ಭಾನುವಾರ, ಆಗಸ್ಟ್ 1, 2021
26 °C

ಕಾರವಾರ | ಜೋರು ಮಳೆ: ಕೆಲವೆ‌ಡೆ ಜಲಾವೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನಗರದಲ್ಲಿ ಗುರುವಾರ ತಡರಾತ್ರಿ ಮತ್ತು ಶುಕ್ರವಾರ ಮಧ್ಯಾಹ್ನದವರೆಗೆ ಆಗಾಗ ಜೋರಾಗಿ ಮಳೆಯಾಯಿತು. ಇದರ ಪರಿಣಾಮ ಕೆಲವೆಡೆ ಮನೆ, ರಸ್ತೆಗಳು ಜಲಾವೃತವಾದವು. ಜಿಲ್ಲಾ ಆಸ್ಪತ್ರೆಯ ಆವರಣದಲ್ಲೂ ನೀರು ಸಂಗ್ರಹವಾಯಿತು. 

ನಗರದಲ್ಲಿ ಗುರುವಾರ ಸಂಜೆ ಬೀಸಿದ ಗಾಳಿಗೆ ಗ್ರೀನ್‌ಸ್ಟ್ರೀಟ್‌ನ ಅಂಬೇಡ್ಕರ್ ವೃತ್ತದ ಬಳಿ ಮರವೊಂದರ ಕೊಂಬೆ ಮುರಿದು ಬಿದ್ದು, ವ್ಯಕ್ತಿಯೊಬ್ಬರ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಅವರನ್ನು ಗಮನಿಸಿದ ವಿದ್ಯಾರ್ಥಿ ಒಕ್ಕೂಟದ ಮುಖಂಡ ರಾಘು ನಾಯ್ಕ, ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು. ಗಾಯಗೊಂಡವರನ್ನು ಗುನಗಿವಾಡಾದ ರಾಘವೇಂದ್ರ ಎಂದು ಗುರುತಿಸಲಾಗಿದೆ.

ಜೋರಾಗಿ ಸುರಿದ ಮಳೆಯಿಂದ ಜಿಲ್ಲಾ ಆಸ್ಪತ್ರೆಯ ಹೆರಿಗೆ ವಾರ್ಡ್‌ನ ಎದುರು ಅಂಗಳದಲ್ಲಿ ಶುಕ್ರವಾರ ನೀರು ಸಂಗ್ರಹವಾಗಿತ್ತು. ಮಳೆ ನೀರು ಸರಾಗವಾಗಿ ಹರಿದುಹೋಗಲು ಅವಕಾಶ ಸಿಗದೇ ತೊಂದರೆಯಾಯಿತು. 

ನಗರದ ಬಾಡ ಗುರುಮಠ ಹತ್ತಿರ ಕಾಲುವೆಯ ನೀರು ಉಕ್ಕಿ ಹರಿದು ಸಂತೋಷ ನಾಯ್ಕ ಎಂಬುವವರ ಮನೆ ಜಲಾವೃತವಾಗಿದೆ. ಮನೆಯ ಆವರಣದಲ್ಲಿ ಒಂದು ಅಡಿಯಷ್ಟು ನೀರು ನಿಂತಿದ್ದು, ಮನೆ ಮಂದಿ ಸಂಚರಿಸಲು ಸಂಕಷ್ಟ ಪಡುವಂತಾಗಿದೆ.

‘ಪ್ರತಿ ಮಳೆಗಾಲದಲ್ಲೂ ಈ ಸಮಸ್ಯೆಯಿದೆ. ನಗರಸಭೆಗೆ ಎಷ್ಟು ಬಾರಿ ಮನವಿ, ದೂರು ನೀಡಿದರೂ ಬಗೆಹರಿದಿಲ್ಲ. ನೀರು ಸದಾ ನಿಲ್ಲುವ ಕಾರಣ ಸೊಳ್ಳೆಗಳು ಹೆಚ್ಚಿ ಆರೋಗ್ಯ ಸಮಸ್ಯೆ ಕಾಣಿಸುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರ ವಾಟ್ಸ್‌ಆ್ಯಪ್ ಸಂಖ್ಯೆಗೆ ಶುಕ್ರವಾರ ದೂರು ಸಲ್ಲಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು