ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಮುಗ್ಗರಿಸಿದ ‘ಯುಐಡಿ ಕಾರ್ಡ್ ಪಂಚಿಂಗ್’

ಜಿಲ್ಲೆಯಲ್ಲಿ ಶೇ 26ರಷ್ಟು ಜಾನುವಾರುಗಳಿಗೆ ಕಾರ್ಡ್ ಅಳವಡಿಕೆ
Last Updated 19 ಜುಲೈ 2020, 19:30 IST
ಅಕ್ಷರ ಗಾತ್ರ

ಶಿರಸಿ: ಮೂರು ವರ್ಷಗಳ ಹಿಂದೆ ಚಾಲನೆ ನೀಡಿದ್ದ ಜಾನುವಾರುಗಳಿಗೆ ಗುರುತಿನ ಕಾರ್ಡ್‌ ಹಾಕುವ ಯೋಜನೆಯು ವಿವಿಧ ಕಾರಣಗಳಿಂದಾಗಿ ಜಿಲ್ಲೆಯಲ್ಲಿ ಮುಗ್ಗರಿಸಿದೆ. ಇದು, ಸರ್ಕಾರದ ಬೇರೆ ಬೇರೆ ಸೌಲಭ್ಯ ಪಡೆಯಲು ಹೈನುಗಾರರಿಗೆ ತೊಡಕಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಇನಾಫ್ (ಇನ್ಫಾರ್ಮೇಷನ್ ನೆಟ್‌ವರ್ಕ್‌ ಆನ್‌ ಎನಿಮಲ್‌ ಪ್ರೊಡಕ್ಟಿವಿಟಿ ಆ್ಯಂಡ್‌ ಹೆಲ್ತ್‌) ಕಾರ್ಯಕ್ರಮದಡಿ ಜಾನುವಾರುಗಳ ಕಿವಿಗೆ ವಿಶಿಷ್ಟ ಗುರುತಿನ ಕಾರ್ಡ್‌ (ಯುಐಡಿ) ಹಾಕುವ ಮೂಲಕ ಜಾನುವಾರು ಗಣತಿ ಪ್ರಾರಂಭಿಸಿದ್ದವು. ಗಣತಿಯಲ್ಲಿ ಸೇರಿದ ಜಾನುವಾರಿಗೆ 12 ಅಂಕೆಗಳು ಹಾಗೂ ಬಾರ್ ಕೋಡ್ ಇರುವ ಕಾರ್ಡ್‌ ಅನ್ನು ಅಪ್ಲಿಕೇಟರ್‌ ಮಷಿನ್‌ ಮೂಲಕ ಕಿವಿಗೆ ಅಳವಡಿಸಲಾಗುತ್ತದೆ. ಇದರಲ್ಲಿ ಹಸುವಿನ ಮಾಲೀಕರು, ಅದರ ವಯಸ್ಸು, ಕರುಗಳು, ಕರು ಹಾಕಿದ ದಿನಾಂಕ, ಕೃತಕ ಗರ್ಭಧಾರಣೆ ಸಹಿತ ಎಲ್ಲ ವಿವರಗಳು ಇರುತ್ತವೆ.

ಜಿಲ್ಲೆಯಲ್ಲಿ 4.19 ಲಕ್ಷ ಜಾನುವಾರುಗಳಲ್ಲಿ ಇನ್ನೂ ಮೂರು ಲಕ್ಷಕ್ಕೂ ಅಧಿಕ ಜಾನುವಾರುಗಳಿಗೆ ಬಿಲ್ಲೆ ಅಳವಡಿಸುವ ಕಾರ್ಯ ಆಗಬೇಕಾಗಿದೆ. ಈವರೆಗೆ 1.30 ಲಕ್ಷ ಕಾರ್ಡ್‌ಗಳು ಪೂರೈಕೆಯಾಗಿವೆ.

‘ಜಾನುವಾರುಗಳ ಕಿವಿಗೆ ಈ ಕಾರ್ಡ್ ಅಳವಡಿಸುವುದಕ್ಕೆ ಅನೇಕ ಕಡೆಗಳಲ್ಲಿ ಮಾಲೀಕರು ವಿರೋಧ ವ್ಯಕ್ತಪಡಿಸುತ್ತಾರೆ. ಹಲವರಿಗೆ ಇದರ ಪ್ರಯೋಜನದ ಬಗ್ಗೆ ಇನ್ನೂ ಹೆಚ್ಚು ಅರಿವು ದೊರೆತಿಲ್ಲ. ಪ್ರತಿರೋಧ ಮಾಡುವ ಮಲೆನಾಡು ಗಿಡ್ಡದಂತಹ ದನಗಳ ಕಿವಿಗೆ ಕಾರ್ಡ್ ಅಳವಡಿಸುವುದು ಸಹ ಸವಾಲಿನ ಕೆಲಸ. ಅಲ್ಲದೇ, ಇಲಾಖೆಯಲ್ಲಿ ಶೇ 50ರಷ್ಟು ಸಿಬ್ಬಂದಿ ಕೊರತೆಯಿದೆ. ಇವೆಲ್ಲ ಕಾರಣಗಳು ಯೋಜನೆ ಅನುಷ್ಠಾನಕ್ಕೆ ವಿಳಂಬವಾಗಿದೆ’ ಎನ್ನುತ್ತಾರೆ ಇಲಾಖೆಯ ಪ್ರಮುಖರೊಬ್ಬರು.

‘ಬಾರ್‌ ಕೋಡ್ ಇರುವ ಪಾಲಿ ಯುರೇಥಿನ್ ಗುರುತಿನ ಚೀಟಿಯನ್ನು ಜಾನುವಾರು ಕಿವಿಗೆ ಹಾಕುವ ಬದಲು ಮಾಲೀಕರಿಗೆ ಕೈಗೆ ಕೊಡುವಂತಾಗಬೇಕು. ಕಿವಿಗೆ ಪಂಚ್ ಮಾಡುವಾಗ ಗಾಯವಾಗುತ್ತದೆ. ಕೆಲವೊಂದು ಜಾನುವಾರುಗಳಿಗೆ ಈ ಗಾಯ ಉಲ್ಬಣಿಸಿ, ಮತ್ತೆ ಆಸ್ಪತ್ರೆಗೆ ಅಲೆದಾಡುವ ಸಂದರ್ಭ ಬರುತ್ತದೆ. ಹೀಗಾಗಿ, ಅದನ್ನು ಕಿವಿಗೆ ಅಳವಡಿಸಬಾರದು’ ಎನ್ನುತ್ತಾರೆ ಜಾನುವಾರು ಮಾಲೀಕ ಕೇಶವ ಹೆಗಡೆ.

ಇಲಾಖೆಯಲ್ಲಿ ಲಭ್ಯವಿರುವ ಸಿಬ್ಬಂದಿಯನ್ನೇ ಬಳಸಿಕೊಂಡು ಯೋಜನೆ ಅನುಷ್ಠಾನಕ್ಕೆ ವೇಗ ನೀಡಲಾಗುವುದು. ಇದಕ್ಕೆ ಜಾನುವಾರು ಮಾಲೀಕರ ಸಹಕಾರ ಬೇಕು ಎಂದು ಪಶುಸಂಗೋಪನಾ ಇಲಾಖೆಯ ಪ್ರಭಾರಿ ಉಪನಿರ್ದೇಶಕ ನಂದಕುಮಾರ್ ಪೈ ಪ್ರತಿಕ್ರಿಯಿಸಿದರು.

ಯಾಕಾಗಿ ಈ ಕಾರ್ಡ್‌ ?

ದೇಶದಲ್ಲಿರುವ ಎಲ್ಲ ಜಾನುವಾರುಗಳ ವಿವರ ಆನ್‌ಲೈನ್‌ನಲ್ಲಿ ನೋಂದಣಿಯಾಗುತ್ತದೆ. ಇದರಿಂದ ಕಳ್ಳತನವಾಗಿರುವ ಜಾನುವಾರನ್ನು ಸುಲಭದಲ್ಲಿ ಹುಡುಕಬಹುದು. ಬಿಡಾಡಿ ದನಗಳ ಮಾಲೀಕರನ್ನು ಪತ್ತೆ ಮಾಡಬಹುದು. ಜಾನುವಾರುಗಳು ಮೃತಪಟ್ಟರೆ ಅವುಗಳಿಗೆ ಪರಿಹಾರ, ಅವುಗಳಿಗೆ ಕೃತಕ ಗರ್ಭಧಾರಣೆ, ಔಷಧ ವಿತರಣೆ, ಹಾಲಿನ ಇಳುವರಿ ಹೆಚ್ಚಳಕ್ಕೆ ತಜ್ಞರ ಸಲಹೆ ಪಡೆಯಲು ಕಾರ್ಡ್ ಸಹಕಾರಿಯಾಗಲಿದೆ.

ಬರುವ ದಿನಗಳಲ್ಲಿ ಹೈನುಗಾರಿಕೆ ಸಂಬಂಧಿ ಯೋಜನೆಗಳ ಪ್ರಯೋಜನ ಪಡೆಯುವಾಗ ಯುಐಡಿ ಕಾರ್ಡ್ ಕಡ್ಡಾಯವಾಗಿಬೇಕಾಗುತ್ತದೆ. ಹೀಗಾಗಿ, ಮಾಲೀಕರು ಜಾನುವಾರು ಕಿವಿಗೆ ಇದನ್ನು ಅಳವಡಿಸಲು ಸಹಕರಿಸಬೇಕು.
ನಂದಕುಮಾರ್ ಪೈ,
ಪಶುಸಂಗೋಪನಾ ಇಲಾಖೆಯ ಪ್ರಭಾರಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT