ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ | ಬಿಸಿಲು ಮಳೆಯಾಟ: ಅಡಿಕೆ ಬೆಳೆಗಾರರಿಗೆ ಸಂಕಷ್ಟ

ಅಡಿಕೆ ಬೆಳೆಗೆ ವ್ಯಾಪಿಸುತ್ತಿರುವ ಕೊಳೆ ರೋಗ: ದ್ರಾವಣ ಸಿಂಪಡಿಸಿದರೂ ಬಾರದ ನಿಯಂತ್ರಣ
Published 29 ಜೂನ್ 2024, 5:15 IST
Last Updated 29 ಜೂನ್ 2024, 5:15 IST
ಅಕ್ಷರ ಗಾತ್ರ

ಶಿರಸಿ: ಮಳೆ-ಬಿಸಿಲಿನ ವೈಪರಿತ್ಯದಿಂದಾಗಿ ತಾಲ್ಲೂಕಿನಲ್ಲಿ ಅಡಿಕೆಗೆ ಕೊಳೆ ರೋಗ ವ್ಯಾಪಕವಾಗುತ್ತಿದೆ. ತೋಟ ಪಟ್ಟಿಗಳಲ್ಲಿ ಬೋರ್ಡೊ ದ್ರಾವಣ ಸಿಂಪಡಣೆ ಜೋರಾಗಿದ್ದರೂ ರೋಗ ಹರಡುತ್ತಿರುವುದು ಬೆಳೆಗಾರರ ಚಿಂತೆಗೆ ಕಾರಣವಾಗಿದೆ.

ತಾಲ್ಲೂಕಿನಲ್ಲಿ ನಿತ್ಯವೂ ಸುರಿವ ತುಂತುರು ಮಳೆ ನಡುವೆ ಬಿಸಿಲು ಕಾಣಿಸಿಕೊಳ್ಳುತ್ತಿದೆ. ಮಳೆ ಬಂದ ನಂತರ ಕೆಲ ಹೊತ್ತು ಬಿಸಿಲು ಆವರಿಸುವುದರಿಂದ ಅಡಿಕೆ ಬೆಳೆಗೆ ಕೊಳೆ ರೋಗದ ಸಮಸ್ಯೆ ತೀವ್ರವಾಗುತ್ತಿದೆ. ಈಗಾಗಲೇ ಅಡಿಕೆ ಬಲಿಯುವ ಹಂತದಲ್ಲಿದ್ದು, ಕೊಳೆ ಬಾಧಿಸಿದ ಕಾರಣ ಗೊನೆಯಿಂದ ಅಡಿಕೆ ಉದುರುತ್ತಿದೆ. ಕಳೆದ ಬೇಸಿಗೆಯಲ್ಲಿ ಅತಿ ಉಷ್ಣಾಂಶದಿಂದ ಸಿಂಗಾರ ಒಣಗಿ ಇಳುವರಿ ಕುಂಠಿತದ ಆತಂಕ ಅನುಭವಿಸುತ್ತಿದ್ದ ಅಡಿಕೆ ಬೆಳೆಗಾರರಿಗೆ ಇದೀಗ ವಿಸ್ತರಿಸುತ್ತಿರುವ ಕೊಳೆ ರೋಗ ಗಾಯದ ಮೇಲೆ ಬರೆ ಎಳೆದಂತಾಗಿದೆ.

‘ಬಿಸಿಲು ಮಿಶ್ರಿತ ಮಳೆಯಿಂದ ಬಹಳ ಬೇಗ ರೋಗಾಣುಗಳು ಜೀವ ಪಡೆದು ಅಡಿಕೆ ಫಸಲನ್ನು ಆಹುತಿ ಪಡೆಯುತ್ತಿವೆ. ತಾಲ್ಲೂಕಿನ ಸಾಲಕಣಿ, ಹುಲೇಕಲ್, ವಾನಳ್ಳಿ, ಜಡ್ಡಿಗದ್ದೆ, ಬಂಡಲ, ನೆಗ್ಗು, ಮಂಜುಗುಣಿ ಸೇರಿ ಹಲವೆಡೆ ಕಳೆದ ಸಾಲಿನಲ್ಲಿ ಬಾಧಿಸಿದ ಕೊಳೆ ರೋಗಕ್ಕೆ ತುತ್ತಾದ ಮರಗಳಲ್ಲಿ ಹಾಗೆಯೇ ಉಳಿದ ಫಂಗಸ್‌ನಿಂದ ಈಗ ರೋಗ ಉಲ್ಬಣಗೊಂಡಿದ್ದು, ಈಗಾಗಲೇ ಎರಡು ಬಾರಿ ಬೋರ್ಡೊ ಸಿಂಪಡಣೆ ಮಾಡಿದ್ದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ’ ಎಂಬ ಕೊರಗು ಈ ಭಾಗದ ರೈತರದ್ದಾಗಿದೆ.

ಕಳೆದ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಅಧಿಕ ಬಿಸಿಲಿನ ವಾತಾವರಣದಿಂದ ಅಡಿಕೆ ಮರದ ಗರಿಗಳು ಒಣಗುವುದರ ಜತೆಗೆ ಹಿಂಗಾರಕ್ಕೂ ಕುತ್ತು ಬಂದು ಅಡಿಕೆ ಫಸಲ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಈಗ ಕೊಳೆ ರೋಗ ಆವರಿಸಿರುವ ಕಾರಣ ಮತ್ತಷ್ಟು ಇಳುವರಿ ಕುಂಠಿತದ ಆತಂಕ ಎದುರಾಗಿದೆ.

ಈಗಾಗಲೇ ಶೇ 20ರಷ್ಟು ಬೆಳೆ ನೆಲಕ್ಕೆ ಬಿದ್ದು ಹಾಳಾಗಿದೆ. ಮಂಗಗಳ ಕಾಟವೂ ವಿಪರೀತವಾಗಿದೆ. ಇವೆಲ್ಲ ಸಮಸ್ಯೆಗಳ ನಡುವೆ ಬೇಸಿಗೆಯಲ್ಲಿ ಔಷಧ ಸಿಂಪಡಿಸುವ ಜತೆಗೆ ಮಳೆ ಆರಂಭದೊಂದಿಗೆ ಬೋರ್ಡೋ ದ್ರಾವಣ ಸಿಂಪಡಣೆ ಮಾಡಿದರೂ ಬಿಸಿಲು, ಮಳೆಯ ಕಾರಣಕ್ಕೆ ರೋಗ ಹೆಚ್ಚುತ್ತಿದೆ. ಮಳೆಗಾಲದ ಆರಂಭದಲ್ಲಿ ಈ ರೀತಿಯಾದರೆ ಫಸಲು ಕೈಸೇರುವ ತನಕ ಇನ್ನಷ್ಟು ಸಮಸ್ಯೆ ಅನುಭವಿಸಬೇಕೋ? ಎಂಬುದು ಬೆಳೆಗಾರರ ಆತಂಕವಾಗಿದೆ.

ಕಳೆದ ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಿದ್ದ ಕಾರಣ ಅಡಿಕೆ ಬೆಳೆಗಾರರು ಶೇ 60ಕ್ಕಿಂತ ಹೆಚ್ಚಿನ ಬೆಳೆ ಕಳೆದುಕೊಂಡಿದ್ದರು. ಈಗ ಬಿಸಿಲು ಮಳೆಯ ಕಾರಣಕ್ಕೆ ಕೊಳೆ ರೋಗ ವಿಸ್ತರಿಸುವ ಆತಂಕ ಕಾಡುತ್ತಿದೆ
ಕೃಷ್ಣಮೂರ್ತಿ ಹೆಗಡೆ ಅಡಿಕೆ ಬೆಳೆಗಾರ ಶಿರಸಿ
ರೈತರು ಮುನ್ನೆಚ್ಚರಿಕೆ ಕ್ರಮವಾಗಿ ಬೋರ್ಡ್ ದ್ರಾವಣವನ್ನು ಪ್ರತಿಯೊಂದು ಅಡಿಕೆ ಗಿಡದ ಹಿಂಗಾರ ಕಾಯಿ ಎಲೆ ಸುಳಿಭಾಗ ಸಂಪೂರ್ಣ ತೊಯ್ಯವ ಹಾಗೆ ಸಿಂಪರಣೆ ಮಾಡಬೇಕು. ನಂತರ ಹವಾಮಾನ ಆಧರಿಸಿ 40-45 ದಿನಗಳ ಅಂತರದಲ್ಲಿ ಸಿಂಪರಣೆಯನ್ನು ಪುನಾರಾವರ್ತಿಸಬೇಕು. 
ಸತೀಶ ಹೆಗಡೆ ತೋಟಗಾರಿಕಾ ಇಲಾಖೆ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT