ಗುರುವಾರ , ಮೇ 19, 2022
20 °C

ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಅವಹೇಳನ: ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಅವಹೇಳನಕಾರಿಯಾಗಿ ಸಂದೇಶ ಪ್ರಕಟಿಸಿದ್ದ ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕೆರೂರು ನಿವಾಸಿ ಶಿವರಾಜ್ (22) ಆರೋಪಿಯಾಗಿದ್ದಾನೆ. ಸಿದ್ದಾಪುರ ತಾಲ್ಲೂಕು ನಾಮಧಾರಿ ಅಭಿವೃದ್ಧಿ ಸಂಘದ ಪಟ್ಟಣ ಘಟಕದ ಅಧ್ಯಕ್ಷ ಕೃಷ್ಣ ಗೋವಿಂದ ನಾಯ್ಕ ಹಣಜಿಬೈಲ್ ತಮ್ಮ ಹೆಸರಿನಲ್ಲಿ ಯಾರೋ ನಕಲಿ ಖಾತೆ ತೆರೆದಿದ್ದಾರೆ ಎಂದು ದೂರು ನೀಡಿದ್ದರು. ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲಾಗಿದ್ದು, ಅವಹೇಳನಕಾರಿಯಾಗಿ ಪ್ರಕಟಿಸಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇನ್‌ಸ್ಪೆಕ್ಟರ್‌ ಶ್ರೀಕುಮಾರ್.ಕೆ, ಸಬ್ ಇನ್‌ಸ್ಪೆಕ್ಟರ್‌ಗಳಾದ ಎಂ.ಜಿ.ಕುಂಬಾರ್ ಮತ್ತು ಮಲ್ಲಿಕಾರ್ಜುನಯ್ಯ ಕೊರನಿ ಎಚ್ಚರಿಕೆ ನೀಡಿದ್ದಾರೆ.

ಬೈಕ್ ಸವಾರನಿಗೆ ಗಾಯ

ಕಾರವಾರ: ನಗರದ ಬೈತಖೋಲ್ ಬಳಿ ಶನಿವಾರ ಸಂಜೆ ವೇಗವಾಗಿ ಬಂದ ಅನಿಲ ಸಾಗಣೆಯ ಟ್ಯಾಂಕರ್, ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಳಿಸಿದೆ. ಟ್ಯಾಂಕರ್ ಚಾಲಕ ಗಾಯಾಳುವನ್ನು ಉಪಚರಿಸದೇ ವಾಹನದೊಂದಿಗೆ ಪರಾರಿಯಾಗಿದ್ದಾನೆ.

ಪೋಸ್ಟ್ ಚೆಂಡಿಯಾದ ಒಕ್ಕಲಕೇರಿ ನಿವಾಸಿ ಸೋಮೇಶ್ವರ ಗೌಡ (42) ಗಾಯಗೊಂಡವರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಎಡ ಭಾಗದಲ್ಲಿ ಬೈಕ್‌ನಲ್ಲಿ ಸಾಗುತ್ತಿದ್ದಾಗ ಎದುರಿನಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆಯಿತು. ಅವರ ತಲೆ, ಬಲಗಾಲು, ಕೈಗಳಿಗೆ ಗಾಯಗಳಾಗಿವೆ.

ಆರೋಪಿ ಚಾಲಕನನ್ನು ಜಾರ್ಖಂಡ್ ರಾಜ್ಯದ ಬಿರ್ನಿಯ ನೇಹಲ್ ಯಾದವ್ (42) ಎಂದು ಗುರುತಿಸಲಾಗಿದೆ. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋವಾ ಮದ್ಯ ವಶ

ಕಾರವಾರ: ತಾಲ್ಲೂಕಿನ ಬಿಣಗಾದ ಗುನಗಿವಾಡ ರಸ್ತೆಯಲ್ಲಿ ಸ್ಥಳೀಯರೊಬ್ಬರು ಅಕ್ರಮವಾಗಿ ಸಾಗಿಸುತ್ತಿದ್ದ ₹ 10,780 ಮೌಲ್ಯದ ಗೋವಾ ಮದ್ಯವನ್ನು ಪೊಲೀಸರು ಶನಿವಾರ ರಾತ್ರಿ ಜಪ್ತಿ ಮಾಡಿದ್ದಾರೆ.

ಪ್ರಭಾಕರ ಚೆಂಡೇಕರ (55) ಆರೋಪಿಯಾಗಿದ್ದು, ಪರಾರಿಯಾಗಿದ್ದಾರೆ. ವಿವಿಧ ಮದ್ಯದ 21 ಬಾಟಲಿಗಳನ್ನು
ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಸಾಗಿಸುತ್ತಿದ್ದಾಗ ಪೊಲೀಸರು ದಾಳಿ ಮಾಡಿದ್ದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜು: ₹ 4,100 ವಶ

ಕಾರವಾರ: ನಗರದ ಕೋಡಿಬಾಗದ ಮಧ್ಯವಾಡದಲ್ಲಿ ಶನಿವಾರ ಸಂಜೆ ಜೂಜು ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಅಲ್ಲಿದ್ದ ₹ 4,100 ಮತ್ತು ಮಟ್ಕಾ ಚೀಟಿಗಳನ್ನು ಜಪ್ತಿ ಮಾಡಿದ್ದಾರೆ.

ಸ್ಥಳೀಯ ನಿವಾಸಿ ಸುಭಾಷ್ ಕುಶಾಲಿ ಥಾಮ್ಸೆ (56) ಮತ್ತು ಮುಖ್ಯ ಬುಕ್ಕಿ, ಹಬ್ಬುವಾಡದ ಗಣಪತಿ ನಾರಾಯಣ ಐತಾಳ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು