ಗುರುವಾರ , ಸೆಪ್ಟೆಂಬರ್ 16, 2021
29 °C
ದೈಹಿಕ ನ್ಯೂನತೆಗಳನ್ನು ಮೆಟ್ಟಿನಿಂತು ಸಾಧಿಸಿದ ಹೊನ್ನಾವರದ ಸಮರ್ಥ ಜೆ.ರಾವ್

ಹೊನ್ನಾವರದ ಚೆಸ್ ಪ್ರತಿಭೆಗೆ ವಿಶ್ವಮಟ್ಟದ ಪುರಸ್ಕಾರ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಚೆಸ್‌ನಲ್ಲಿ ಅಪರೂಪದ ಸಾಧನೆ ಮಾಡುತ್ತಿರುವ ಹೊನ್ನಾವರದ ಯುವಕ ಸಮರ್ಥ ಜೆ.ರಾವ್, ಅಮೆರಿಕದ ‘ಸೆಲೆಷ್ಟಿಯಲ್ ಮೈಂಡ್ಸ್’ ಅವರ 2021ನೇ ಸಾಲಿನ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ವಿಶ್ವದಾದ್ಯಂತ ಇಬ್ಬರಿಗೆ ಮಾತ್ರ ಈ  ಪ್ರೋತ್ಸಾಹ ಸಿಕ್ಕಿರುವುದು ಗಮನಾರ್ಹವಾಗಿದೆ.

ಅವರೊಂದಿಗೆ ಉಗಾಂಡ ದೇಶದ ವಾಸ್ವ ಬಝೀರ ಶರೀಫ್ ಕೂಡ ಈ ಪುರಸ್ಕಾರ ಪಡೆದಿದ್ದಾರೆ. ಇಬ್ಬರಿಗೂ ತಲಾ 250 ಯು.ಎಸ್ ಡಾಲರ್ (ಸುಮಾರು ₹ 18,500) ಹಾಗೂ ಪ್ರಮಾಣ ಪತ್ರವನ್ನು ಪ್ರದಾನ ಮಾಡಲಾಗಿದೆ.

ಮೈಸೂರಿನವರಾದ, ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌ನಲ್ಲಿ ನೆಲೆಸಿರುವ ಕಾವ್ಯಶ್ರೀ ಮಲ್ಲಣ್ಣ ,‘ಸೆಲೆಷ್ಟಿಯಲ್ ಮೈಂಡ್ಸ್’ ಸಂಘಟನೆಯ ಸಂಸ್ಥಾಪಕರು. ವಿಶ್ವದಾದ್ಯಂತ ದೈಹಿಕ ನ್ಯೂನತೆಗಳನ್ನು ಮೆಟ್ಟಿನಿಂತು ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುವವರಿಗೆ ಪ್ರತಿವರ್ಷ ತಮ್ಮ ಸಂಘಟನೆಯಿಂದ ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಾರೆ.

‘ಸೆರೆಬ್ರಲ್ ಪಾಲ್ಸಿ’ ಸಮಸ್ಯೆಯನ್ನು ಎದುರಿಸುತ್ತಿರುವ ಸಮರ್ಥ, ಚೆಸ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ವಿಜೇತರು. ಹಲವು ದೇಶಗಳಲ್ಲಿ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಗೆಲುವಿನ ನಗೆ ಬೀರಿದ್ದಾರೆ. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ನೂರಾರು ಸ್ಪರ್ಧೆಗಳಲ್ಲಿ ಸಮರ್ಥವಾಗಿ ಪಾಲ್ಗೊಂಡು ಜಯಿಸಿದ ಸಾಧನೆ ಮಾಡಿದ್ದಾರೆ.

20 ವರ್ಷದ ಸಮರ್ಥ, ಪ್ರಸ್ತುತ ಹೊನ್ನಾವರದ ಎಸ್.ಡಿ.ಎಂ ಕಾಲೇಜಿನಲ್ಲಿ ಬಿ.ಕಾಂ ಆರನೇ ಸೆಮಿಸ್ಟರ್‌ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ತಂಗಿಯ ಸಹಕಾರದಿಂದ ಪರೀಕ್ಷೆ ಬರೆದರೂ ಉತ್ತಮ ಶ್ರೇಣಿಯಲ್ಲೇ ಉತ್ತೀರ್ಣರಾಗಿ ಶೈಕ್ಷಣಿವಾಗಿಯೂ ಸಾಧನೆಗೆ ಪಾತ್ರರಾಗುತ್ತಿದ್ದಾರೆ.

ಸಾಧನೆಗೆ ಪ್ರೋತ್ಸಾಹ: ತಮ್ಮ ಮಗ ಪುರಸ್ಕಾರಕ್ಕೆ ಆಯ್ಕೆಯಾದ ಬಗ್ಗೆ ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡ ತಂದೆ ಜನಾರ್ದನ ರಾವ್, ‘ಅಮೆರಿಕದಲ್ಲಿ ಎರಡು ಬಾರಿ ಬೆಳ್ಳಿ ಪದಕ, ಯೂರೋಪ್‌ನಲ್ಲಿ ಮೂರು ಬಾರಿ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾನೆ. ಬ್ಲಿಸ್‌ ಗೇಮ್‌ನಲ್ಲಿ ಬಂಗಾರದ ಪದಕ ಜಯಿಸಿದ್ದಾನೆ. ಅವನ್ನೆಲ್ಲ ಪರಿಗಣಿಸಿ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದಾರೆ. ಸೆಲೆಸ್ಟಿಯಲ್ ಮೈಂಡ್ಸ್ ಅವರು ಮಗನ ಸಾಧನೆಯನ್ನು ಗುರುತಿಸಿ ವಿಶ್ವಮಟ್ಟದಲ್ಲಿ ಪ್ರೋತ್ಸಾಹ ಸಿಕ್ಕಿದಂತಾಗಿದೆ’ ಎಂದು ತಿಳಿಸಿದರು.

‘ಸಮರ್ಥ’ ಸಾಧನೆಗಳು:

* 2017ರ ವಿಶ್ವ ಕಿರಿಯ ಬಾಲಕರ ‘ಬ್ಲಿಟ್ಸ್ ಚೆಸ್’ನಲ್ಲಿ ಚಿನ್ನದ ಪದಕ.

* 2019ರ ವಿಶ್ವ ಕಿರಿಯ ಬಾಲಕರ ‘ಬ್ಲಿಟ್ಸ್ ಚೆಸ್’ನಲ್ಲಿ ಬೆಳ್ಳಿ ಪದಕ.

* 2015, 2016, 2017ರಲ್ಲಿ ಬಾಲಕರ ಜೂನಿಯರ್ ಐ.ಪಿ.ಸಿ.ಎ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕಗಳು.

* 2020ರಲ್ಲಿ ಮೊದಲ ‘ಫಿಡೆ ಆನ್‌ಲೈನ್ ಚೆಸ್ ಒಲಿಂಪಿಯಾಡ್‌’ನಲ್ಲಿ ಭಾರತ ತಂಡದ ಸದಸ್ಯ.

* ಬಿ.ಕಾಂ. ವಿದ್ಯಾರ್ಥಿಯಾಗಿದ್ದು, ಶೇ 85ಕ್ಕಿಂತ ಅಧಿಕ ಅಂಕ ಗಳಿಕೆ.

* ಚೆಸ್ ಗ್ರ್ಯಾಂಡ್‌ ಮಾಸ್ಟರ್ ಹಾಗೂ ವಿಶ್ವ ಚಾಂಪಿಯನ್ ಆಗುವ ಗುರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು