ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತವಾಗಿರುವ ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಟಿಸಲು ಅನಂತಕುಮಾರ ಹೆಗಡೆ ಯತ್ನ: ಆರೋಪ

Published 14 ಜನವರಿ 2024, 7:10 IST
Last Updated 14 ಜನವರಿ 2024, 7:10 IST
ಅಕ್ಷರ ಗಾತ್ರ

ಕಾರವಾರ: ‘ಶಾಂತವಾಗಿರುವ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸುವ ಪ್ರಯತ್ನವನ್ನು ಸಂಸದ ಅನಂತಕುಮಾರ ಹೆಗಡೆ ನಡೆಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ವಕ್ತಾರ ಕೆ.ಶಂಭು ಶೆಟ್ಟಿ ಆರೋಪಿಸಿದರು.

ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆ ಸಮೀಪಿಸಿದಂತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಸಂಸದ ವಿವಾದ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ’ ಎಂದರು.

'ಅನಂತಕುಮಾರ ತಮ್ಮ ಭಾಷಣದಲ್ಲಿ ಮಾತ್ರ ದ್ವೇಷಿಸುವ ಸಮುದಾಯದ ಜತೆಗೆ ವ್ಯಾವಹಾರಿಕ ಸಂಬಂಧ ಹೊಂದಿದ್ದಾರೆ. ಆದರೆ, ಜನರನ್ನು ಮಾತ್ರ ತಪ್ಪು ದಾರಿಗೆ ಎಳೆದು ಸಮಾಜದಲ್ಲಿ ದ್ವೇಷ ವಾತಾವರಣ ನಿರ್ಮಿಸುವ ಕೆಲಸ ಮಾಡುತ್ತಿದ್ದಾರೆ' ಎಂದು ಟೀಕಿಸಿದರು.

'ಕೆಲವು ದಶಕದಿಂದ ಜಿಲ್ಲೆಯನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿದ್ದರೂ ಜಿಲ್ಲೆಗೆ ಅವರ ಕೊಡುಗೆ ಶೂನ್ಯ. ಜನರು ಅವರನ್ನು ಸಹಿಸಿಕೊಂಡಿದ್ದರು. ನಾಲ್ಕು ವರ್ಷಗಳಿಂದ ನಾಪತ್ತೆಯಾಗಿದ್ದರು. ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯ ಕಾರಣಕ್ಕೆ ಹತ್ತಾರು ಜನರು ಅಪಘಾತದಲ್ಲಿ ಮೃತಪಟ್ಟರೂ ಸಂಸದರು ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ' ಎಂದರು.

'ಸಂಸದರಿಗೆ ಅನಾರೋಗ್ಯ ಕಾಡಿದೆ ಎಂದು ಗುಲ್ಲೆಬ್ಬಿಸಲಾಗಿತ್ತು. ಜನರು ಇದನ್ನು ನಂಬಿ ಸುಮ್ಮನಿದ್ದರು. ಆದರೆ ಈಗ ಅವರು ಸಮಾಜದಲ್ಲಿ ಅಶಾಂತಿ ಕದಡುವ ಹೇಳಿಕೆ ನೀಡುತ್ತ ಮುನ್ನೆಲೆಗೆ ಬರುವ ಯತ್ನ ನಡೆಸಿದ್ದಾರೆ' ಎಂದರು.

'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅಗೌರವದ ರೀತಿಯಲ್ಲಿ ಮಾತನಾಡಿದ್ದಾರೆ. ಕಾಂಗ್ರೆಸ್ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಗಾಂಧಿ, ನೆಹರು ಕುಟುಂಬದ ಮೇಲೆ ಅವರಿಗೆ ದ್ವೇಷ ಭಾವನೆ ಇದ್ದಂತಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT