ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಶುಕ್ರವಾರ ಆರಂಭಗೊಂಡಿದ್ದು, ಮೊದಲ ದಿನದ ಪ್ರಥಮ ಭಾಷೆ ವಿಷಯ ಪರೀಕ್ಷೆ ಸುಸೂತ್ರವಾಗಿ ನಡೆಯಿತು.
ಕಾರವಾರ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಯಿಂದ ಒಟ್ಟೂ 18,382 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಕಾರವಾರ ಜಿಲ್ಲೆಯಿಂದ 9,007 ಹಾಗೂ ಶಿರಸಿಯಿಂದ 9,375 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೊಂದಾಯಿಸಿಕೊಂಡಿದ್ದರು. ಈ ಪೈಕಿ ಕಾರವಾರ ಜಿಲ್ಲೆಯಲ್ಲಿ 8,930 ಮಂದಿ ಹಾಜರಾಗಿದ್ದರೆ, 32 ಮಂದಿ ಗೈರಾಗಿದ್ದರು. ಶಿರಸಿಯಲ್ಲಿ 9,238 ಮಂದಿ ಹಾಜರಾಗಿದ್ದರೆ, 36 ವಿದ್ಯಾರ್ಥಿಗಳು ಗೈರಾಗಿದ್ದರು.
ಕಾರವಾರದ ಸೆಂಟ್ ಮೈಕಲ್ ಪ್ರೌಢಶಾಲೆ ಮತ್ತು ಶಿರಸಿಯ ಸೆಂಟ್ ಆಂತೋನಿ ಪ್ರೌಢಶಾಲೆಯಲ್ಲಿ ಖಾಸಗಿ ಅಭ್ಯರ್ಥಿಗಳಿಗೆ ಪರೀಕ್ಷೆ ಕೇಂದ್ರ ತೆರೆಯಲಾಗಿತ್ತು. ಇಲ್ಲಿ ಕ್ರಮವಾಗಿ 193 ಮತ್ತು 107 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.
ಪರೀಕ್ಷೆ ಸುಗಮವಾಗಿ ನಡೆಸುವ ದೃಷ್ಟಿಯಿಂದ ರಚಿಸಲಾಗಿದ್ದ ವಿಶೇಷ ವಿಚಕ್ಷಣ ದಳ, ಅಧಿಕಾರಿಗಳ ತಂಡ ವಿವಿಧ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿತ್ತು. ನಕಲು, ಇನ್ನಿತರ ಅಹಿತಕರ ಘಟನೆ ನಡೆಯದಂತೆ ಪರೀಕ್ಷೆ ಕೇಂದ್ರಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಕಾರವಾರ ಜಿಲ್ಲೆಯಲ್ಲಿ ಸುಮಾರು 70, ಶಿರಸಿಯಲ್ಲಿ 110ಕ್ಕೂ ಹೆಚ್ಚು ಅಂಗವಿಕಲ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಈ ಪೈಕಿ 10ಕ್ಕೂ ಹೆಚ್ಚು ಮಂದಿ ಸಹಾಯಕರ ನೆರವಿನೊಂದಿಗೆ ಪರೀಕ್ಷೆ ಬರೆದಿದ್ದರು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
‘ಮೊದಲ ದಿನದ ಪರೀಕ್ಷೆ ಸುಗಮವಾಗಿ ಜರುಗಿದೆ. ನಕಲು ಅಥವಾ ಇತರ ಕಾನೂನು ಬಾಹೀರ ಚಟುವಟಿಕೆ ನಡೆಯಲು ಆಸ್ಪದ ನೀಡಿಲ್ಲ. ಶಿಸ್ತುಬದ್ಧವಾಗಿ ಪರೀಕ್ಷೆ ನಡೆಯುವಂತೆ ನಿಗಾ ವಹಿಸಲಾಗಿತ್ತು’ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಪಿ. ಬಸವರಾಜ್ ತಿಳಿಸಿದ್ದಾರೆ.
––––––––––––
ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮಾಹಿತಿ
ತಾಲ್ಲೂಕು;ಹಾಜರಾದವರು;ಗೈರಾದವರು
ಕಾರವಾರ;1,803;18
ಅಂಕೋಲಾ;1,222;02
ಕುಮಟಾ;2,037;05
ಹೊನ್ನಾವರ;1,837;03
ಭಟ್ಕಳ;2,031;04
ಶಿರಸಿ;2,462;04
ಸಿದ್ದಾಪುರ;1,188;00
ಯಲ್ಲಾಪುರ;944;01
ಮುಂಡಗೋಡ;1,208;12
ಹಳಿಯಾಳ;2,706;18
ಜೊಯಿಡಾ;730;01
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.