ಗುರುವಾರ , ಅಕ್ಟೋಬರ್ 22, 2020
22 °C
ಪೋರನ ಪ್ರತಿಭೆ ದಾಖಲೆಯ ಪುಟಕ್ಕೆ!

ಕುಮಟಾದ ನೆಲ್ಲಿಕೇರಿಯ ಬಾಲಕನ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲು

ಸದಾಶಿವ ಎಂಎ.ಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಈ ಪೋರನಿಗೆ ಮೂರೂವರೆ ವರ್ಷ. ತನ್ನ ಅಸಾಧಾರಣ ಜ್ಞಾಪಕ ಶಕ್ತಿಯಿಂದ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ.

ಕುಮಟಾ ತಾಲ್ಲೂಕಿನ ನೆಲ್ಲಿಕೇರಿಯ ನಿವಾಸಿಗಳಾದ ಅನಿತಾ ಸಂತೋಷ ನಾಯ್ಕ ಹಾಗೂ ಸಂತೋಷ ಕೇಶವ ನಾಯ್ಕ ದಂಪತಿಯ ಪುತ್ರ ಸಂಪ್ರೀತ್ ಈ ಕಾರಣಕ್ಕಾಗಿ ಗಮನ ಸೆಳೆಯುತ್ತಿದ್ದಾನೆ.

ಪುಟಾಣಿಯು 30 ದೇಶಗಳ, 29 ರಾಜ್ಯಗಳ ರಾಜಧಾನಿಗಳ ಹೆಸರು ಹೇಳಬಲ್ಲ. ನಮ್ಮ ರಾಷ್ಟ್ರಗೀತೆಯನ್ನು ಹಾಡಬಲ್ಲ. ಕನ್ನಡ ಮತ್ತು ಇಂಗ್ಲಿಷ್ ಅಕ್ಷರಮಾಲೆಗಳನ್ನು ಓದುವುದು, ಬರೆಯುವುದು ಕಲಿತಿದ್ದಾನೆ. ಹಿಂದಿ ಅಕ್ಷರಗಳನ್ನು ಸರಾಗವಾಗಿ ಓದುತ್ತನೆ.  ಬಣ್ಣಗಳ ಹೆಸರು, ಪ್ರಾಣಿ, ಪಕ್ಷಿ, ಹೂಗಳು, ವಾಹನಗಳ ಬಗ್ಗೆ ಕನಿಷ್ಠವೆಂದರೂ ತಲಾ 25 ಹೆಸರುಗಳನ್ನು ಹೇಳುತ್ತಾನೆ.

ಕನ್ನಡ, ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಒಂದರಿಂದ 100ರತನಕ ಹೇಳಬಲ್ಲ. ಜ್ಞಾನಪೀಠ ಪುರಸ್ಕೃತರ ಹೆಸರು, ಕವಿಗಳ ಬಿರುದು, ಕರೆನ್ಸಿ, ಕನ್ನಡದ 100ಕ್ಕೂ ಅಧಿಕ ಶಬ್ದಗಳನ್ನು ಇಂಗ್ಲಿಷ್‌ನಲ್ಲಿ ಉಚ್ಚರಿಸಲು ಕಲಿತಿದ್ದಾನೆ. ಮಾನವ ಶರೀರದ ಭಾಗಗಳನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಹೇಳುತ್ತಾನೆ. 118 ಪರಮಾಣು ಲೆಕ್ಕಗಳ ಪೈಕಿ 30ನ್ನು ತಿಳಿದಿದ್ದಾನೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ 30 ಮಕ್ಕಳ ಪದ್ಯಗಳನ್ನು ಹಾಡುತ್ತಾನೆ. ಹೀಗೆ ಹತ್ತಾರು ಚಟುವಟಿಕೆಗಳನ್ನು ಚುರುಕಾಗಿ ಮಾಡಬಲ್ಲ ಅವನ ಪ್ರತಿಭೆಯನ್ನು ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನವರು ಗುರುತಿಸಿದ್ದಾರೆ.

ತಾಯಿಯೇ ಮೊದಲ ಗುರು: ಅಸಾಧಾರಣ ಪ್ರತಿಭೆ ಸಂಪ್ರೀತ್‌ಗೂ ತಾಯಿಯೇ ಮೊದಲ ಗುರು. ಬಿ.ಇಡಿ ಪದವೀಧರೆ ಅನಿತಾ ಅವರು ಮಗನಿಗೆ ನಿತ್ಯವೂ ಮನೆಯಲ್ಲಿ ಒಂದಷ್ಟು ತರಬೇತಿ ನೀಡುತ್ತಿದ್ದಾರೆ.

‘ನಾನು ಹಿಂದಿನ ದಿನ ಹೇಳಿದ್ದನ್ನು ಆತ ಮರೆಯದೇ ಈ ದಿನ ಪುನರುಚ್ಚರಿಸುತ್ತಾನೆ. ಮಕ್ಕಳ ಸ್ಮರಣಶಕ್ತಿ, ಪ್ರತಿಭೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನವರು ಗುರುತಿಸುತ್ತಾರೆ ಎಂದು ಯುಟ್ಯೂಬ್‌ನಲ್ಲಿ ನೋಡಿದ್ದೆ. ಈ ಬಗ್ಗೆ ಇಂಟರ್‌ನೆಟ್‌ನಲ್ಲಿ ಹುಡುಕಿ, ಅವರ ವೆಬ್‌ಸೈಟ್‌ಗೆ ಅರ್ಜಿ ಸಲ್ಲಿಸಿದ್ದೆ. ಸಂಸ್ಥೆಯವರ ಸೂಚನೆಯಂತೆ ಮಗನ ವಿಡಿಯೊಗಳನ್ನು ಅಪ್‌ಲೋಡ್ ಮಾಡಿದ್ದೆ. ಅವನ ಪ್ರತಿಭೆಯನ್ನು ಗುರುತಿಸಿ, ಪ್ರಮಾಣಪತ್ರ, ಪದಕ, ಬ್ಯಾಚ್, ಪೆನ್ ಹಾಗೂ ಗುರುತುಪತ್ರಗಳನ್ನು ಕಳುಹಿಸಿಕೊಟ್ಟಿದ್ದಾರೆ’ ಎಂದು ಅನಿತಾ ಹೆಮ್ಮೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು