ಸೋಮವಾರ, ಜುಲೈ 4, 2022
24 °C

ಉತ್ತರ ಕನ್ನಡ: ಕನ್ನಡ ಹಾಡು ಹಾಡಿ ಗಮನ ಸೆಳೆದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾಂಡೇಲಿ: ಕಂದಾಯ ಇಲಾಖೆಯ ‘ಕಂದಾಯ ದಿನಾಚರಣೆ’ ಪ್ರಯುಕ್ತ ಸೋಮವಾರ ವೆಸ್ಟ್ ಕೋಸ್ಟ್ ಪೇಪರ್ ಮಿಲ್‌ನ ಡಿಲಕ್ಸ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಸ್ಕೃತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕನ್ನಡ ಹಾಡನ್ನು ಹಾಡುವ ಮೂಲಕ ಗಮನಸೆಳೆದರು.

ಮೂಲತಃ ತಮಿಳುನಾಡಿನವರಾದ ಮುಗಿಲನ್ ಕನ್ನಡ ಚಲನಚಿತ್ರ ಬಿರುಗಾಳಿಯ ಚಿತ್ರದ ‘ಮಧುರ ಪಿಸುಮಾತಿಗೆ’ ಹಾಡನ್ನು ನಿರರ್ಗಳವಾಗಿ ಹಾಡಿ ಸಭೀಕರನ್ನು ರಂಜಿಸಿ, ಹುಬ್ಬೇರಿಸುವಂತೆ ಮಾಡಿದರು. ಜಿಲ್ಲಾಧಿಕಾರಿ ಹಾಡಿಗೆ ಸಭಿಕರೆಲ್ಲರೂ ಕುಣಿದು, ಕುಪ್ಪಳಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶಿರಶಿಯ ಕಂದಾಯ ಇಲಾಖೆ ಸಿಬ್ಬಂದಿಯೊಬ್ಬರ ಸುದೀಪ ಅಭಿನಯದ ‘ಹುಚ್ಚ’ ಚಿತ್ರದ ಹಾಗೂ ‘ನಾನು ಅವನಲ್ಲ ಅವಳು’ ಹಾಸ್ಯ ತುಣುಕುಗಳನ್ನು ಅಭಿನಯಿಸಿ ಸಭೀಕರನ್ನು ನಗೆಗಡಲಿನಲ್ಲಿ ತೇಲಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಹಾಗೂ ಶಿರಶಿ ತಂಡದವರು ‘ನಿತ್ಯೋತ್ಸವ’ ಹಾಡನ್ನು ಪ್ರಸ್ತುತಪಡಿಸಿದರು.

ಹಳಿಯಾಳ, ಸಿದ್ದಾಪುರ, ಭಟ್ಕಳ, ಯಲ್ಲಾಪುರ ಹಾಗೂ ಹೊನ್ನಾವರ ತಾಲೂಕಿನ ಕಂದಾಯ ಸಿಬ್ಬಂದಿ ಮಿಮಿಕ್ರಿ , ನೃತ್ಯ ಪ್ರದರ್ಶನ, ಹಾಡು ಕುಣಿತ, ಯಕ್ಷಗಾನ, ಭರತನಾಟ್ಯ, ನೃತ್ಯ ರೂಪಕಗಳು ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ತಡ ರಾತ್ರಿವರಿಗೂ ನಡೆದವು.

ಕಾರ್ಯಕ್ರಮದ ಕೊನೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆರ್.ಪಿ.ಎಲ್.(ರೆವೆನ್ಯೂ ಪ್ರಿಮಿಯರ್ ಲೀಗ್ )ಕ್ರಿಕೆಟ್ ಪಂದ್ಯಾವಳಿಯ ಭಟ್ಕಳ ಹಾಗೂ ಕಾರವಾರ ತಂಡಗಳು ಪ್ರಶಸ್ತಿಯನ್ನು ಪಡೆದವು.

ಸಹಾಯಕ ಆಯುಕ್ತರಾದ ಜಯಲಕ್ಷ್ಮಿ ರಾಯಕೋಡ ಸ್ವಾಗತಿಸಿ, ಪರಿಚಯಿಸಿದರು. ಕಾರವಾರದ ಪೋಲಿಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ವಲಯ ಅರಣ್ಯಾಧಿಕಾರಿ ಮರಿಯಾ ಕ್ರೀಸ್ತುರಾಜು ದಾಂಡೇಲಿ ತಹಶೀಲ್ದಾರ್‌ ಶೈಲೇಶ ಪರಮಾನಂದ ಸೇರಿದಂತೆ 11 ತಾಲ್ಲೂಕುಗಳ ತಹಶೀಲ್ದಾರ್‌ ವೇದಿಕೆಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು