ಶಿರಸಿ: ಸಿವಿಲ್ ಡಿಪ್ಲೊಮಾ ಎಂಜಿನಿಯರಿಂಗ್ ವಿಭಾಗದ ಪರೀಕ್ಷೆಯಲ್ಲಿ ಇಲ್ಲಿನ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ 70ರ ಹರೆಯದ ನಾರಾಯಣ ಎಸ್.ಭಟ್ಟ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
2019–20 ರಿಂದ 2021–22ನೇ ಸಾಲಿನ ಡಿಪ್ಲೊಮಾ ಪರೀಕ್ಷೆಯ ಫಲಿತಾಂಶವನ್ನು ರಾಜ್ಯ ತಾಂತ್ರಿಕ ಪರೀಕ್ಷಾ ಮಂಡಳಿ ಪ್ರಕಟಿಸಿದ್ದು ಶೇ.94ರಷ್ಟು ಅಂಕ ಗಳಿಕೆಯೊಂದಿಗೆ ಸಿವಿಲ್ ಡಿಪ್ಲೊಮಾ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ ಎಂಬ ಹಿರಿಮೆಗೆ ಇಳಿ ವಯಸ್ಸಿನ ವ್ಯಕ್ತಿ ಪಾತ್ರರಾಗಿದ್ದಾರೆ.
ತಾಲ್ಲೂಕಿನ ಸುಗಾವಿ ಮೂಲದ ನಾರಾಯಣ ಅವರು ಸದ್ಯ ಶಿರಸಿಯಲ್ಲಿ ನೆಲೆಸಿದ್ದಾರೆ. 1973ರಲ್ಲೇ ಮೆಕ್ಯಾನಿಕಲ್ ಡಿಪ್ಲೊಮಾ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ಬಳಿಕ ಕಾರವಾರ, ಗುಜರಾತ್ ಸೇರಿದಂತೆ ವಿವಿಧೆಡೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. 2013ರಲ್ಲಿ ನಿವೃತ್ತಿ ಪಡೆದು ಶಿರಸಿಗೆ ಮರಳಿದ್ದ ಅವರು ಪುನಃ ಡಿಪ್ಲೊಮಾ ಕಲಿಕೆಗೆ ಆಸಕ್ತಿ ತೋರಿದ್ದರು. ಅವರಿಗೆ ಪ್ರವೇಶಾತಿ ನೀಡಲು ತಾಂತ್ರಿಕ ಅಡಚಣೆ ಎದುರಾಗಿತ್ತು. ಅಂತಿಮವಾಗಿ 2019ರಲ್ಲಿ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ಡಿಪ್ಲೊಮಾ ವಿಭಾಗಕ್ಕೆ ಪ್ರವೇಶ ದೊರೆತಿತ್ತು.
‘ಇಳಿ ವಯಸ್ಸಿನಲ್ಲೂ ನಾರಾಯಣ ಅವರು ಪ್ರತಿ ತರಗತಿಗೆ ಹಾಜರಾಗುತ್ತಿದ್ದರು. ಓದು, ಪ್ರಾಯೋಗಿಕ ಚಟುವಟಿಕೆಯಲ್ಲೂ ಮುಂದಿದ್ದರು. ಪ್ರತಿ ಸೆಮಿಸ್ಟರ್ ನಲ್ಲೂ ಅವರು ಶೇ.90ಕ್ಕಿಂತ ಹೆಚ್ಚು ಅಂಕ ಸಾಧನೆ ಮಾಡುತ್ತಿದ್ದರು’ ಎನ್ನುತ್ತಾರೆ ಪ್ರಾಧ್ಯಾಪಕ ಸಂಜಯ ಕೂರ್ಸೆ.
‘ನಿವೃತ್ತಿ ಜೀವನವನ್ನು ಕಾಲಹರಣ ಮಾಡಿ ಕಳೆಯುವ ಬದಲು ಜ್ಞಾನಾರ್ಜನೆಗೆ ಮೀಸಲಿಡುವ ಆಸಕ್ತಿ ಹೊಂದಿದ್ದೆ’ ಎನ್ನುತ್ತಾರೆ ನಾರಾಯಣ ಭಟ್ಟ. ಅವರ ಮಕ್ಕಳು ಎಂಜಿನಿಯರಿಂಗ್ ಪಡೆದು ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.