ಬುಧವಾರ, ನವೆಂಬರ್ 30, 2022
17 °C
‘ಗಾಂಧಿ ಜೀವನ ಚರಿತೆ’ ಕೃತಿ ಬಿಡುಗಡೆ 

ಪ್ರಸ್ತುತ ರಾಜಕೀಯದಲ್ಲಿ ದಾಳವಾದ ಧರ್ಮ: ವಿಮರ್ಶಕ ಎಂ.ಜಿ.ಹೆಗಡೆ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ‘ವರ್ತಮಾನ‌ದ ರಾಜಕೀಯದಲ್ಲಿ ಧರ್ಮವನ್ನು ದಾಳವಾಗಿ ಉರುಳಿಸಲಾಗುತ್ತಿದೆ. ಈ ಮಾದರಿಯ ರಾಜಕಾರಣಕ್ಕೆ ಗಾಂಧಿವಾದವು ತೀವ್ರ ವಿರೋಧ ವ್ಯಕ್ತಪಡಿಸುತ್ತದೆ. ಹಾಗಾಗಿ ಗಾಂಧಿ ತತ್ವಗಳನ್ನು  ಹಿಮ್ಮೆಟ್ಟಿಸಲಾಗುತ್ತಿದೆ’ ಎಂದು ವಿಮರ್ಶಕ ಡಾ.ಎಂ.ಜಿ.ಹೆಗಡೆ ವಿಷಾದ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಆರ್.ಎಸ್.ಹಬ್ಬು ಅವರ ಕೃತಿ ‘ಗಾಂಧಿ ಜೀವನ ಚರಿತೆ’ಯನ್ನು ಬಿಡುಗಡೆ ಮಾಡಿ ಮಾತನಾಡಿದರು.

‘ಗಾಂಧಿ ಜೀವನದ ಬಗ್ಗೆ 1907ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪ್ರಕಟವಾದ ಮೊದಲ ಕೃತಿಯಿಂದ ಇಲ್ಲಿಯವರೆಗೆ 50 ಸಾವಿರಕ್ಕೂ ಅಧಿಕ ಕೃತಿಗಳು ಪ್ರಕಟವಾಗಿವೆ. ಆದರೆ, ಬಲದೇವ ನಂದಾ ಅವರ ಮೂಲ ಕೃತಿ ಈವರೆಗೆ ಕನ್ನಡದಲ್ಲಿ ಬಾರದಿರುವುದು ಆಶ್ಚರ್ಯ. ಆರ್.ಎಸ್.ಹಬ್ಬು ಅವರ  ಕೃತಿ ಗಾಂಧಿ ಜೀವನಕ್ಕೆ ಸೂಕ್ತವಾದ ಪ್ರವೇಶಿಕೆ ಕೊಟ್ಟಿದೆ’ ಎಂದರು.

‘ಗಾಂಧಿ ಅವರ ಜೀವನದ ಬೆಳವಣಿಗೆಯೊಂದಿಗೆ ಯಾವೆಲ್ಲ ವಿಚಾರಗಳು ಬೆಳವಣಿಗೆ ಕಂಡವು ಎಂಬುದು ಈ ಪುಸ್ತಕದಲ್ಲಿದೆ. ಕೊನೆಯ ಅಧ್ಯಾಯಕ್ಕೆ ಬಂದಾಗ ಅಹಿಂಸೆ ಒಂದು ತತ್ವ ಎಂಬುದು ನಮಗೆ ಮನವರಿಕೆಯಾಗುತ್ತದೆ. ಗಾಂಧಿ ಕಥನ ಮತ್ತು ಗಾಂಧಿ ವಿಚಾರಗಳ ಕಥನ ಜೊತೆಯಾಗಿ ಸಾಗುತ್ತವೆ’ ಎಂದು ವಿವರಿಸಿದರು.

ಕೃತಿ ಪರಿಚಯ ಮಾಡಿದ ಅರುಣ ಕುಮಾರ ಹಬ್ಬು ಮಾತನಾಡಿ, ‘ಇಂಗ್ಲಿಷ್‌ನಲ್ಲಿ ಮೂಲ ಕೃತಿಯನ್ನು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಪ್ರಕಟಿಸಿದೆ. ಇದು ಒಟ್ಟು 14 ಭಾಷೆಗಳಲ್ಲಿ ಬಿಡುಗಡೆಯಾಗಿದೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಕೃತಿಕಾರ ಆರ್.ಎಸ್.ಹಬ್ಬು, ‘ಗಾಂಧೀಜಿಯ ಚಾರಿತ್ರ್ಯವನ್ನು ಹೇಗೆ ಹರಣ ಮಾಡಬೇಕು ಎಂಬ ಪಡೆಯೇ ಇದೆ. ಸಾಮಾಜಿಕ ಜಾಲತಾಣಗಳನ್ನು ನೋಡಿ ಅವರ ವಿಚಾರಧಾರೆಗಳನ್ನು ಅಪಮಾನ ಮಾಡಲಾಗುತ್ತಿದೆ. ಇದು ಬಹಳ ಬೇಸರದ ವಿಚಾರ’ ಎಂದರು.

ರಾಮಕೃಷ್ಣಾಶ್ರಮದ ಭವೇಶಾನಂದ ಸ್ವಾಮೀಜಿ, ಕಾರವಾರ ಎಜುಕೇಶನ್ ಸೊಸೈಟಿ ಆಡಳಿತಾಧಿಕಾರಿ ಜಿ.ಪಿ.ಕಾಮತ್ ಮಾತನಾಡಿದರು.

ಮೋಹನ ಹಬ್ಬು ವೇದಿಕೆಯಲ್ಲಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ರಾಮ ನಾಯ್ಕ ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ ಭಿಷ್ಟಣ್ಣನವರ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು