ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲತೀರದಲ್ಲಿ ಬಂಗಡೆ ಬಳ್ಳಿ ತೆರವು: ತೀವ್ರ ಆಕ್ಷೇಪ

Published 18 ಜೂನ್ 2023, 14:50 IST
Last Updated 18 ಜೂನ್ 2023, 14:50 IST
ಅಕ್ಷರ ಗಾತ್ರ

ಕಾರವಾರ: ಬಿಪೊರ್ ಜಾಯ್ ಚಂಡಮಾರುತದ ಪರಿಣಾಮವಾಗಿ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡು ಕಳೆದ ಒಂದು ವಾರದಿಂದ ಜಿಲ್ಲೆಯ ಕಡಲತೀರಗಳಲ್ಲಿ ಕಡಲ್ಕೊರೆತದ ಆತಂಕ ಹುಟ್ಟಿಸಿದೆ. ಇಂತಹ ಹೊತ್ತಲ್ಲಿ ಕಡಲು ಕೊರೆತದಿಂದ ಮರಳಿನ ಸವಕಳಿ ಪ್ರಮಾಣ ನಿಯಂತ್ರಿಸಬಲ್ಲ ಬಂಗಡೆ ಬಳ್ಳಿ (ಬೀಚ್ ಮಾರ್ನಿಂಗ್ ಗ್ಲೋರಿ) ಸಂರಕ್ಷಣೆಯ ಚರ್ಚೆಯೂ ನಡೆದಿದೆ.

ಆದರೆ, ಭಾನುವಾರ ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ನಗರಸಭೆ ಕಡಲತೀರ ಸ್ವಚ್ಛಗೊಳಿಸುವ ನೆಪದಲ್ಲಿ ಸುಮಾರು 30 ಮೀ.ಗೂ ಹೆಚ್ಚು ಪ್ರದೇಶದಲ್ಲಿ ಹಬ್ಬಿಕೊಂಡಿದ್ದ ಬಂಗಡೆ ಬಳ್ಳಿಯನ್ನು ತೆರವುಗೊಳಿಸಿದೆ. ಇದಕ್ಕೆ ಕೆಲವರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. ಬಳ್ಳಿ ಇದ್ದ ಜಾಗದಿಂದ ಸ್ವಲ್ಪವೇ ಅಂತರದವರೆಗೂ ಅಲೆಗಳು ಅಪ್ಪಳಿಸುತ್ತಿದ್ದು ಮರಳಿನ ಸವಕಳಿ ಉಂಟಾಗುತ್ತಿದೆ.

‘ಟ್ಯಾಗೋರ್ ಕಡಲತೀರದಲ್ಲಿಯೂ ಕಡಲು ಕೊರೆತದ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಡಲಿನ ಅಬ್ಬರದಿಂದ ತೀರದ ಚಿತ್ರಣವೂ ಬದಲಾಗುತ್ತಿದೆ. ಸ್ವಚ್ಛತೆ ಮಾಡುವ ನೆಪದಲ್ಲಿ ಮರಳಿನ ಸವಕಳಿ ನಿಯಂತ್ರಿಸುವ ರಾಶಿಗಟ್ಟಲೆ ಬಂಗಡೆ ಬಳ್ಳಿಯನ್ನು ತೆರವುಗೊಳಿಸಿದ್ದು ಸರಿಯಲ್ಲ. ಇದರಿಂದ ಕಡಲತೀರದ ಹಾನಿ ಪ್ರಮಾಣ ಮತ್ತಷ್ಟು ಹೆಚ್ಚಬಹುದು’ ಎಂದು ಮೀನುಗಾರ ವಿನಯ ಬಾನಾವಳಿಕರ್ ಆತಂಕ ವ್ಯಕ್ತಪಡಿಸಿದರು.

‘ಬುಧವಾರ ಕಡಲತೀರದಲ್ಲಿ ಕಾರ್ಯಕ್ರಮವೊಂದು ನಡೆಯಲಿದ್ದು ಅದಕ್ಕಾಗಿ ಸೂಕ್ತ ಜಾಗ ಸಿದ್ಧಪಡಿಸಲಾಗುತ್ತಿದೆ. ಅದಕ್ಕಾಗಿ ಬಳ್ಳಿಗಳನ್ನು ತೆರವುಗೊಳಿಸುವುದು ಅನಿವಾರ್ಯವಾಯಿತು. ಆದರೆ ಆ ಪ್ರದೇಶದಲ್ಲಿ ದೊಡ್ಡ ದಿಬ್ಬವಿದ್ದು ಕಡಲು ಕೊರೆತದ ಆತಂಕ ಅಷ್ಟಾಗಿ ಇಲ್ಲ’ ಎಂದು ನಗರಸಭೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT