ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕಡಲಿನ ಅಚ್ಚರಿಗೆ ಸಾಕ್ಷಿಯಾಗಲು ‘ರೆಕ್ ಡೈವಿಂಗ್’

ಸಮುದ್ರದಾಳದ ವಿಸ್ಮಯ ಕಣ್ತುಂಬಿಕೊಳ್ಳಲು ತಳಕ್ಕೆ ಇಳಿಯುವ ಸಾಹಸ
Last Updated 29 ಸೆಪ್ಟೆಂಬರ್ 2020, 7:11 IST
ಅಕ್ಷರ ಗಾತ್ರ

ಕಾರವಾರ: ಕಡಲು ಅಚ್ಚರಿಗಳ ಒಡಲು! ಇದು ಸಮುದ್ರದ ಬಗ್ಗೆ ಕುತೂಹಲ ಹೊಂದಿರುವವರು ಹೇಳುವ ಮಾತು. ಸ್ಕೂಬಾ ಡೈವಿಂಗ್‌ನಂತಹ ಸಾಹಸಗಳಲ್ಲಿ ಆಸಕ್ತಿ ಹೊಂದಿರುವವರಿಗೆ ಸಮುದ್ರದಾಳವು ನಿತ್ಯ ನೂತನ. ಈ ಪಟ್ಟಿಗೆ ಮತ್ತೊಂದು ಸೇರ್ಪಡೆಯೇ ‘ರೆಕ್ ಡೈವಿಂಗ್’.

ಸಮುದ್ರದ ಮಧ್ಯೆ ಅವಘಡಗಳಿಗೆ ಸಿಲುಕಿ ಮುಳಗಿದ ಹಡಗು, ನೌಕೆಗಳ ಅವಶೇಷಗಳು ಹತ್ತಾರು ಜಲಚರಗಳಿಗೆ ಆವಾಸ ಸ್ಥಾನವಾಗಿರುತ್ತದೆ. ಮೊಟ್ಟೆಯಿಟ್ಟು ಸಂತಾನಾಭಿವೃದ್ಧಿಗೆ ಮಾಡಲು ಅವುಗಳಿಗೆ ಅವಶೇಷಗಳು ಪ್ರಶಸ್ತವಾಗಿರುತ್ತವೆ. ಸಮುದ್ರದ ಮೇಲ್ಮೈಯಿಂದ 18, 20, 25 ಮೀಟರ್‌ಗಳ ಆಳದಲ್ಲಿ ಇರುವ ಅವಶೇಷಗಳು ಮತ್ತು ಅವುಗಳಲ್ಲಿರುವ ಜಲಚರಗಳನ್ನು ಕಣ್ತುಂಬಿಕೊಳ್ಳುವ ಸಾಹಸವೇ ‘ರೆಕ್ ಡೈವಿಂಗ್’.

ಮುರ್ಡೇಶ್ವರ ಸಮೀಪವೂ ಇದೆ!

ಆಂಧ್ರಪ್ರದೇಶದ ವಿಶಾಖಪಟ್ಟಣದ ಕರಾವಳಿ ತೀರವು ಬಂದರು, ನೌಕಾ ಚಟುವಟಿಕೆಗಳಿಗೆ ಹಲವಾರು ದಶಕಗಳಿಂದ ಪ್ರಸಿದ್ಧವಾಗಿದೆ. ಅಲ್ಲಿ ಹತ್ತಾರು ಹಡಗುಗಳೂ ಮುಳುಗಿವೆ. ಹಾಗಾಗಿ ಅದು ಡೈವಿಂಗ್ ಮಾಡುವವರ ನೆಚ್ಚಿನ ತಾಣಗಳಲ್ಲಿ ಒಂದು.

ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿ ಸಮುದ್ರದ ನಡುವೆ ಕೂಡ ಇದೇ ಮಾದರಿಯ ‘ರೆಕ್ ಡೈವಿಂಗ್’ ‍ಪ್ರದೇಶವಿದೆ. ಅಲ್ಲಿ ಹಲವಾರು ವರ್ಷಗಳ ಹಿಂದೆ ಸಣ್ಣ ಹಡಗು ಮುಳುಗಿತ್ತು. ಅದರ ಅವಶೇಷಗಳು ಈಗ ವಿವಿಧ ರೀತಿಯ ಮೀನುಗಳು, ಹವಳಗಳಿಗೆ ಆಶ್ರಯ ತಾಣವಾಗಿವೆ.

‘ಇಲ್ಲಿ ಅವಶೇಷಗಳ ಮೇಲೆ ಅಷ್ಟಾಗಿ ಬೆಳಕು ಬೀಳುವುದಿಲ್ಲ. ಹಾಗಾಗಿ ಅದು ಹೊಸದಾಗಿ ಡೈವಿಂಗ್ ಮಾಡುವವರಿಗೆ ಮುದ ನೀಡದು. ಅಲ್ಲದೇ ಅಲ್ಲಿ ಅನೇಕ ಜಲಚರಗಳು ಇರುವ ಕಾರಣ ನಮಗೂ ಅಷ್ಟೊಂದು ಸುರಕ್ಷಿತವಲ್ಲ. ಅವಶೇಷಗಳು ಹಳೆಯದಾದಷ್ಟು ಹೆಚ್ಚು ಜಲಚರಗಳು ಅಲ್ಲಿ ವಾಸಿಸುತ್ತವೆ’ ಎನ್ನುತ್ತಾರೆ ನೇತ್ರಾಣಿ ಅಡ್ವೆಂಚರ್ಸ್‌ನ ಗಣೇಶ ಹರಿಕಂತ್ರ.

‘ರೆಕ್ ಡೈವಿಂಗ್ ಮಾಡಿಸಲು ಅದೇ ಕ್ಷೇತ್ರದಲ್ಲಿ ವಿಶೇಷ ತರಬೇತಿ ಪಡೆದವರ ಅಗತ್ಯವಿದೆ. ಸಾಮಾನ್ಯವಾದ ‘ಡಿಸ್ಕವರಿ ಸ್ಕೂಬಾ ಡೈವಿಂಗ್’ (ಡಿ.ಎಸ್.ಟಿ) ಅನ್ನು 10ರಿಂದ 12 ಮೀಟರ್ ಒಳಗೆ ಮಾಡಲಾಗುತ್ತದೆ. ಅದಕ್ಕಿಂತ ಹೆಚ್ಚು ಆಳಕ್ಕೆ ಹೋಗುವಂತಿಲ್ಲ. ಆದರೆ, ರೆಕ್ ಡೈವಿಂಗ್‌ನಲ್ಲಿ ಮತ್ತಷ್ಟು ಆಳಕ್ಕೆ ಹೋಗಬೇಕು. ಇದಕ್ಕೆ ಸ್ವಲ್ಪ ಹೆಚ್ಚು ಧೈರ್ಯ ಬೇಕು’ ಎಂದು ಮುಗುಳ್ನಗುತ್ತಾರೆ.

ನೇತ್ರಾಣಿಯಲ್ಲಿ ಡೈವಿಂಗ್:

ಮುರ್ಡೇಶ್ವರದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿ ಸಮುದ್ರದಲ್ಲಿ ‘ನೇತ್ರಾಣಿ’ ದ್ವೀಪವಿದೆ. ಅಲ್ಲಿ ಸ್ಕೂಬಾ ಡೈವಿಂಗ್ ಈಗಾಗಲೇ ಪ್ರಸಿದ್ಧವಾಗಿದೆ. ನಡುಗಡ್ಡೆಯ ಸುತ್ತ ಸಂತಾನೋತ್ಪತ್ತಿಗೆ ಸೂಕ್ತವಾದ ವಾತಾವರಣ ಇರುವ ಕಾರಣ ಇಲ್ಲಿ ವಿವಿಧ ಪ್ರಭೇದಗಳ ಮೀನುಗಳಿರುತ್ತವೆ. ಡೈವಿಂಗ್ ಮಾಡಿದವರಿಗೆ ಅವುಗಳನ್ನು ಕಣ್ತುಂಬಿಕೊಳ್ಳಲು ಅವಕಾಶ ಇರುವ ಕಾರಣ ಈ ಪ್ರದೇಶವು ಸ್ಕೂಬಾ ಡೈವಿಂಗ್‌ಗೆ ನೆಚ್ಚಿನ ತಾಣವಾಗಿದೆ.

‘ನಡುಗಡ್ಡೆ ಇರುವ ಪ್ರದೇಶದಲ್ಲಿ ಅಲೆಗಳ ವೇಗ ಕಡಿಮೆಯಿರುತ್ತದೆ. ಹಾಗಾಗಿ ಮೀನಿನ ಮೊಟ್ಟೆ ಛಿದ್ರವಾಗುವುದಿಲ್ಲ. ಅಲ್ಲದೇ ಈ ಭಾಗದಲ್ಲಿ ಮೀನುಗಳಿಗೆ ಪಾಚಿ, ಕ್ರಿಮಿ, ಕೀಟಗಳಂಥ ಆಹಾರವೂ ಸಿಗುತ್ತದೆ. ಅಕ್ಟೋಬರ್‌ನಲ್ಲಿ ಡೈವ್ ಮಾಡಿದರೆ ಸ್ಟಿಂಗ್‌ರೇ ಮಾದರಿಯ ಜೋಡಿ ಮೀನುಗಳು ಹೆಚ್ಚು ಕಾಣ ಸಿಗುತ್ತವೆ’ ಎಂದು ಗಣೇಶ ಹೇಳುತ್ತಾರೆ.

‘ಮಳೆಗಾಲದಲ್ಲಿ ಸಮುದ್ರದ ನೀರು ಕೆಸರು ಮಿಶ್ರಿತವಾಗುತ್ತದೆ. ಮಳೆ ಕಡಿಮೆಯಾಗಿ ಒಂದು ವಾರದಲ್ಲಿ ಸಮುದ್ರವು ತಿಳಿಯಾಗಿ ನೀಲಿ ಬಣ್ಣಕ್ಕೆ ಮರಳುತ್ತದೆ. ಗಾಳಿಯ ದಿಕ್ಕು ಬದಲಾದಂತೆ ನೀರಿನಲ್ಲಿರುವ ಕೆಸರು, ಭೂಮಿಯ ಪದರದಲ್ಲಿ ಸಂಗ್ರಹವಾಗುತ್ತದೆ. ಹಾಗಾಗಿ ಈ ಬಾರಿ ಅ.2ರಿಂದ ಸ್ಕೂಬಾ ಡೈವಿಂಗ್ ಶುರು ಮಾಡಲು ಚಿಂತನೆ ನಡೆಸಿದ್ದೇವೆ’ ಎಂದು ವಿವರಿಸುತ್ತಾರೆ.

‘ನಮ್ಮ ದೋಣಿಗಳಲ್ಲಿ ಒಂದು ಸಲಕ್ಕೆ 35 ಮಂದಿಯನ್ನು ಕರೆದುಕೊಂಡು ಹೋಗುವ ಸಾಮರ್ಥ್ಯವಿದ್ದರೂ ಕೋವಿಡ್ 19 ಕಾರಣದಿಂದ 25 ಜನರನ್ನಷ್ಟೇ ಕರೆದುಕೊಂಡು ಹೋಗುತ್ತೇವೆ. ಒಂದು ಬಾರಿ ಬಳಕೆ ಮಾಡಿದ ಉಪಕರಣವನ್ನು ಒಂದು ದಿನ ಬಿಟ್ಟು ಸ್ವಚ್ಛಗೊಳಿಸಿ ನಂತರವೇ ಮರುಬಳಕೆ ಮಾಡುತ್ತೇವೆ’ ಎಂದು ಸುರಕ್ಷತಾ ಕ್ರಮಗಳ ಬಗ್ಗೆಯೂ ಮಾಹಿತಿ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT