ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಡಸಗಾಂವದಲ್ಲಿ ಬೆಟ್ಟದಷ್ಟು ಸಮಸ್ಯೆ

ಜೆಜೆಎಂ ಯೋಜನೆಯಡಿ ನಳ ಸಂಪರ್ಕ ಕಲ್ಪಿಸಿದರೂ ಬಾರದ ನೀರು
ಶಾಂತೇಶ ಬೆನಕನಕೊಪ್ಪ
Published 14 ಫೆಬ್ರುವರಿ 2024, 5:10 IST
Last Updated 14 ಫೆಬ್ರುವರಿ 2024, 5:10 IST
ಅಕ್ಷರ ಗಾತ್ರ

ಮುಂಡಗೋಡ: ಬಿಜ್ಜಳನ ಉಪರಾಜಧಾನಿ ಆಗಿ ಮೆರೆದಂತಹ ಊರಿನಲ್ಲಿ, ಸಮಸ್ಯೆಗಳ ಸರಮಾಲೆಯೇ ಇದೆ. ಊರ ತುಂಬ ಕಂಡುಬರುವ ಶಿಲಾಶಾಸನಗಳು ಗತಕಾಲದ ವೈಭವವನ್ನು ಸಾರುತ್ತಿವೆ. ಆದರೆ, ಪುರಾತನ ಕಾಲದ ದೇವಸ್ಥಾನಗಳ ಅಭಿವೃದ್ಧಿಗೆ ಕಾಯಕಲ್ಪ ಆಗಬೇಕಿದೆ.

ಭೌಗೋಳಿಕವಾಗಿ ಅರೆಮಲೆನಾಡು ತಾಲ್ಲೂಕಿನಲ್ಲಿದ್ದರೂ, ಅಪ್ಪಟ ಮಲೆನಾಡಿನ ಸೆರಗು ಹೊದ್ದುಕೊಂಡಿರುವ ಬೆಡಸಗಾಂವ ಗ್ರಾಮದಲ್ಲಿ ಶಾಶ್ವತ ಕುಡಿಯುವ ನೀರು ಯೋಜನೆ, ಅತಿಕ್ರಮಣ ಸಮಸ್ಯೆ, ನಿವೇಶನ ರಹಿತರಿಗೆ ಸೂರು ಒದಗಿಸುವುದು, ವನ್ಯಪ್ರಾಣಿಗಳಿಂದ ಬೆಳೆಗಳ ರಕ್ಷಣೆ ಸೇರಿದಂತೆ ಹಲವು ಬೇಡಿಕೆಗಳು ಈಡೇರಿಕೆಗಾಗಿ ಕಾಯುತ್ತಿವೆ.

ಶ್ರೀರಾಮನು ವನವಾಸದ ಸಮಯದಲ್ಲಿ ಈ ಪ್ರದೇಶದಲ್ಲಿ ಸಂಚರಿಸಿ, ಸೀತಾಮಾತೆಯ ಬಾಯಾರಿಕೆ ನೀಗಿಸಲು ಕಪ್ಪುಬಂಡೆಗೆ ಬಾಣ ಬಿಟ್ಟು ನೀರು ಹರಿಸಿದ್ದರ ಉಲ್ಲೇಖವಿದೆ. ಬಂಡೆಗಲ್ಲಿನ ಅಡಿಯಿಂದ ನಿರಂತರವಾಗಿ ನೀರು ಹರಿಯುವುದನ್ನು ಇಂದಿಗೂ ಕಣ್ತುಂಬಿಕೊಳ್ಳಬಹುದು. ಆದರೆ, ಈ ಊರೂ ನೀರಿನ ಸಮಸ್ಯೆಯಿಂದ ಹೊರತಾಗಿಲ್ಲ.

‘ಊರಿಂದ ಕೆಲವೇ ಕಿ.ಮೀ ಅಂತರದಲ್ಲಿರುವ ‘ಧರ್ಮಾ’ ಜಲಾಶಯದಿಂದ ಕುಡಿಯುವ ನೀರು ಯೋಜನೆ ಜಾರಿಗೊಳಿಸಬೇಕು. ಗ್ರಾಮದಲ್ಲಿ ಹಲವಾರು ಕೆರೆಗಳಿದ್ದು, ಅವುಗಳನ್ನು ಕೆರೆ ತುಂಬಿಸುವ ಯೋಜನೆ ವ್ಯಾಪ್ತಿಗೆ ತರಬೇಕು. ಈಚಿನ ವರ್ಷಗಳಲ್ಲಿ ಕೃಷಿಗೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ನೀರಾವರಿ ಯೋಜನೆ ಜಾರಿಯಾದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಗ್ರಾಮಸ್ಥರು.

‘ಗ್ರಾಮದಲ್ಲಿ ಎಂಟನೇ ಶತಮಾನದ ಪುರಾತನ ರಾಮಲಿಂಗೇಶ್ವರ ದೇವಸ್ಥಾನವಿದೆ. ಶಿವರಾತ್ರಿಯಂದು ವಿಜೃಂಭಣೆಯಿಂದ ಪಲ್ಲಕ್ಕಿ ಉತ್ಸವ ಜರುಗುತ್ತದೆ. ಭಕ್ತರ ಅನುಕೂಲಕ್ಕಾಗಿ ಯಾತ್ರಿ ನಿವಾಸ ನಿರ್ಮಿಸುವುದು, ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದು ಅವಶ್ಯವಿದೆ. ಗಾಂವಠಾಣ ಜಾಗದವರನ್ನು ಹೊರತುಪಡಿಸಿದರೆ, ಬಹುತೇಕ ಕುಟುಂಬಗಳು ಅರಣ್ಯ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಅಂತಹ ಕುಟುಂಬಗಳಿಗೆ ಹಕ್ಕುಪತ್ರ ಕೊಡಿಸಬೇಕು. ಕೆರೆಗಳ ಹೂಳೆತ್ತುವಿಕೆಗೆ ಸಂಬಂಧಿಸಿದ ಇಲಾಖೆ ಮುಂದಾಗಬೇಕು. ಭತ್ತ, ಅಡಿಕೆ ಪ್ರಧಾನ ಬೆಳೆಯಾಗಿದ್ದು, ನೀರಾವರಿ ಸೌಲಭ್ಯ ಅಗತ್ಯವಾಗಿದೆ’ ಎಂದು ಗ್ರಾಮಸ್ಥ ದೇವೇಂದ್ರ ನಾಯ್ಕ ಹೇಳಿದರು.

‘ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಜಲ ಜೀವನ ಮಿಷನ್‌ ಯೋಜನೆಯಡಿ ಪ್ರತಿ ಮನೆಗೆ ನಳ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಇನ್ನೂ ನೀರು ಬರುತ್ತಿಲ್ಲ’ ಎಂದು ಗ್ರಾಮಸ್ಥ ನಾಗೇಶ ದೂರಿದರು.

‘ಬೆಡಸಗಾಂವ್ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 1,400 ಕುಟುಂಬಗಳಿದ್ದು, ಜೆಜೆಎಂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕೆರೆಗೆ ನೀರು ತುಂಬಿಸುವ ಯೋಜನೆ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಇಲ್ಲ’ ಎಂದು ಪಿಡಿಒ ದಿವಾಕರ ಭಟ್ಟ ತಿಳಿಸಿದರು.

ಬಿಜ್ಜಳನ ಉಪರಾಜಧಾನಿ ನೀರಾವರಿ ಯೋಜನೆ ಜಾರಿಗೆ ಆಗ್ರಹ ಹಕ್ಕುಪತ್ರಕ್ಕಾಗಿ ನಿರೀಕ್ಷೆ

ನಿವೇಶನ ರಹಿತರಿಗೆ ಹಂತ ಹಂತವಾಗಿ ವಸತಿ ಯೋಜನೆಯಡಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಬೀದಿ ದೀಪಗಳ ದುರಸ್ತಿಗೆ ಈಗಾಗಲೇ ಆದೇಶ ನೀಡಲಾಗಿದೆ- ದಿವಾಕರ ಭಟ್ಟ ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT