ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಭತ್ತ ಬೆಳೆಯಲು ರೈತರ ನಿರಾಸಕ್ತಿ

ತೋಟಗಾರಿಕೆ, ವಾಣಿಜ್ಯ ಬೆಳೆಗಳತ್ತ ರೈತರ ಚಿತ್ತ
Published 22 ಮೇ 2024, 5:40 IST
Last Updated 22 ಮೇ 2024, 5:40 IST
ಅಕ್ಷರ ಗಾತ್ರ

ಶಿರಸಿ: ಭತ್ತದ ಅಸ್ಥಿರ ಮಾರುಕಟ್ಟೆ, ನೀರಿನ ಕೊರತೆ, ವಾಣಿಜ್ಯ ಹಾಗೂ ತೋಟಗಾರಿಕಾ ಬೆಳೆಗಳ ಸ್ಥಿರ ಹಾಗೂ ಉತ್ತಮ ಧಾರಣೆ ಮತ್ತಿತರ ಕಾರಣಗಳಿಗೆ ಉತ್ತರ ಕನ್ನಡದಲ್ಲಿ ಭತ್ತ ಬೆಳೆಯುವ ಕ್ಷೇತ್ರ ವೇಗವಾಗಿ ಕಣ್ಮರೆಯಾಗುತ್ತಿದೆ.

ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ ಬರೊಬ್ಬರಿ ಒಂಭತ್ತು ಸಾವಿರ ಹೆಕ್ಟೇರ್ ಭತ್ತ ಕ್ಷೇತ್ರ ಇನ್ನಿತರ ವಾಣಿಜ್ಯ ಬೆಳೆಗಳ ಕ್ಷೇತ್ರವಾಗಿ ಮಾರ್ಪಟ್ಟಿದೆ. ಶಿರಸಿಯ ಬನವಾಸಿ, ಮುಂಡಗೋಡ, ಸಿದ್ದಾಪುರ ಭಾಗದಲ್ಲಿ ಅತಿ ಹೆಚ್ಚಿನ ಭತ್ತ ಕೃಷಿ ಮಾಡಲಾಗುತ್ತಿತ್ತು.  ಆದರೆ ಈಗ ಅಲ್ಪಾವಧಿ ಬೆಳೆಗೆ ಈ ಭಾಗದ ಕೃಷಿಕರು ನಿರಾಸಕ್ತಿ ತೋರುತ್ತಿದ್ದಾರೆ.

'2019-20ರಲ್ಲಿ 75 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದ್ದ ಭತ್ತ, 2020-21ರಲ್ಲಿ 74 ಸಾವಿರ ಹೆಕ್ಟೇರ್, 2021-22ರಲ್ಲಿ 73 ಸಾವಿರ ಹೆಕ್ಟೇರ್, 2022-23ರಲ್ಲಿ 69 ಸಾವಿರ ಹೆಕ್ಟೇರ್ ಹಾಗೂ 2023-24ನೇ ಸಾಲಿನಲ್ಲಿ 66 ಸಾವಿರ ಹೆಕ್ಟೇರ್‌ಗೆ ಇಳಿದಿದೆ. ಬಹುತೇಕ ಭತ್ತ ಬೆಳೆಗಾರರು ಅಡಿಕೆ ಕೃಷಿಯತ್ತ ಒಲವು ತೋರಿದರೆ ಕೆಲವರು ಅನಾನಸ್, ಶುಂಠಿ ಬೆಳೆಯತ್ತ ಆಕರ್ಷಿತರಾಗಿರುವುದು ಇದಕ್ಕೆ ಕಾರಣ' ಎಂಬುದು ಇಲಾಖೆ ಮಾಹಿತಿಯಾಗಿದೆ.

'ಭತ್ತದ ಬೆಳೆ ಬೆಳೆಸಲು ಎಕರೆಗೆ ಸುಮಾರು ₹45-₹50 ಸಾವಿರ ವೆಚ್ಚ ತಗಲುತ್ತದೆ. 16ರಿಂದ 18 ಕ್ವಿಂಟಲ್‌ ಭತ್ತ ಬೆಳೆಯಬಹುದು. ಇದರ ಲೆಕ್ಕ ಹಾಕಿದರೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಎಂಬ ಕಾರಣಕ್ಕೆ ಭತ್ತದಿಂದ ವಿಮುಖರಾಗುತ್ತಿದ್ದಾರೆ. ಇದರ ಜತೆ ಕೂಲಿ ಕಾರ್ಮಿಕರ ಕೊರತೆ, ಕೂಲಿ ದರ ಹೆಚ್ಚಳ, ಅಕಾಲಿಕ ಮಳೆ, ಬರ, ಕಾಡುಪ್ರಾಣಿಗಳ ಕಾಟದಿಂದ ಅಲ್ಪಾವಧಿ ಭತ್ತ ಬೆಳೆ ಬೆಳೆಯುವುದೇ ಸವಾಲಿನ ಕೆಲಸವಾಗಿದೆ. ಕೊಟ್ಟಿಗೆಯಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆ ಆಗಿರುವುದರಿಂದ ಮೇವು, ಹುಲ್ಲಿಗೆ ಅಷ್ಟೊಂದು ಬೇಡಿಕೆ ಇಲ್ಲ. ಕೃಷಿಕರ ಕುಟುಂಬಗಳಲ್ಲಿ ಯುವಕರು ನಗರದತ್ತ ವಲಸೆ ಹೋಗಿರುವುದು ಈ ಎಲ್ಲ ಕಾರಣದಿಂದ ಮನೆ ಖರ್ಚಿಗೆಂದು ಬೆಳೆಯುತ್ತಿದ್ದ ಭತ್ತ ಬೆಳೆ ಕ್ಷೇತ್ರವೂ ಕ್ಷೀಣವಾಗುತ್ತಿದೆ' ಎಂಬುದು ಭತ್ತ ಬೆಳೆಗಾರರ ಮಾತಾಗಿದೆ.

'ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿ, ಮುಂಡಗೋಡ, ಸಿದ್ದಾಪುರ, ಯಲ್ಲಾಪುರದ ಕೆಲ ಭಾಗದಲ್ಲಿ ಅಡಿಕೆ ಕ್ಷೇತ್ರ ವಿಸ್ತರಣೆ ಹಿನ್ನೆಲೆ ಭತ್ತ ಬೆಳೆಯುವವರು ಇಲ್ಲದಂತಾಗಿದೆ. ಘಟ್ಟದ ಕೆಳ ತಾಲ್ಲೂಕುಗಳಲ್ಲಿ ಹೆದ್ದಾರಿ ವಿಸ್ತರಣೆಗೆ ಭತ್ತ ಕ್ಷೇತ್ರ ಬಳಕೆಯಾಗಿದೆ. ಕಳೆದೆರಡು ವರ್ಷಗಳಲ್ಲಿ ಅಡಿಕೆ ದರ ಏರುಗತಿ ಆದ ಪರಿಣಾಮ ಭತ್ತ ಬೆಳೆಯುವ ಕ್ಷೇತ್ರ ಗಣನೀಯವಾಗಿ ಇಳಿದಿದೆ' ಎಂಬುದು ಕೃಷಿ ಅಧಿಕಾರಿಗಳ ಮಾತಾಗಿದೆ.

ಭತ್ತ ಬೆಳೆಯುವುದು ಎಂದರೆ ಸಾಲ ಮೈಮೇಲೆ ಎಳೆದುಕೊಂಡಂತೆ. ಆದರೆ ಅಡಿಕೆಗೆ ಸ್ಥಿರ ಹಾಗೂ ಉತ್ತಮ ಧಾರಣೆಯಿದೆ. ಹೀಗಾಗಿ ಬಯಲು ಸೀಮೆಯ ಬಹುತೇಕ ಭತ್ತ ಕ್ಷೇತ್ರ ಅಡಿಕೆ ತೋಟವಾಗಿ ಮಾರ್ಪಡುತ್ತಿವೆ.
–ರಾಜಶೇಖರ ಗೌಡ ದಾಸನಕೊಪ್ಪ, ಕೃಷಿಕ
ಅಡಿಕೆ ಹಾಗೂ ಭತ್ತದ ದರದ ನಡುವಿನ ಲಾಭ ನಷ್ಟದ ಲೆಕ್ಕಾಚಾರ ತೆಗೆದ ಪರಿಣಾಮ ಭತ್ತದಲ್ಲಿ ಶ್ರಮ ಖರ್ಚು ಜಾಸ್ತಿ ಎಂಬುದನ್ನು ಮನಗಂಡು ಅನ್ನ ಕೊಡುವ ಬೆಳೆಯಿಂದ ರೈತರು ದೂರವಾಗುತ್ತಿದ್ದಾರೆ.
–ಹೊನ್ನಪ್ಪ ಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT