ಶುಕ್ರವಾರ, ಸೆಪ್ಟೆಂಬರ್ 17, 2021
26 °C
ಹಳಿಯಾಳದಲ್ಲಿ ಫೋನ್ ಇನ್ ಕಾರ್ಯಕ್ರಮ

ಜನಾತಂಕ ದೂರ ಮಾಡಲು ವಿವಿಧ ಕ್ರಮ: ಕಾರವಾರದಲ್ಲಿ ಸಹಾಯವಾಣಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯಲ್ಲಿ ಕೂಡ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆತಂಕ, ದುಗುಡಗಳನ್ನು ದೂರ ಮಾಡಲು ವಿವಿಧ ಪ್ರಯತ್ನಗಳು ಮುಂದುವರಿದಿವೆ. ಒಂದೆಡೆ ಕರ್ಫ್ಯೂ ಮುಂದುವರಿದಿದ್ದರೆ ಮತ್ತೊಂದೆಡೆ ಫೋನ್ ಇನ್ ಕಾರ್ಯಕ್ರಮಗಳು, ಸಹಾಯವಾಣಿಗಳ ಆರಂಭದಂಥ ಕೆಲಸಗಳಾಗುತ್ತಿವೆ.

ನಗರದಲ್ಲಿ ಗುರುವಾರವೂ ಬೆಳಿಗ್ಗೆ 10ರ ನಂತರ ರಸ್ತೆಗಳೆಲ್ಲ ಬಿಕೊ ಎನ್ನುತ್ತಿದ್ದವು. ನಾಗರಿಕರು ಮನೆಗಳಿಂದ ಅನಗತ್ಯವಾಗಿ ಹೊರಗೆ ಸಂಚರಿಸಲಿಲ್ಲ. ತರಕಾರಿ, ಹಣ್ಣು, ದಿನಸಿ ವರ್ತಕರು ಮನೆ ಮನೆಗಳಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಜಿಲ್ಲಾಡಳಿತದಿಂದ ಅನುಮತಿ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿ ಈ ರೀತಿಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಅದಕ್ಕೆ ರಾಜ್ಯದಾದ್ಯಂತ ಮೆಚ್ಚುಗೆ ವ್ಯಕ್ತವಾಗಿ ಹಲವು ಜಿಲ್ಲೆಗಳಲ್ಲಿ ಅನುಸರಿಸಲಾಗಿತ್ತು.

ಫೋನ್ ಇನ್ ಕಾರ್ಯಕ್ರಮ: ಕೋವಿಡ್ ಸೋಂಕಿತನ ಬಗ್ಗೆ ಸಾರ್ವಜನಿಕರಿಗೆ ಇರುವ ಅನುಮಾನಗಳು, ಕುಂದು ಕೊರತೆಗಳ ಬಗ್ಗೆ ಸಂವಾದ ನಡೆಸಲು ಹಳಿಯಾಳ ತಹಶೀಲ್ದಾರ್ ಕಚೇರಿಯಲ್ಲಿ ಏ.30ರಂದು ‘ನೇರ ಫೋನ್ ಇನ್’ ಕಾರ್ಯಕ್ರಮ ಆಯೋಜಿಸಲಾಗಿದೆ. ಮಧ್ಯಾಹ್ನ 12ರಿಂದ 1ರವರೆಗೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಮತ್ತು ಹಳಿಯಾಳ ತಾಲ್ಲೂಕು ಆರೋಗ್ಯಾಧಿಕಾರಿ ಭಾಗವಹಿಸಲಿದ್ದಾರೆ. ಹಳಿಯಾಳ ಮತ್ತು ದಾಂಡೇಲಿ ತಾಲ್ಲೂಕಿನ ಸಾರ್ವಜನಿಕರು, ಕೋವಿಡ್ ಸೋಂಕಿತರು 08284 221134ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತ್ಯಾಜ್ಯ ವಿಲೇವಾರಿಗೆ ಸೂಚನೆ: ಕಾರವಾರ ನಗರ ವ್ಯಾಪ್ತಿಯಲ್ಲಿ ಕೋವಿಡ್‌ನಿಂದಾಗಿ ಹೋಂ ಐಸೊಲೇಷನ್‍ನಲ್ಲಿ ಇರುವವರು ತಮ್ಮ ಮನೆಯ ತ್ಯಾಜ್ಯವನ್ನು ನಗರಸಭೆಯಿಂದ ಮೀಸಲಿಟ್ಟ ವಾಹನಕ್ಕೆ ಮಾತ್ರ ನೀಡುವಂತೆ ನಗರಸಭೆ ಪ್ರಭಾರ ಆಯುಕ್ತ ಆರ್.ಪಿ. ನಾಯ್ಕ್ ತಿಳಿಸಿದ್ದಾರೆ.

ಕೋವಿಡ್ ಸೋಂಕಿತರು ತಮ್ಮ ಮನೆಯ ಕಸವನ್ನು ನಿತ್ಯವೂ ಮನೆ ಮನೆಯಿಂದ ಕಸ ಸಂಗ್ರಹಿಸುವ ವಾಹನಕ್ಕೆ ನೀಡಬಾರದು. ತ್ಯಾಜ್ಯ ವಿಲೇವಾರಿಗಾಗಿ ನಗರಸಭೆಯ 08382 222972, 94485 96173, 91485 39371ಗೆ ಸಂಪರ್ಕಿಸಬಹುದು. ಇದಕ್ಕೆಂದೇ ಮೀಸಲಿಟ್ಟ ವಾಹನಕ್ಕೆ ಕೊಡಬೇಕು ಎಂದು ಹೇಳಿದ್ದಾರೆ.

ನಗರದ ಸಾರ್ವಜನಿಕರಿಗೆ ಕೋವಿಡ್‍ಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ನಗರಸಭೆಯ ಸಿಬ್ಬಂದಿಯನ್ನು ಫೋನ್‌ ಮೂಲಕ ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು ಎಂದೂ ತಿಳಿಸಿದ್ದಾರೆ.

ನಗರಸಭೆಯ ಸಿಬ್ಬಂದಿ ಮಹಾಂತೇಶ ಭಜಕ್ಕನವರ (84958 33315), ಪುರುಷೋತ್ತಮ ಕೊರಗ (90719 82484) ಹಾಗೂ ನೂತನ ಶಿರೂರು (81479 91033) ಸಂಪರ್ಕಿಸಬಹುದು. ವಾಟ್ಸ್‌ಆ್ಯಪ್ ಮೂಲಕವೂ ಮಾಹಿತಿ ನೀಡಿ ಉಪಯೋಗ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಚೆ ಕಚೇರಿ ಸಮಯ ಬದಲು: ಕೋವಿಡ್ 19 ಸಾಂಕ್ರಾಮಿಕ ಸೋಂಕು ಹೆಚ್ಚುತ್ತಿರುವ ಕಾರಣ ರಾಜ್ಯದಾದ್ಯಂತ ಮುಷ್ಕರ ಜಾರಿಯಲ್ಲಿದೆ. ಹಾಗಾಗಿ ಕಾರವಾರ ವಿಭಾಗದ ಪ್ರಧಾನ ಅಂಚೆ ಕಚೇರಿ ಮತ್ತು ಇದರಡಿ ಬರುವ ಎಲ್ಲ ಉಪ ಅಂಚೆ ಕಚೇರಿಗಳು ಮೇ 12ರವರೆಗೆ ಬೆಳಿಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ಮಾತ್ರ ಕಾರ್ಯನಿರ್ವಹಿಸಲಿವೆ.

ಸದ್ಯದ ಪರಿಸ್ಥಿತಿಯಲ್ಲಿ ಅಧೀಕ್ಷಕರ ಕಚೇರಿಗಳು ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ತೆರೆದಿರುತ್ತವೆ. ಜೊತೆಗೆ ಕಾರವಾರ ಪ್ರಧಾನ ಮತ್ತು ಉಪ ಅಂಚೆ ಕಚೇರಿ ಸೇರಿದಂತೆ ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲ್ಲೂಕುಗಳ ಉಪ ಅಂಚೆ ಕಚೇರಿಗಳಲ್ಲಿ ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಸಾರ್ವಜನಿಕ ವ್ಯವಹಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಬೆಳಿಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ಕೆಲಸದ ಸಮಯ ನಿಗದಿ ಪಡಿಸಲಾಗಿದೆ. ಹೀಗಾಗಿ ಗ್ರಾಹಕರು ಇದರ ಸದುಪಯೋಗ ಪಡೆಯಬೇಕೆಂದು ಕಾರವಾರ ವಿಭಾಗದ ಪ್ರಧಾನ ಅಂಚೆ ಅಧೀಕ್ಷಕ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು