ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ: ಶಾಲೆಯ ತುಂಬ ‘ವರ್ಲಿ’ ಮೆರುಗು

ಮುಂಡಗೋಡ ತಾಲ್ಲೂಕಿನ ಜೋಗೇಶ್ವರ ಹಳ್ಳದ ಸರ್ಕಾರಿ ವಿದ್ಯಾಲಯ
Last Updated 13 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಮುಂಡಗೋಡ: ದಟ್ಟ ಕಾನನದ ಮಧ್ಯೆ ಬದುಕು ಕಟ್ಟಿಕೊಂಡಿರುವ ಗೌಳಿಗರ ದಡ್ಡಿಯಲ್ಲಿ ಇರುವ ಶಾಲೆ ಕಲಾಸಕ್ತರನ್ನು ಆಕರ್ಷಿಸುತ್ತಿದೆ. ಖಾಸಗಿ ಶಾಲೆಗಳ ಗೋಡೆಗಳ ಮೇಲೆ ಕಾಣುತ್ತಿದ್ದ ಚಿತ್ರಗಳು, ಸರ್ಕಾರಿ ಶಾಲೆಯ ಗೋಡೆಯ ಮೇಲೂ ರಾರಾಜಿಸುತ್ತಿವೆ.

ಮಕ್ಕಳ ಏಕಾಗ್ರತೆ ಹೆಚ್ಚಿಸಲು ನೆರವಾಗಬಲ್ಲ ವರ್ಲಿ ಕಲೆ, ಈ ಶಾಲೆಯಲ್ಲಿ ಹಾಸುಹೊಕ್ಕಿದೆ. ಪ್ರತಿ ನಿತ್ಯ ಶಿಕ್ಷಣ ಸಾರಿಗೆಯಲ್ಲಿ ಹತ್ತುವ ಮಕ್ಕಳು, ಸಾಂಪ್ರದಾಯಿಕ ನೃತ್ಯ ಪಸರಿಸುತ್ತ, ಶಿಕ್ಷಣ ಪಡೆಯುತ್ತಿದ್ದಾರೆ.

ತಾಲ್ಲೂಕಿನ ಜೋಗೇಶ್ವರ ಹಳ್ಳದಲ್ಲಿ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಮಕ್ಕಳನ್ನು ಆಕರ್ಷಿಸುತ್ತಿದೆ. ಒಟ್ಟು 25 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಮಕ್ಕಳಲ್ಲಿ ಕಲಿಕಾ ಆಸಕ್ತಿಯನ್ನು ಹೆಚ್ಚಿಸಲು, ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳನ್ನು ಮಾಡಿಸಲಾಗುತ್ತಿದೆ. ಶಾಲೆಯ ಹಿಂಬದಿಯಲ್ಲಿ ಕೈತೋಟವಿದೆ. ಅಲ್ಲಿ ಬೆಳೆಯುವ ಕೆಲವೊಂದು ತರಕಾರಿಯನ್ನು ಬಿಸಿಯೂಟಕ್ಕೆ ಬಳಸಲಾಗುತ್ತಿದೆ.

‘ಮಕ್ಕಳಲ್ಲಿ ಕಲಿಕಾಸಕ್ತಿಯನ್ನು ಹೆಚ್ಚಿಸಲು ವರ್ಲಿ ಕಲೆಗೆ ಒತ್ತು ನೀಡಲಾಗಿದೆ. ಶಾಲೆಯ ಗೋಡೆಯ ಮೇಲೆ ಈ ಕಲೆಯನ್ನು ಬಿಡಿಸಲಾಗಿದ್ದು, ಪ್ರತಿದಿನ ಮಕ್ಕಳು ಬಿಡುವಿನ ಅವಧಿಯಲ್ಲಿ ಕಲೆಯತ್ತ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ತರಗತಿ ಗೋಡೆಯ ಮೇಲೆ ಮಹಾನ್‌ ಪುರುಷರ, ಸ್ವಾತಂತ್ರ್ಯ ಹೋರಾಟಗಾರರ, ದಿನನಿತ್ಯ ಕಾಣುವ ವಸ್ತು, ಪ್ರಾಣಿ, ಪಕ್ಷಿಗಳ ಚಿತ್ರಗಳು, ಸರಳವಾಗಿ ಕೂಡಿಸುವ ವಿಧಾನ ಸೇರಿದಂತೆ ಕಲಿಕೆಗೆ ಪೂರಕವಾಗಿರುವ ಮಾಹಿತಿ ಫಲಕವನ್ನು ಫ್ಲೆಕ್ಸ್ ನಲ್ಲಿ ಮಾಡಿಸಲಾಗಿದೆ. ತರಗತಿಯಲ್ಲಿ ಕುಳಿತಿರುವ ಮಕ್ಕಳು ಕಣ್ಣು ಎಲ್ಲಿಯೇ ಹೊರಳಿಸಿದರೂ, ಕಲಿಕಾ ವಿಷಯವೇ ಕಾಣಬೇಕು ಎಂಬುದು ಇದರ ಉದ್ದೇಶವಾಗಿದೆ’ ಎನ್ನುತ್ತಾರೆ ಶಿಕ್ಷಕ ರಾಮಚಂದ್ರ ಕಲಾಲ.

‘ಕೆಲವು ಪಾಲಕರು ದುಡಿಯಲು ಬೇರೆ ಊರಿಗೆ ಹೋಗುತ್ತಾರೆ. ಅಂತವರ ಮಕ್ಕಳು ಪಟ್ಟಣದಲ್ಲಿ ಖಾಸಗಿ ವಸತಿ ನಿಲಯದಲ್ಲಿ ಉಳಿದುಕೊಳ್ಳುತ್ತಾರೆ. ಪ್ರತಿದಿನ ಮೂರು ವಿದ್ಯಾರ್ಥಿಗಳನ್ನು ಪಟ್ಟಣದಿಂದ ಬೈಕ್‌ ಮೇಲೆ ಕರೆದುಕೊಂಡು ಬಂದು, ಮರಳಿ ಬಿಡಲಾಗುತ್ತದೆ. ಬರುವ ಶೈಕ್ಷಣಿಕ ವರ್ಷದಲ್ಲಿ ನ್ಯಾಸರ್ಗಿ ಗೌಳಿ ದಡ್ಡಿಯಲ್ಲಿ ಇರುವ10 ವಿದ್ಯಾರ್ಥಿಗಳಿಗೆ ಈ ಶಾಲೆಯಲ್ಲಿಯೇ ಕಲಿಯಲು ಈಗಾಗಲೇ ವ್ಯವಸ್ಥೆ ಮಾಡಲಾಗಿದೆ’ ಎಂದು ಮುಖ್ಯಶಿಕ್ಷಕ ಡಿ.ಬಿ.ವೆಂಕಟಾಪುರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT