ಶನಿವಾರ, ನವೆಂಬರ್ 28, 2020
22 °C
ಮುಂಡಗೋಡ: ಯುವಕನ ಪರಿಸರ ಸ್ನೇಹಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ

ಗೋಮಯದಿಂದ ಹಣತೆ, ಹೂ ಕುಂಡ!

ಶಾಂತೇಶ ಬೆನಕನಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: ಇಲ್ಲಿ ಗೋವಿನ ಸೆಗಣಿಯಿಂದ (ಗೋಮಯ) ಮಾಡಿದ ಹಣತೆ, ಹೂವಿನ ಕುಂಡ ತಯಾರಿಸಲಾಗುತ್ತಿದೆ. ಧಾರ್ಮಿಕ ಆಚರಣೆಯಲ್ಲಿಯೂ ಪರಿಸರದ ಮಹತ್ವ ಸಾರುವ ಕೆಲಸ ಸದ್ದಿಲ್ಲದೆ ನಡೆದಿದೆ.

ತಾಲ್ಲೂಕಿನ ಕರಗಿನಕೊಪ್ಪ ಗ್ರಾಮದ ಸನಿಹ ಗಣೇಶ ಲಮಾಣಿ ಎಂಬ ಯುವಕ ‘ಪುಣ್ಯಕೋಟಿ ಮಲೆನಾಡು ಗಿಡ್ಡತಳಿ ಗೋ ಸೇವಾ ಕೇಂದ್ರ’ ಆರಂಭಿಸಿದ್ದಾರೆ. ಜಾನುವಾರನ್ನು ಹಾಲಿನ ಉತ್ಪನ್ನಗಳಿಗೆ ಮಾತ್ರ ಸೀಮಿತಗೊಳಿಸದೇ ಇತರ ಉತ್ಪನ್ನಗಳನ್ನೂ ಪಡೆಯಬಹುದು ಎಂದು ತೋರಿಸಿಕೊಡುತ್ತಿದ್ದಾರೆ. ಈ ಮೂಲಕ ಸ್ವಾವಲಂಬಿ ಜೀವನದೊಂದಿಗೆ ಗೋಮಯ ಉತ್ಪನ್ನಗಳ ಮಹತ್ವದ ಸಂದೇಶ ಸಾರುತ್ತಿದ್ದಾರೆ.

‘ಕ್ಷೀಣಿಸುವ ಹಂತದಲ್ಲಿರುವ ಮಲೆನಾಡು ಗಿಡ್ಡ ತಳಿಯನ್ನು ಸಂರಕ್ಷಿಸಬೇಕು ಎನ್ನುವ ಮೂಲ ಉದ್ದೇಶದಿಂದ ಗೋಸೇವಾ ಕೇಂದ್ರ ಆರಂಭಿಸಿದ್ದೆ. ನಂತರ ಗೋಮಯದಿಂದ ಪರಿಸರ ಪೂರಕ ಹಾಗೂ ಮನುಷ್ಯನ ಆರೋಗ್ಯ ವೃದ್ಧಿಗೆ ಅಗತ್ಯವಿರುವ ಉತ್ಪನ್ನಗಳನ್ನು ತಯಾರಿಸಬಹುದು ಎಂಬುದನ್ನು ತಿಳಿದುಕೊಂಡೆ. ಆರಂಭಿಕವಾಗಿ ಹಣತೆ, ಹೂವಿನ ಕುಂಡ, ಧೂಪದ ಕಡ್ಡಿ ತಯಾರಿಸಲಾಗುತ್ತಿದೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರು ಈಚೆಗೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ’ ಎಂದು ಗಣೇಶ ಲಮಾಣಿ ಹೇಳಿದರು.

‘ಗೋಮಯದಿಂದ ತಯಾರಿಸಿದ ದೀಪಗಳನ್ನು ಬೆಳಗಿಸಿದರೆ ಪರಿಸರ ರಕ್ಷಣೆಯಲ್ಲಿ ಕೈಜೋಡಿಸಿದಂತಾಗುತ್ತದೆ. ಈ ದೀಪಗಳ ತಯಾರಿಕೆಯಲ್ಲಿ ಯಾವುದೇ ರಾಸಾಯನಿಕ ಬಳಸುವುದಿಲ್ಲ. ಒಣ ಮತ್ತು ಹಸಿ ಗೋಮಯ ಹಾಗೂ ಗೋಮೂತ್ರವನ್ನು ಅಂಟಿನೊಂದಿಗೆ ಮಿಶ್ರಣ ಮಾಡಿ ಕೈಯಿಂದ ಹಣತೆಗಳನ್ನು ತಯಾರಿಸಲಾಗುತ್ತದೆ’ ಎಂದರು.

ದೀಪದೊಂದಿಗೆ ಉರಿಯುವ ಹಣತೆ:

‘ಬೆಂಗಳೂರು, ಮುಂಬೈ, ಪುಣೆ, ಗೋಕರ್ಣ, ಶಿವಮೊಗ್ಗ, ಧಾರವಾಡ, ಬೆಳಗಾವಿ, ಶಿರಸಿ ಸೇರಿದಂತೆ ಬೇರೆ ಕಡೆಗಳಿಂದ ಗೋಮಯ ಉತ್ಪನ್ನಗಳಿಗೆ ಬೇಡಿಕೆ ಬರುತ್ತಿದೆ. ದಿನವೊಂದಕ್ಕೆ 300ರಿಂದ 350 ಹಣತೆಗಳನ್ನು ತಯಾರಿಸಲಾಗುತ್ತಿದೆ. ಹಣತೆಯು ದೀಪದೊಂದಿಗೆ ಉರಿದು ವಾತಾವರಣ ಶುದ್ಧಗೊಳಿಸುತ್ತದೆ. ಹೂವಿನ ಕುಂಡ ಕ್ರಮೇಣ ಕರಗಿ ಗೊಬ್ಬರವಾಗುತ್ತದೆ. ಧೂಪದ ಕಡ್ಡಿ ಆರಿದ ನಂತರ ಅದರ ಬೂದಿಯನ್ನು ಗಾಯಕ್ಕೆ ಹಚ್ಚಿದರೆ ವಾಸಿಯಾಗುತ್ತದೆ’ ಎಂದು ಗಣೇಶ ಲಮಾಣಿ ವಿವರಿಸಿದರು.

–––––

* ಪಾರಂಪರಿಕವಾದ ಗಿಡ್ಡ ತಳಿಯ ರಕ್ಷಣೆಗೆ ಯುವಕನ ಶ್ರಮ ಶ್ಲಾಘನೀಯ. ಹಣತೆಯನ್ನು ಗೋಮಯದಿಂದ ಮಾಡಿರುವುದು ಪರಿಸರದ ಕಾಳಜಿಯನ್ನು ತೋರಿಸುತ್ತದೆ.

– ಶಿವರಾಮ ಹೆಬ್ಬಾರ, ಜಿಲ್ಲಾ ಉಸ್ತುವಾರಿ ಸಚಿವ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು