ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ ಮಾರಿಕಾಂಬಾ ಜಾತ್ರೆ: ರಥ ಕಟ್ಟಲು ತಾರೆ ಮರಕ್ಕೆ ಕಚ್ಚು

ಸಂಪ್ರದಾಯ ಮುಂದುವರಿಸಿದ ಆಡಳಿತ; ಮರ ಬಲಿ ನಿಲ್ಲಬಹುದೆಂದು ನಿರೀಕ್ಷಿಸಿದವರಿಗೆ ಬೇಸರ
Last Updated 21 ಫೆಬ್ರುವರಿ 2020, 13:21 IST
ಅಕ್ಷರ ಗಾತ್ರ
ADVERTISEMENT
""

ಶಿರಸಿ: ಮಾರ್ಚ್ 3ರಿಂದ ಆರಂಭವಾಗಲಿರುವ ಮಾರಿಕಾಂಬಾ ಜಾತ್ರೆಯ ಪೂರ್ವವಿಧಿಯಾಗಿ ಹಸಿರು ಮರಕ್ಕೆ ಕಚ್ಚು ಹಾಕುವ ಕಾರ್ಯ ಶುಕ್ರವಾರ ನಡೆಯಿತು. ದೇವಸ್ಥಾನದ ಬಾಬುದಾರರು, ಅರಣ್ಯ ಇಲಾಖೆ ಅನುಮತಿ ಪಡೆದು, ಮಾಲ್ಕಿ ಜಮೀನಿನಲ್ಲಿರುವ ತಾರೆ ಮರಕ್ಕೆ ಕಚ್ಚು ಹಾಕಿದರು.

ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯ ಸಂದರ್ಭದಲ್ಲಿ ದೇವಿಯ ರಥ ಕಟ್ಟಲು ಕಾಡಿನ ಮರ ಕಡಿದು ತಂದು ರಥ ಕಟ್ಟಲಾಗುತ್ತಿತ್ತು. ಆದರೆ, 2018ರಲ್ಲಿ ನಡೆದ ಜಾತ್ರೆಯಲ್ಲಿ, ತಾಲ್ಲೂಕಿನ ಬಿಕನಳ್ಳಿಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅನಧಿಕೃತ ಪ್ರವೇಶ ಮಾಡಿ ತಾರೆ, ನಂದಿ, ಮತ್ತಿ, ಕಿಂದಳ ಮರಗಳನ್ನು ಕಡಿದು ನಾಟಾ ಹಾಗೂ ಜಲಾವು ಮಾಡಿದ ಸಂಬಂಧ ಶಿರಸಿ ವಲಯ ಅರಣ್ಯಾಧಿಕಾರಿ, ದೇವಾಲಯದ ಧರ್ಮದರ್ಶಿ ಮಂಡಳಿಯ ಮೇಲೆ ಪ್ರಕರಣ ದಾಖಲಿಸಿ, ದಂಡ ವಿಧಿಸಿದ್ದರು. ಅಲ್ಲದೇ, ಇನ್ನು ಮುಂದೆ ಜಾತ್ರೆ ಅಥವಾ ಇನ್ನಾವುದೇ ಸಂಪ್ರದಾಯದ ಹೆಸರಿನಲ್ಲಿ ಕಾಯ್ದಿಟ್ಟ ಅರಣ್ಯದಲ್ಲಿ ಅನಧಿಕೃತ ಪ್ರವೇಶ ಮಾಡಬಾರದು ಎಂದು ಇಲಾಖೆ ಎಚ್ಚರಿಕೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ದೇವಾಲಯದ ಆಡಳಿತಾಧಿಕಾರಿಯಾಗಿರುವ ಜಿಲ್ಲಾ ನ್ಯಾಯಾಧೀಶರು, ಕಾನೂನಿಗೆ ವ್ಯತಿರಿಕ್ತವಾಗಿ ಮರ ಕಡಿಯದಂತೆ ಆದೇಶಿಸಿದ್ದರು. ಈ ಸಂಬಂಧ ದೇವಾಲಯದ ಆಂತರಿಕ ವಲಯದಲ್ಲಿ ಹಲವು ಸುತ್ತಿನ ಮಾತುಕತೆ ನಡೆದಿತ್ತು. ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಕೂಡ ಈ ವಿಷಯ ಪ್ರಸ್ತಾಪವಾಗಿತ್ತು. ಕಾನೂನು ಮೀರಿ, ಕಾಯ್ದಿಟ್ಟ ಅರಣ್ಯದ ಮರ ಕಡಿಯಲು ಅವಕಾಶ ನೀಡುವುದಿಲ್ಲವೆಂದು ಉಪವಿಭಾಗಾಧಿಕಾರಿ ಸಭೆಯಲ್ಲಿ ಸ್ಪಷ್ಟಪಡಿಸಿದ್ದರು.

ಇದೇ ಕಾರಣಕ್ಕೆ ಮಾರಿಕಾಂಬಾ ದೇವಾಲಯವು ಈ ವರ್ಷದ ಜಾತ್ರೆಯ ಕಾರ್ಯಕ್ರಮ ಪಟ್ಟಿಯಲ್ಲಿ ‘ಮರಕ್ಕೆ ಕಚ್ಚು ಹಾಕುವುದು’ ಎನ್ನುವ ಪದ ಬಳಕೆಯ ಬದಲಾಗಿ, ‘ರಥದ ಬಗ್ಗೆ ಪೂಜಾರಿಯವರಿಂದ ವೃಕ್ಷಪೂಜೆ’ ಎಂದು ಮುದ್ರಿಸಿತ್ತು.

‘ಆಡಳಿತ ಮಂಡಳಿ ಮತ್ತು ಬಾಬುದಾರರ ನಡುವಿನ ಸಂಘರ್ಷಕ್ಕೆ ಕಾರಣವಾಗಿದ್ದ ಮರ ಕಡಿಯುವ ವಿಚಾರ ಒಂದು ಹಂತದಲ್ಲಿ ಸಕಾರಾತ್ಮಕ ಬೆಳವಣಿಗೆಯಾಗಿದೆ. ಪ್ರತಿ ಜಾತ್ರೆಯಲ್ಲಿ ಐದು ಮರಗಳನ್ನು ಕಡಿಯುತ್ತಿದ್ದ ಭಕ್ತರು, ಈ ಬಾರಿ ಒಂದೇ ಮರ ಕಡಿದಿದ್ದಾರೆ. ಕೋಣನ ಬಲಿ ನಿಲ್ಲಿಸಿ ಮಾದರಿಯಾಗಿರುವ ಶಿರಸಿ ಮಾರಿಜಾತ್ರೆ, ಮುಂದಿನ ವರ್ಷಗಳಲ್ಲಿ ಮರ ಬಲಿಯನ್ನು ಸಂಪೂರ್ಣವಾಗಿ ನಿಲ್ಲಿಸಿ, ಹಸಿರು ಉಳಿಸುವ ಮೂಲಕ ಮಾದರಿಯಾಗಲಿ’ ಎಂದು ನಗರ ನಿವಾಸಿ ಆರ್.ಎಸ್.ರಾಮಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

‘ಜಿಲ್ಲಾ ನ್ಯಾಯಾಧೀಶರು ಮರ ಅಗತ್ಯವಿದ್ದರೆ ಕಾನೂನು ವ್ಯಾಪ್ತಿಯಲ್ಲಿ ಲಭ್ಯ ಮೂಲಗಳಿಂದ ಪಡೆಯಬಹುದು ಎಂದಿದ್ದರು. ಪ್ರಸ್ತುತ ಕಾನೂನಾತ್ಮಕವಾಗಿ ಸಂಪ್ರದಾಯವನ್ನು ಉಳಿಸಿಕೊಂಡು ಹೋಗಿರುವುದನ್ನು ಸ್ವಾಗತಿಸುತ್ತೇನೆ’ ಎಂದುದೇವಾಲಯದ ಧರ್ಮದರ್ಶಿ ಮಂಡಳಿ ಅಧ್ಯಕ್ಷವೆಂಕಟೇಶ ನಾಯ್ಕ ಪ್ರತಿಕ್ರಿಯಿಸಿದರು.

ಮರಕ್ಕೆ ಪೂಜೆ ಸಲ್ಲಿಸಿದ ನಂತರ ಬಾಬುದಾರರು ಅದಕ್ಕೆ ಕಚ್ಚು ಹಾಕಿದರು.

ರಥ ಕಟ್ಟಲು ಮರ ಬಳಕೆ:ದೇವಿ ಆಸೀನಳಾಗುವ ರಥದ ಮೇಲಿನ ಹಲಗೆ ಹಾಗೂ ರಥದ ಮೂಕದ ಮರ (ರಥ ನಿಯಂತ್ರಿಸುವ ಸಾಧನ), ಸನ್ನೆ ತಯಾರಿಕೆಗೆ ಕಾಡಿನಿಂದ ತಂದ ಮರದ ತುಂಡುಗಳನ್ನು ಬಳಕೆ ಮಾಡುತ್ತಾರೆ. ಶುಕ್ರವಾರ ಸಂಪ್ರದಾಯದಂತೆ, ಬಿಕನಳ್ಳಿಯಲ್ಲಿ ಮರಕ್ಕೆ ಪೂಜೆ ಸಲ್ಲಿಸಿ, ಕಚ್ಚು ಹಾಕಲಾಯಿತು. ದೇವಾಲಯದ ಬಾಬುದಾರ ಪ್ರಮುಖ ಜಗದೀಶ ಗೌಡ, ಧರ್ಮದರ್ಶಿ ಮಂಡಳಿ ಸದಸ್ಯರು, ಬಾಬುದಾರರು, ಸಹಾಯಕರು ಇದ್ದರು. ಈ ಮರದ ತುಂಡುಗಳನ್ನು ಅಲಂಕೃತ ಬಂಡಿಯಲ್ಲಿ ಫೆ.25ಕ್ಕೆ ದೇವಾಲಯದ ಮುಂಭಾಗಕ್ಕೆ ತಂದು ಪೂಜಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT