ಮಂಗಳವಾರ, ಸೆಪ್ಟೆಂಬರ್ 22, 2020
20 °C

ಬೇಡ್ತಿ ಕಿಂಡಿ ಅಣೆಕಟ್ಟೆಯಲ್ಲಿ ಮರದ ದಿಮ್ಮಿ ಸಂಗ್ರಹ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲ್ಲಾಪುರ: ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಬೇಡ್ತಿ ಕಿಂಡಿ ಅಣೆಕಟ್ಟೆಯಲ್ಲಿ ಮರದ ದಿಮ್ಮಿ, ಕಸ, ಕಡ್ಡಿ ಸಂಗ್ರಹವಾಗಿದೆ. ಭಾರಿ ತೂಕದ ದಿಮ್ಮಿಗಳು ಅಪ್ಪಳಿಸಿದ ಕಾರಣ ಗೇಟ್‌ಗಳಿಗೆ ಹಾನಿಯಾಗಿದೆ.

ರಭಸದಿಂದ ನೀರು ಬಂದಾಗ ಅಣೆಕಟ್ಟೆಯ ಗೇಟ್‍ಗಳನ್ನು ತೆರೆಯದ ಕಾರಣ ಸಮಸ್ಯೆಯಾಗಿದೆ. ಕಬ್ಬಿಣದ ಪ್ಲೇಟ್‍ಗಳನ್ನು ಸಕಾಲದಲ್ಲಿ ತೆರೆದಿದ್ದರೆ ಕಸ, ಕಡ್ಡಿ, ಮರದ ದಿಮ್ಮಿಗಳು ನೀರಿನಲ್ಲಿ ತೇಲಿ ಹೋಗುತ್ತಿದ್ದವು. ಪಟ್ಟಣ ಪಂಚಾಯ್ತಿಯ ನಿರ್ಲಕ್ಷ್ಯದಿಂದಲೇ ಹೀಗಾಗಿದೆ ಎಂದು ಧೀರಜ್ ತಿನೇಕರ್ ದೂರಿದ್ದಾರೆ.

ಪಟ್ಟಣಕ್ಕೆ ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ₹ 25 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿಯಾಗಿದೆ. ಯಲ್ಲಾಪುರದಿಂದ ಸುಮಾರು 16 ಕಿ.ಮೀ ದೂರದಲ್ಲಿರುವ ಬೇಡ್ತಿ ನದಿಗೆ ಕಿಂಡಿ ಅಣೆಕಟ್ಟು ಕಟ್ಟಿ ಪಟ್ಟಣಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ.

ಈ ಹಿಂದೆ ನೀರು ಪಾಚಿಗಟ್ಟಿ ಹಸಿರಾಗಿತ್ತು. ಬೇಡ್ತಿ ನದಿಗೆ ನಿರ್ಮಿಸುತ್ತಿರುವ ಸೇತುವೆಯಿಂದಾಗಿ ನೀರಿನ ಹರಿವನ್ನು ತಡೆಯಲಾಗಿತ್ತು. ಆಗ ಪಟ್ಟಣಕ್ಕೆ ನೀರು ಪೂರೈಕೆ ಸಾಧ್ಯವಾಗಿರಲಿಲ್ಲ. ಮತ್ತೊಮ್ಮೆ ಕಿಂಡಿ ಅಣೆಕಟ್ಟಿನ ಹಿನ್ನೀರಿನಲ್ಲಿದ್ದ ಅಪರೂಪದ ಅರ್ಜುನ ಮರಗಳು ನಾಶವಾಗಿದ್ದವು. ಹೀಗೆ ಬೇಡ್ತಿ ಯೋಜನೆ ಸದಾ ಒಂದಿಲ್ಲೊಂದು ಕಾರಣದಿಂದ ಸುದ್ದಿಯಾಗುತ್ತಿರುವುದು ನಾಗರಿಕರಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

‘ಗೇಟ್‍ಗಳು ಗಟ್ಟಿಯಾದ ಕಾರಣ ತೆರೆಯಲು ಸಾಧ್ಯವಾಗಿರಲಿಲ್ಲ. ನಂತರ ಮಳೆ ಆರಂಭವಾಯಿತು. ಮಳೆ ಕಡಿಮೆಯಾದರೆ ಸೋಮವಾರದಿಂದ ಕಸ ಕಡ್ಡಿಗಳನ್ನು ಸ್ವಚ್ಛಗೊಳಿಸಲಾಗುತ್ತದೆ’ ಎಂದು ನೀರು ಸರಬರಾಜು ಇಲಾಖೆಯ ಮೇಲ್ವಿಚಾರಕ ಸುರೇಶ್ ತುಳಸೀಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.