ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಪರಿಸರಕ್ಕಾಗಿ ಪೆಡಲ್ ತುಳಿದ ಯುವಕ!

ಮಂಗಳೂರಿನಿಂದ ಮಣಿಪುರದ ಇಂಫಾಲಕ್ಕೆ ಒಬ್ಬಂಟಿಯಾಗಿ ಸೈಕಲ್ ಪ್ರಯಾಣ
Last Updated 20 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಕಾರವಾರ: ಈ ಯುವಕನಿಗೆ ಸೈಕಲ್ ಸವಾರಿಯೆಂದರೆ ಪಂಚಪ್ರಾಣ. ಈಗಾಗಲೇ ಒಮ್ಮೆ ಪೆಡಲ್ ತುಳಿಯುತ್ತ ಇಡೀ ದೇಶದಲ್ಲಿ 10 ಸಾವಿರ ಕಿಲೋಮೀಟರ್ ಸುತ್ತಾಡಿದ್ದ ಇವರೀಗ, ಎರಡನೇ ಬಾರಿ ಪ್ರಯಾಣ ಆರಂಭಿಸಿದ್ದಾರೆ. ಈ ಬಾರಿ 6 ಸಾವಿರ ಕಿಲೋಮೀಟರ್ ಸಂಚರಿಸಲಿದ್ದಾರೆ.

ಇಂಥ ಸಾಹಸವನ್ನು ಒಬ್ಬಂಟಿಯಾಗಿ ಮಾಡುತ್ತಿರುವವರು ಮಂಗಳೂರಿನ ಗುರುಪುರದ ಶ್ರವಣ್ ಕುಮಾರ್. 25ರ ಹರೆಯದ ಇವರು, ಈ ಬಾರಿ ಕಾರವಾರ, ಗೋವಾ, ಮಹಾರಾಷ್ಟ್ರದ ರತ್ನಗಿರಿ, ನಾಗಪುರ, ಗ್ವಾಲಿಯರ್ ಮೂಲಕ ಮಣಿಪುರದತ್ತ ಇಂಫಾಲದತ್ತ ಪ್ರಯಾಣ ಬೆಳೆಸಿದ್ದಾರೆ.

ಪರಿಸರ ಜಾಗೃತಿಯನ್ನೇ ಮುಖ್ಯ ಉದ್ದೇಶವಾಗಿಟ್ಟುಕೊಂಡು ದೇಶ ಸುತ್ತುತ್ತಿದ್ದಾರೆ. ‘ಪೆಡಲ್ ಫಾರ್ ಗ್ರೀನ್’ (ಪರಿಸರಕ್ಕಾಗಿ ಸೈಕಲ್) ಎಂಬುದು ಅವರ ಧ್ಯೇಯವಾಗಿದೆ. ಮೂರು ದಿನಗಳ ಹಿಂದೆ ಮಂಗಳೂರಿನಿಂದ ಹೊರಟವರು, ಶುಕ್ರವಾರ ಸಂಜೆ ಕಾರವಾರಕ್ಕೆ ತಲುಪಿದರು.

ನಗರದಲ್ಲಿ ವಿಶ್ರಾಂತಿ ಮಾಡಿ ಶನಿವಾರ ಬೆಳಿಗ್ಗೆ ಮತ್ತೆ ಪ್ರಯಾಣ ಹೊರಟವರಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಲಕ್ಷ್ಮಿಕಾಂತ್, ಸಹಾಯಕ ಪರಿಸರ ಅಧಿಕಾರಿ ಡಾ.ಗಣಪತಿ ಹೆಗಡೆ ಹಾಗೂ ಸಿಬ್ಬಂದಿ ಶುಭ ಕೋರಿ ಬೀಳ್ಕೊಟ್ಟರು.

ಪರ್ವತಾರೋಹಣದ ಬಗ್ಗೆ ಡಾರ್ಜಿಲಿಂಗ್‌ನಲ್ಲಿ ಎರಡು ತಿಂಗಳ ವಿಶೇಷ ಕೋರ್ಸ್‌ ಅಧ್ಯಯನ ಮಾಡಿರುವ ಇವರು, ಹಿಮಾಲಯ ಪರ್ವತ ಶ್ರೇಣಿಯಲ್ಲೂ ಸಂಚರಿಸಿದ್ದಾರೆ.

‘ರೋಟರಿ ಮತ್ತು ಜೂನಿಯರ್ ಚೇಂಬರ್ (ಜೇಸಿ) ಸಂಸ್ಥೆಯವರು ಸಹಕಾರ ನೀಡಿದ್ದಾರೆ. ರೋಟರಿ ಸಂಸ್ಥೆಯ ಸೇವೆಗಳು ಲಭ್ಯ ಇರುವಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆಯಾಗುತ್ತದೆ. ಉಳಿದ ಕಡೆಗಳಲ್ಲಿ ಟೆಂಟ್‌ ಅಳವಡಿಸಿ ಅದರಲ್ಲೇ ಉಳಿದುಕೊಳ್ಳುತ್ತೇನೆ. ನಾನೇ ಅಡುಗೆ ಮಾಡಿಕೊಳ್ಳುತ್ತೇನೆ. ದಿನಕ್ಕೆ ಸುಮಾರು 150 ಕಿಲೋಮೀಟರ್ ಸೈಕಲ್ ತುಳಿಯುತ್ತೇನೆ. ಅಂದಾಜಿನ ಪ್ರಕಾರ ನಾಗಲ್ಯಾಂಡ್ ತಲುಪಲು ಮೂರು ತಿಂಗಳು ಬೇಕಾಗಬಹುದು’ ಎಂದು ಅವರು ‘ಪ್ರಜಾವಾಣಿ’ಗೆ ವಿವರಿಸಿದರು.

‘ಹುಚ್ಚ ಎಂದು ಟೀಕಿಸಿದ್ದರು’:

‘2018ನಲ್ಲಿ ಮೊದಲ ಬಾರಿಗೆ ಸೈಕಲ್‌ನಲ್ಲಿ ದೇಶ ಸುತ್ತಿದ್ದೆ. 18 ರಾಜ್ಯಗಳ ಮೂಲಕ ಸಾಗಿದ್ದೆ. ನನ್ನನ್ನು ಆಗ ಕೆಲವರು ಹುಚ್ಚ ಎಂದು ಕರೆದಿದ್ದರು. ಆದರೆ, ಮನೆಯಲ್ಲಿ ಪಾಲಕರು ಸಂಪೂರ್ಣ ಪ್ರೋತ್ಸಾಹ ನೀಡಿದ್ದರು. ಹಾಗಾಗಿ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳಲಿಲ್ಲ’ ಎಂದು ಶ್ರವಣ್ ಮುಗುಳ್ನಗುತ್ತಾರೆ.

‘ಆಗ ನನಗೆ ಖರ್ಚಾಗಿದ್ದು ಕೇವಲ ₹ 2 ಸಾವಿರ. ಸುಮಾರು 10 ಸಾವಿರ ಕಿಲೋಮೀಟರ್ ಪ್ರಯಾಣ ಮಾಡಿದ್ದೆ. ನಾನು ಸೈಕಲ್ ಪ್ರಯಾಣ ಮಾಡುವ ಉದ್ದೇಶವನ್ನು ಅರ್ಥ ಮಾಡಿಕೊಂಡ ಜನರೇ ಊಟ, ತಿಂಡಿಯ ವ್ಯವಸ್ಥೆ ಮಾಡಿದ್ದರು. ಹಾಗಾಗಿ ಸೈಕಲ್ ದುರಸ್ತಿಗೆ ಮಾತ್ರ ಖರ್ಚು ಮಾಡಿದ್ದೆ’ ಎಂದು ವಿವರಿಸುತ್ತಾರೆ.

‘ನಾನು ಸಾಗುವ ದಾರಿಯುದ್ದಕ್ಕೂ ಗಿಡ ನೆಡುವ ಉದ್ದೇಶ ಹೊಂದಿದ್ದೆ. ಆದರೆ, ಈಗ ಬೇಸಿಗೆಯಲ್ಲಿ ಅವು ಬದುಕಲಾರವು. ಹಾಗಾಗಿ, ಜಪಾನ್‌ನ ಮಿಯಾವಕಿ ಪದ್ಧತಿಯಲ್ಲಿ ಸಸ್ಯ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುತ್ತಿದ್ದೇನೆ’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT