶಿ ಮಂಡಳಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.