ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಪ್ರವಾಸಿ ತಾಣಗಳ ಸ್ವಚ್ಛತೆಯೇ ಆದ್ಯತೆ

ಜುಲೈ 5ರಿಂದ ತಾಣಗಳಿಗೆ ಮುಕ್ತ ಪ್ರವೇಶ: ಕೋವಿಡ್ ನಿಯಮ ಪಾಲನೆಗೆ ಸೂಚನೆ
Last Updated 30 ಜೂನ್ 2021, 19:30 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ ಮುಖ್ಯ ಆರ್ಥಿಕ ಚಟುವಟಿಕೆಗಳಲ್ಲಿ ಪ್ರಮುಖವಾಗಿರುವ ಪ್ರವಾಸೋದ್ಯಮವನ್ನು ಪುನಃ ಆರಂಭಿಸಲು ಸಿದ್ಧತೆಗಳು ಚುರುಕಾಗಿವೆ. ಪ್ರವಾಸಿ ತಾಣಗಳುಜುಲೈ 5ರಿಂದ ಪ್ರವಾಸಿಗರನ್ನು ಸ್ವಾಗತಿಸಲಿವೆ.

ಕೋವಿಡ್ ನಿಯಂತ್ರಣದ ಭಾಗವಾಗಿ ಎರಡನೇ ಬಾರಿಗೆ ಲಾಕ್‌ಡೌನ್ ಜಾರಿಯಾದ ಬಳಿಕ ಜಿಲ್ಲೆಯಲ್ಲಿ ಆತಿಥ್ಯ ವಲಯವು ಸಂಪೂರ್ಣವಾಗಿ ಸ್ಥಗಿತವಾಗಿತ್ತು. ಮುಂಗಾರು ಆರಂಭಕ್ಕೂ ಕೆಲವು ದಿನಗಳ ಮೊದಲಿನವರೆಗೆ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ಜನರಿಂದ ತುಂಬಿರುತ್ತಿದ್ದವು. ಇದರಿಂದ ರೆಸಾರ್ಟ್‌ಗಳು, ಹೋಂ ಸ್ಟೇಗಳು, ಹೋಟೆಲ್‌ಗಳಿಗೆ ಉತ್ತಮ ಆದಾಯ ಬರುತ್ತಿತ್ತು. ಆದರೆ, ಕೋವಿಡ್‌ನಿಂದಾಗಿ ಒಂದೂವರೆ ವರ್ಷದಿಂದ ಪ್ರವಾಸೋದ್ಯಮವು ಕಳೆಗುಂದಿತ್ತು.

ರಾಜ್ಯ ಸರ್ಕಾರವು ಕೋವಿಡ್ ಪಾಸಿಟಿವಿಟಿ ದರವು ಶೇ 5ಕ್ಕಿಂತ ಕಡಿಮೆ ಬರುವ ಜಿಲ್ಲೆಗಳಲ್ಲಿ ಅನ್‌ಲಾಕ್ ಪ್ರಕ್ರಿಯೆ ಆರಂಭಿಸಿದ ಬಳಿಕ ಉತ್ತರ ಕನ್ನಡ ಪ್ರವಾಸೋದ್ಯಮ ವಲಯವೂ ನಿಟ್ಟುಸಿರು ಬಿಟ್ಟಿತು. ಈ ನಡುವೆ, ಜುಲೈ 1ರಿಂದ ಅವಕಾಶ ನೀಡುವುದಾಗಿ ಸರ್ಕಾರ ತಿಳಿಸಿದೆ. ಆದರೆ, ಜಿಲ್ಲೆಯ ಪ್ರವಾಸಿ ತಾಣಗಳ ನಿರ್ವಹಣೆ ಹಾಗೂ ವಾರಾಂತ್ಯದ ಲಾಕ್‌ಡೌನ್ ಇದ್ದು, ಜುಲೈ 5ರಿಂದ ಪ್ರವಾಸಿಗರು ಭೇಟಿ ನೀಡಬಹುದು ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ರಾಕ್‌ ಗಾರ್ಡನ್, ಯುದ್ಧ ನೌಕೆ ವಸ್ತು ಸಂಗ್ರಹಾಲಯದ ಆವರಣಗಳ ನಿರ್ವಹಣೆ ಆಗಬೇಕಿದೆ. ರಾಕ್‌ಗಾರ್ಡನ್‌ನಲ್ಲಿ ಈಚೆಗೆ ಬೀಸಿದ ‘ತೌತೆ’ ಚಂಡಮಾರುತದಿಂದ ಮರವೊಂದು ಗೊಂಡ ಸಮುದಾಯದ ಗುಡಿಸಲಿನ ಮೇಲೆ ಬಿದ್ದು ಹಾನಿಯಾಗಿದೆ. ಉದ್ಯಾನದ ಆವರಣದಲ್ಲಿ ಕಳೆ, ಕುರುಚಲು ಬೆಳೆದಿವೆ. ದಾರಿಗೆ ಹಾಸಿರುವ ಕಲ್ಲುಗಳ ಮೇಲೆ ಪಾಚಿ ಬೆಳೆದಿದ್ದು, ಜಾರುತ್ತಿವೆ.

ಜೊಯಿಡಾ, ದಾಂಡೇಲಿ ಭಾಗದಲ್ಲಿ ರೆಸಾರ್ಟ್‌ಗಳಿಗೂ ಪ್ರವಾಸಿಗರ ಬೇಡಿಕೆ ಹೆಚ್ಚುತ್ತಿದೆ. ಬಹುತೇಕ ಎಲ್ಲ ಕೊಠಡಿಗಳೂ ಮುಂಗಡ ಬುಕ್ಕಿಂಗ್ ಆಗಿವೆ. ಮಲೆನಾಡಿನ ಹತ್ತಾರು ಜಲಪಾತಗಳನ್ನು ನೋಡಲು ಕಾತರರಾಗಿದ್ದಾರೆ. ಕರಾವಳಿಯ ಗೋಕರ್ಣ, ಮುರ್ಡೇಶ್ವರ ಕಡಲತೀರಗಳತ್ತ ಕೂಡ ಪ್ರವಾಸಿಗರು ಬರಲು ಉತ್ಸುಕರಾಗಿದ್ದಾರೆ. ಆದರೆ, ಮಳೆ ಜೋರಾದರೆ ಎಚ್ಚರಿಕೆ ಅತ್ಯಗತ್ಯವಾಗಲಿದೆ.

ನೆಗೆಟಿವ್ ವರದಿ ಕಡ್ಡಾಯವಲ್ಲ: ‘ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ಪ್ರವಾಸಿ ತಾಣಗಳನ್ನು ಜುಲೈ 5ರಿಂದ ತೆರೆಯಲು ಸೂಚನೆ ನೀಡಲಾಗಿದೆ. ಎಲ್ಲ ಪ್ರವಾಸಿ ತಾಣಗಳನ್ನು ಸ್ವಚ್ಛಗೊಳಿಸಲು ತಿಳಿಸಲಾಗಿದೆ’ ಎಂದು ಪ್ರವಾಸೋದ್ಯಮ ಇಲಾಖೆ ಪ್ರಭಾರ ಉಪ ನಿರ್ದೇಶಕ ಪುರುಷೋತ್ತಮ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಪ್ರವಾಸಿಗರು ಕೋವಿಡ್ ನೆಗೆಟಿವ್ ವರದಿ ತರುವುದು ಕಡ್ಡಾವೇನಲ್ಲ. ಹೋಟೆಲ್‌ಗಳು, ಜಂಗಲ್‌ಲಾಡ್ಜ್‌ಗಳಿಗೂ ರೋಗ ಲಕ್ಷಣ ಇಲ್ಲದ ಎಲ್ಲರಿಗೂ ಮುಕ್ತ ಪ್ರವೇಶಾವಕಾಶ ನೀಡಲಾಗಿದೆ. ಎಲ್ಲೆಲ್ಲಿ ಪ್ರವೇಶ ಶುಲ್ಕ ಮತ್ತು ಪ್ರವೇಶ ದ್ವಾರಗಳಿವೆಯೋ ಅಲ್ಲಿ ಥರ್ಮೊ ಮೀಟರ್, ಸ್ಯಾನಿಟೈಸರ್ ಬಳಕೆಯಾಗಲಿದೆ’ ಎಂದು ಹೇಳಿದ್ದಾರೆ.

*
ಮಾರ್ಚ್‌ವರೆಗೂ ಪ್ರವಾಸಿಗರು ಹೋಟೆಲ್ ಕೊಠಡಿಗಳನ್ನು ಮುಂಗಡ ಕಾಯ್ದಿಟ್ಟಿದ್ದರು. ಆದರೆ, ಅನಿವಾರ್ಯವಾಗಿ ಲಾಕ್‌ಡೌನ್‌ನಿಂದ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿತ್ತು.
– ಪುರುಷೋತ್ತಮ, ಉಪ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT