ಸೋಮವಾರ, ಸೆಪ್ಟೆಂಬರ್ 20, 2021
22 °C
ಕಳಚೆಯ ಕೀರ್ತಿ ಕಳಸ ಪುನಃ ಮೇಲೇರಿಸಲು ಸರ್ಕಾರದ ಮುಕ್ತ ಸಹಕಾರದ ನಿರೀಕ್ಷೆ

ಕಾರವಾರ: ಧರೆ ಕುಸಿದಾಗ...; ಊರು ಕಟ್ಟುವ ಕಾರ್ಯ ಪುನರಾರಂಭ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನೆಲೆ ನೀಡಿದ್ದ ನೆಲ ಬಿರಿದ ಯಲ್ಲಾಪುರ ತಾಲ್ಲೂಕಿನ ಕಳಚೆಯಲ್ಲಿ ಊರನ್ನು ಪುನಃ ಕಟ್ಟುವ ಕಾರ್ಯಗಳು ಹಂತ ಹಂತವಾಗಿ ಶುರುವಾಗಿವೆ. ಇಂಥ ಸಂದರ್ಭದಲ್ಲಿ ಸರ್ಕಾರ ಮತ್ತು ಅದರ ಇಲಾಖೆಗಳ ಉದಾರ ಸಹಾಯದ ನಿರೀಕ್ಷೆಯಲ್ಲಿ ಇಡೀ ಗ್ರಾಮವಿದೆ.

ಭಾರತೀಯ ಅಣು ವಿದ್ಯುತ್ ನಿಗಮದ ‌(ಎನ್.ಪಿ.ಸಿ) ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ವ್ಯಾಪ್ತಿಯಲ್ಲಿ ಕಳಚೆ, ತಳಕೇಬೈಲ್, ವಜ್ರಳ್ಳಿ ಪ್ರದೇಶಗಳಿವೆ. ಅಲ್ಲಿ ತನ್ನ ನಿಧಿಯಿಂದ ಶಾಲೆ, ಸೇತುವೆ ಮುಂತಾದ ಕಾಮಗಾರಿಗಳನ್ನು ಮಾಡಿಸಿದೆ. ಕೈಗಾ– ಇಳಕಲ್ ರಾಜ್ಯ ಹೆದ್ದಾರಿ 6ರಲ್ಲಿ ಪ್ರತಿವರ್ಷ ವಿಪತ್ತು ನಿರ್ವಹಣಾ ಅಣಕು ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗುತ್ತದೆ. ಒಂದುವೇಳೆ ಏನಾದರೂ ಅವಘಡಗಳು ಘಟಿಸಿದರೆ ಜನರನ್ನು ತಕ್ಷಣವೇ ತೆರವು ಮಾಡುವ ಬಗ್ಗೆ ಅರಿವು ಮೂಡಿಸಲಾಗುತ್ತದೆ.

ಈ ಹೆದ್ದಾರಿಯೇ ತಳಕೇಬೈಲ್‌ನಲ್ಲಿ ಸಂಪೂರ್ಣ ಕುಸಿದು ಬಿದ್ದಿದೆ. ವಾಹನಗಳ ಸಂಚಾರ ಸಾಧ್ಯವಾಗುತ್ತಿಲ್ಲ. ಹೀಗಿದ್ದರೂ ಎನ್.ಪಿ.ಸಿ.ಯ ಅಧಿಕಾರಿಗಳು ಸ್ಥಳಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

‘ಸಿ.ಎಸ್.ಆರ್.ನ ಲಕ್ಷಾಂತರ ರೂಪಾಯಿ ನಿಧಿಯಿಂದ ಕೈಗೊಳ್ಳಲಾದ ಕಾಮಗಾರಿಗಳಿಗೆ ಭೂ ಕುಸಿತದಿಂದ ಏನಾಗಿದೆ ಎಂದು ನೋಡಲಾದರೂ ಎನ್.ಪಿ.ಸಿ.ಯ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ಭೇಟಿ ನೀಡಬೇಕಿತ್ತು. ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಸಂಬಂಧಿಸಿದ ಅಣಕು ಕಾರ್ಯಾಚರಣೆಗೆ ಹೆದ್ದಾರಿಯನ್ನು ಬಳಕೆ ಮಾಡಿಕೊಳ್ಳುತ್ತಾರೆ. ಭೂ ಕುಸಿತದಿಂದ ಅವರ ಕಾರ್ಯಗಳಿಗೂ ನೇರ ಪರಿಣಾಮವಾಗುತ್ತದೆ. ಇಂಥ ಪ್ರಾಕೃತಿಕ ವಿಪತ್ತಿನ ಸಂದರ್ಭದಲ್ಲಿ ಜೊತೆಯಾಗುವುದನ್ನು ಅವರು ಮರೆತಿದ್ದಾರೆ’ ಎಂದು ಗ್ರಾಮಸ್ಥ ರಮೇಶ ಆಕ್ಷೇಪ ವ್ಯಕ್ತಪಡಿಸುತ್ತಾರೆ.

‘ಕೊಡಸಳ್ಳಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲೇ ಕಳಚೆಯಿದೆ. ದುರಂತದ ಕೇಂದ್ರ ಭಾಗದಿಂದ ನೋಡಿದರೆ ದೂರದಲ್ಲಿ ವಿಶಾಲವಾಗಿ ಸಂಗ್ರಹವಾಗಿರುವ ಕಾಳಿಯ ನೀರು ಗೋಚರಿಸುತ್ತದೆ. ಗ್ರಾಮದಿಂದಲೂ ಹರಿದು ಸೇರುವ ನೀರು ಅಲ್ಲೇ ಸಂಗ್ರಹವಾಗುತ್ತದೆ. ಹಾಗಾಗಿ ಗ್ರಾಮದೊಂದಿಗೆ ಸಂಬಂಧವಿದ್ದು, ಊರಿನ ಅಗತ್ಯಗಳಿಗೆ ಸ್ಪಂದಿಸುವ ಜವಾಬ್ದಾರಿಯು ಕರ್ನಾಟಕ ವಿದ್ಯುತ್ ನಿಗಮದ ಮೇಲೂ ಇದೆ’ ಎಂದು ಅವರು ಹೇಳುತ್ತಾರೆ.

ಬೆಟ್ಟಗಳು ಕುಸಿದ ಕಾರಣ ಕೆಲವೆಡೆ ಹೋಗಲು ಇನ್ನೂ ದಾರಿಗಳಿಲ್ಲ. ಹಂತ ಹಂತವಾಗಿ ಮುಂದೆ ಸಾಗುತ್ತಿದ್ದಂತೆ ಮತ್ತಷ್ಟು ಭೂ ಕುಸಿತದ ಪರಿಣಾಮಗಳು ಕಾಣಿಸುತ್ತಿವೆ. ಗ್ರಾಮದಲ್ಲಿ ಆಗಿರುವ ಹಾನಿಯ ನಿಖರ ಮಾಹಿತಿಯ ಲೆಕ್ಕಾಚಾರ ಇನ್ನೂ ಸಾಧ್ಯವಾಗುತ್ತಿಲ್ಲ. 

ಗ್ರಾಮದ ಸ್ಥಿತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕರಾದ ಶಿವರಾಮ ಹೆಬ್ಬಾರ, ಆರ್.ವಿ.ದೇಶಪಾಂಡೆ, ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಅರಣ್ಯ, ತೋಟಗಾರಿಕೆ, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಕಣ್ಣಾರೆ ಕಂಡಿದ್ದಾರೆ. ಗ್ರಾಮವನ್ನೇ ಸ್ಥಳಾಂತರಿಸುವಂತೆ ಮುಖ್ಯಮಂತ್ರಿ ಸೂಚನೆಯನ್ನೂ ನೀಡಿದ್ದಾರೆ. ಮುಂದಿನ ಪರಿಹಾರ ಕಾರ್ಯ ಯಾವ ರೀತಿಯಾಗುತ್ತದೆ ಎಂಬುದೇ ಈಗ ಸಂತ್ರಸ್ತರ, ಗ್ರಾಮಸ್ಥರ ಕುತೂಹಲವಾಗಿದೆ.

ಮತ್ತಷ್ಟು ಹಾನಿ ಬೆಳಕಿಗೆ: ‘ಕಳಚೆಯಲ್ಲೇ 60ರಿಂದ 70 ಎಕರೆಗಳಷ್ಟು ಅರಣ್ಯ ಭೂಮಿ ನಾಶವಾಗಿದ್ದಾಗಿ ಅಂದಾಜು ಮಾಡಲಾಗಿದೆ.  ಭೂಕುಸಿತದಿಂದ ದಾರಿ ಮುಚ್ಚಿ ಹೋಗಿದ್ದು, ಇನ್ನೂ ಸಂಪೂರ್ಣ ಸಮೀಕ್ಷೆ ಮಾಡಲು ಸಾಧ್ಯವಾಗಿಲ್ಲ’ ಎಂದು  ಯಲ್ಲಾಪುರದ ಇಡಗುಂದಿ ಎ.ಸಿ.ಎಫ್ ಹಿಮವತಿ ಭಟ್ ಹೇಳುತ್ತಾರೆ.

‘ಭೂ ಕುಸಿತದ ಬಗ್ಗೆ ತಾಲ್ಲೂಕು ಪಂಚಾಯಿತಿಯವರು ಡ್ರೋನ್ ಸಮೀಕ್ಷೆ ಮಾಡಿದ್ದಾರೆ. ಸದ್ಯಕ್ಕೆ ಆ ವಿಡಿಯೊ ಚಿತ್ರೀಕರಣವನ್ನು ಮತ್ತು ನಕಾಶೆಯನ್ನು ಹೋಲಿಕೆ ಮಾಡಿ ಅಂದಾಜು ಮಾಡಲಾಗುತ್ತಿದೆ. ತಳಕೇಬೈಲ್, ಅರಬೈಲ್, ಜೇನುಕಲ್ಲುಗುಡ್ಡ, ಶಿರ್ಲೆ, ಸುಣಜೋಗ, ದಬಗುಳಿ, ಕೆಳಾಸೆ, ಪಣತಗೇರಿ ಭಾಗದಲ್ಲೂ ಹಾನಿಯಾಗಿದೆ. ಸಂಪೂರ್ಣ ಮಾಹಿತಿ ಸಿಗಲು ಸಮಯ ಬೇಕಾಗುತ್ತದೆ’ ಎಂದು ಹೇಳಿದರು.

ಗ್ರಾಮಕ್ಕೆ ತಾತ್ಕಾಲಿಕ ರಸ್ತೆ: ‘ಈ ಹಿಂದೆ ಅರಣ್ಯ ಇಲಾಖೆಯಿಂದ ನಾಟಾ ಸಾಗಿಸಲು ಮಾಡಲಾಗಿದ್ದ ಕೂಪು ರಸ್ತೆಯನ್ನೇ ಬಳಸಿಕೊಂಡು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಬಾಗಿನಕಟ್ಟೆಯಿಂದಲೂ ರಸ್ತೆ ಮಾಡಿಕೊಡಲಾಗಿದೆ‌’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಇಲಾಖೆಯಿಂದ 120 ಮನೆಗಳಿಗೆ ಸೌರ ವಿದ್ಯುತ್ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಮೂರು ಬಲ್ಬ್‌ಗಳು ಮತ್ತು ಮೊಬೈಲ್ ಫೋನ್ ಚಾರ್ಜ್ ಮಾಡಲು ಸಾಧ್ಯವಾಗಲಿದೆ. ಅದೇರೀತಿ, ಕುಡಿಯುವ ನೀರಿಗೆ ಟ್ಯಾಂಕ್ ಪೈಪ್‌ ಕಳುಹಿಸಲಾಗಿದೆ. ಕಳಚೆಯಲ್ಲಿ ಗ್ರಾಮ ಅರಣ್ಯ ಸಮಿತಿಯಿದ್ದು, ಅದರ ಮೂಲಕ ಮುಂದಿನ ಕೆಲಸಗಳನ್ನು ಮಾಡಲಾಗುವುದು’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು