ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಸಮರ್ಪಕ ನೀರಿಗಾಗಿ ಸುಧಾರಿತ ಪೈಪ್‍ಲೈನ್!

ನೀರು ಸರಬರಾಜು ವ್ಯವಸ್ಥೆ ಸುಧಾರಣೆಗೆ ಕ್ರಮ; ₹65 ಕೋಟಿ ವೆಚ್ಚದ ಯೋಜನೆ
Published : 14 ಸೆಪ್ಟೆಂಬರ್ 2024, 6:03 IST
Last Updated : 14 ಸೆಪ್ಟೆಂಬರ್ 2024, 6:03 IST
ಫಾಲೋ ಮಾಡಿ
Comments

ಶಿರಸಿ: ನಗರ ಪ್ರದೇಶದ ಜನರಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ತೊಡಕಾಗಿದ್ದ ದಶಕಗಳ ಹಿಂದಿನ ಪೈಪ್‍ಲೈನ್ ಸಂಪೂರ್ಣ ಬದಲಿಸಿ ಹೊಸ ಮಾರ್ಗ ನಿರ್ಮಿಸಲು ₹65 ಕೋಟಿ ವೆಚ್ಚದ ಯೋಜನೆ ಅನುಷ್ಠಾನವಾಗಿದ್ದು, ನಗರದ ಹೊರ ವಲಯದಲ್ಲಿ ಹೊಸ ಮಾರ್ಗಕ್ಕೆ ಬಳಸುವ ಪೈಪ್‍ಗಳ ಜೋಡಣೆ ಕಾರ್ಯ ಆರಂಭವಾಗಿದೆ. 

ನಗರದಲ್ಲಿ ಅಂದಾಜು 12 ಸಾವಿರ ನಳಗಳ ಮೂಲಕ ನಾಗರಿಕರಿಗೆ ನಗರಸಭೆಯಿಂದ ನೀರು ಪೂರೈಸಲಾಗುತ್ತಿದೆ. 80 ಸಾವಿರಕ್ಕೂ ಹೆಚ್ಚು ಜನರಿಗೆ ನಿತ್ಯ 65 ಲಕ್ಷ ಲೀಟರ್ ನೀರು ವಿತರಿಸಲು ನಗರಸಭೆ ಶ್ರಮಿಸುತ್ತಿದೆ. ಆದರೆ ಹಳತಾದ ನೀರ ಮಾರ್ಗದ ಪರಿಣಾಮ ಹಲವು ತೊಡಕುಗಳು ನಿತ್ಯ ಎದುರಾಗುತ್ತಿದ್ದು, ಸಮರ್ಪಕ ನೀರು ವಿತರಿಸಲಾಗದೆ ನಗರಸಭೆಯನ್ನು ಹೈರಾಣಾಗಿಸಿದೆ. 

ಈ ಹಿನ್ನೆಲೆಯಲ್ಲಿ ಶಾಸಕ ಭೀಮಣ್ಣ ನಾಯ್ಕ ಅವರ ಪ್ರಯತ್ನದ ಫಲವಾಗಿ ಅಮೃತ್ 0.2 ಯೋಜನೆಯಡಿ ನಗರದ ನೀರು ಸರಬರಾಜು ವ್ಯವಸ್ಥೆ ಸುಧಾರಣೆಗೆ ₹65 ಕೋಟಿ ಈಗಾಗಲೇ ಬಿಡುಗಡೆಯಾಗಿದೆ. ಈ ಮೊತ್ತದಲ್ಲಿ ನಗರದಲ್ಲಿ ಸಾಗಿರುವ ಹಳೆಯ ಜಲ ಮಾರ್ಗಗಳನ್ನು ತೆಗೆದು, ಹೊಸ ಹಾಗೂ ವೈಜ್ಞಾನಿಕ ಮಾರ್ಗ ರಚಿಸುವುದು, ಹಳೆಯ ಪೈಪ್ ಬದಲಿಗೆ ಸುಧಾರಿತ ಹಾಗೂ ಗುಣಮಟ್ಟದ ಪೈಪ್ ಜೋಡಿಸುವುದು ಹಾಗೂ ನಳಗಳಿಗೆ ಸಂಪರ್ಕ ಕಲ್ಪಿಸುವುದು ಯೋಜನೆಯ ಭಾಗವಾಗಿದೆ.

‘ಕಾಮಗಾರಿಗೆ ಪೂರಕವಾಗಿ ಪ್ರಸ್ತುತ ನಗರದ ಹೊರವಲಯದಲ್ಲಿ ನಗರದ ಪ್ರಮುಖ ಭಾಗದಲ್ಲಿ ಸಾಗುವ ದೊಡ್ಡದಾದ ಪೈಪ್‍ಗಳ ಜೋಡಣೆ ಕಾರ್ಯ ಕೂಡ ಆರಂಭವಾಗಿದೆ' ಎಂದು ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ ಹೇಳಿದರು. 

‘ದಶಕಗಳ ಹಿಂದೆ ಆಗಿನ ಜನಸಂಖ್ಯೆ, ರಸ್ತೆ, ಕಟ್ಟಡಗಳನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಮಿಸಿದ ಪೈಪ್‍‍ಲೈನ್‍ಗಳು ದುರಸ್ತಿ ಹಂತದಲ್ಲಿವೆ. ಹಲವೆಡೆ ಹೆಚ್ಚುವರಿ ಸಂಪರ್ಕ ನೀಡಿದ ಪರಿಣಾಮ ನೀರ ಹರಿವು ಸರಿಯಾಗಿಲ್ಲ. ಇದರಿಂದ ಎತ್ತರದ ಪ್ರದೇಶದಲ್ಲಿರುವ ನಳಗಳಿಗೆ ನೀರು ಹರಿಯದೆ ಸಮಸ್ಯೆ ಅನುಭವಿಸುವಂತಾಗಿದೆ. ಈಗಾಗಲೇ ನಗರದಲ್ಲಿನ ರಸ್ತೆ ದುರಸ್ತಿ ಕಾಮಗಾರಿಗೆ ಹಲವೆಡೆ ಅಗೆದ ಪರಿಣಾಮ ಹಳೆಯ ಪೈಪ್‍ಲೈನ್‍ಗಳು ತುಂಡಾಗಿ, ನಂತರ ಜೋಡಿಸಿದ ಉದಾಹರಣೆಗಳಿವೆ. ಪೈಪ್ ಮರು ಜೋಡಿಸಿದ ಜಾಗದಲ್ಲಿ ನೀರು ಪೋಲಾಗುತ್ತಿರುವುದು ಹೆಚ್ಚುತ್ತಿದೆ. ಇವೆಲ್ಲ ಕಾರಣ ಎರಡು ಮೂರು ದಿನಗಳಿಗೊಮ್ಮೆ ನೀರು ಸರಬರಾಜು ಮಾಡುವ ಅನಿವಾರ್ಯತೆ ನಗರಸಭೆಗೆ ಎದುರಾಗಿತ್ತು. ಪ್ರಸ್ತುತ ಜಾರಿಗೊಂಡಿರುವ ಯೋಜನೆಯಡಿ ಹೊಸ ಪೈಪ್‍ಲೈನ್ ಅಳವಡಿಕೆಯಾದರೆ ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಓವರ್ ಹೆಡ್ ಟ್ಯಾಂಕ್‍ಗಳ ಬಳಿಯಿಂದ ನಳಗಳವರೆಗೆ ಹೊಸ ಪೈಪ್ ಜೋಡಣೆಯಾದರೆ ಪ್ರತಿಯೊಂದು ನಳಕ್ಕೂ ಸಮರ್ಪಕ ನೀರು ವಿತರಿಸಲು ಸಾಧ್ಯವಾಗುತ್ತದೆ’ ಎಂದು ನಗರಾಡಳಿತದ ಅಧಿಕಾರಿಗಳು ಹೇಳುತ್ತಾರೆ.

ಅಮೃತ್ 0.2 ಯೋಜನೆಯಡಿ ನಗರದ ನೀರು ಸರಬರಾಜು ವ್ಯವಸ್ಥೆ ಸುಧಾರಣೆ 12 ಸಾವಿರಕ್ಕೂ ಹೆಚ್ಚು ನಳಗಳಿಗೆ ಸಂಪರ್ಕ 80 ಸಾವಿರ ಜನರಿಗೆ ಅನುಕೂಲ 
ಬೇಸಿಗೆ ಸೇರಿದಂತೆ ವರ್ಷ ಪೂರ್ತಿ ನಗರದ ಜನತೆಗೆ ನೀರು ಪೂರೈಸಲು ಅನುಕೂಲ ಆಗಲಿದೆ. ಹೊಸ ಪೈಪ್ ಅಳವಡಿಕೆಯಿಂದ ನೀರು ಪೋಲಾಗುವುದು ತಪ್ಪುತ್ತದೆ
ಭೀಮಣ್ಣ ನಾಯ್ಕ ಶಾಸಕ
ಅಮೃತ್ 0.2 ಯೋಜನೆ ಸಮರ್ಪಕ ಅನುಷ್ಠಾನದಿಂದ ನಗರಕ್ಕೆ ಎದುರಾಗುವ ನೀರಿನ ಬವಣೆಯಿಂದ ಮುಕ್ತಿ ಸಿಗಲಿದೆ. ಎತ್ತರದ ಎಲ್ಲ ಪ್ರದೇಶಕ್ಕೂ ನೀರು ನೀಡಲು ಸಾಧ್ಯವಾಗುತ್ತದೆ
ಕಾಂತರಾಜ್ ಪೌರಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT