ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸು ಕಾಣುವ ವಿಶ್ವಾಸ ಬೆಳೆಸಿ: ಶಿಕ್ಷಕರಿಗೆ ಜಿಲ್ಲಾಧಿಕಾರಿ ಮನವಿ

ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್
Last Updated 5 ಸೆಪ್ಟೆಂಬರ್ 2021, 12:53 IST
ಅಕ್ಷರ ಗಾತ್ರ

ಕಾರವಾರ: ‘ಗ್ರಾಮೀಣ ಮಕ್ಕಳಿಗೆ ಹಳ್ಳಿಯಲ್ಲಿ, ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದೇವೆ ಎಂಬ ಕೀಳರಿಮೆ ಇರಬಾರದು. ಬದುಕಿನ ನಿಜವಾದ ಕಷ್ಟ, ಸುಖಗಳನ್ನು ತಿಳಿದು ಮುಂದೆ ಬರುವವರು ಅವರು. ಜೀವನದಲ್ಲಿ ಏನಾದರೂ ಸಾಧಿಸುವಂತೆ ದೊಡ್ಡ ಮಟ್ಟದಲ್ಲಿ ಕನಸು ಕಾಣಬಹುದು ಎಂಬ ವಿಶ್ವಾಸವನ್ನು ಶಿಕ್ಷಕರು ಮೂಡಿಸಬೇಕು’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ನಗರದಲ್ಲಿ ಭಾನುವಾರ ಹಮ್ಮಿಕೊಳ್ಳಲಾದ ‘ಶಿಕ್ಷಕರ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜೀವನದಲ್ಲಿ ತಂದೆ, ತಾಯಿ ಅಥವಾ ಮತ್ಯಾರೇ ಆದರೂ ಅವರು ಯಾವುದೋ ಕ್ಷಣದಲ್ಲಿ ನಮಗೆ ಗುರುವಾಗಿರುತ್ತಾರೆ. ಅದಕ್ಕೇ ಅಷ್ಟೊಂದು ಮಹತ್ವ ಇರುವಾಗ, ದಿನದ 24 ಗಂಟೆಗಳಲ್ಲೂ ಗುರುಗಳಾಗಿ ಇರುವುದು ಸುಲಭದ ಮಾತಲ್ಲ. ಚಿಂತನೆಯನ್ನು ಮಾಡುವ ಶಕ್ತಿಯನ್ನು ಕೊಡುವವರೇ ನಿಜವಾದ ಗುರುಗಳು ಎಂದು ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಹೇಳಿದ್ದರು’ ಎಂದು ಸ್ಮರಿಸಿದರು.

‘ಕೋವಿಡ್ ಸಂದರ್ಭದಲ್ಲಿ ಆಗಿರುವ ಬದಲಾವಣೆಗಳನ್ನು ಶಿಕ್ಷಕರು ಸ್ವೀಕರಿಸಿದ್ದೀರಿ. ಆ ಮೂಲಕ ಮಕ್ಕಳಿಗೆ ಶಿಕ್ಷಣ ಕೊಟ್ಟಿದ್ದೀರಿ. ಮಕ್ಕಳನ್ನು ಜೊತೆಗಿಟ್ಟುಕೊಂಡು ನೆಮ್ಮದಿಯಿಂದ ಇರುವುದು ಎಷ್ಟು ಕಷ್ಟದ ಕೆಲಸ ಎಂಬುದು ಪಾಲಕರಿಗೆ ಈಗ ಗೊತ್ತಾಗಿರಬಹುದು. ಮನೆಯಲ್ಲಿ ಒಂದಿಬ್ಬರನ್ನೇ ದಿನಪೂರ್ತಿ ನೋಡಿಕೊಳ್ಳಲು ಕಷ್ಟವಾಗುತ್ತದೆ. ಅಂಥದ್ದರಲ್ಲಿ 30– 40 ಮಕ್ಕಳನ್ನು ನೋಡಿಕೊಳ್ಳುವುದು ಸುಲಭವಲ್ಲ’ ಎಂದು ನಗುತ್ತ ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ, ‘ಶಿಕ್ಷಕರು ಕೊಡುವ ಆತ್ಮವಿಶ್ವಾಸ ಅದ್ಭುತಗಳಿಗೆ ಕಾರಣವಾಗುತ್ತದೆ. ಗಾಳಿಪಟ ಮೇಲೆ ಹಾರುತ್ತಿರುವಾಗ ದಾರ ಕಾಣುವುದಿಲ್ಲ. ವಿದ್ಯಾರ್ಥಿ ಗಾಳಿಪಟವಾದರೆ ಅದರ ದಾರ ಶಿಕ್ಷಕರಾಗಿರುತ್ತಾರೆ. ಶಿಕ್ಷಕರು ಮಾಡಿದ ಕೆಲಸಗಳು ಫಲಿತಾಂಶ ನೀಡಲು ಶುರು ಮಾಡಿದಾಗ ಬೆರಗಾಗುತ್ತೇವೆ’ ಎಂದರು.

ಶೈಕ್ಷಣಿಕ ಜಿಲ್ಲಾ ಮಟ್ಟದ 15 ಶಿಕ್ಷಕರಿಗೆ ‘ಉತ್ತಮ ಶಿಕ್ಷಕ’ ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕರಿಸಲಾಯಿತು. ಸನ್ಮಾನಿತರ ಪರವಾಗಿ ಶಿಕ್ಷಕರಾದ ಡಿ.ಜೆ.ಶಾಸ್ತ್ರಿ ಹಾಗೂ ಯಾಸ್ಮೀನ್ ಬಾನು ಮಾತನಾಡಿದರು.

ಶಿಕ್ಷಣ ಇಲಾಖೆ ಉಪ ನಿರ್ದೇಶಕ ಹರೀಶ ಗಾಂವ್ಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ, ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಆನಂದ ಕುಮಾರ ಬಾಲಪ್ಪನವರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT