ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಓದು ತಾಣ’ ಹೊಸ್ಕೇರಿ ಬಸ್ ತಂಗುದಾಣ

Published 4 ಜೂನ್ 2023, 3:18 IST
Last Updated 4 ಜೂನ್ 2023, 3:18 IST
ಅಕ್ಷರ ಗಾತ್ರ

ಕಾರವಾರ: ಬಸ್ ತಂಗುದಾಣ ಎಂದಾಕ್ಷಣ ಗೋಡೆಗಳ ಮೇಲೆ ಪೋಲಿ ಬರಹ, ಕಸಕಡ್ಡಿಗಳಿಂದ ತುಂಬಿರುವ ನೆಲಹಾಸು, ಮುರಿದು ಬೀಳುವ ಸ್ಥಿತಿಯ ಚಾವಣಿ ಎಂಬ ಕಲ್ಪನೆ ಮೂಡುವುದು ಹೆಚ್ಚು. ಆದರೆ ಕುಮಟಾ ತಾಲ್ಲೂಕಿನ ಹೊಸ್ಕೇರಿ ಗ್ರಾಮದ ಬಸ್ ತಂಗುದಾಣ ಜ್ಞಾನ ದೇಗುಲವಾಗಿದೆ.

ಬಸ್‍ಗಾಗಿ ಕಾಯುವುದಕ್ಕಷ್ಟೆ ಅಲ್ಲದೆ ಪುಸ್ತಕ ಓದಲು, ಸಾಧಕರ ಜೀವನಗಾಥೆ ಅರಿಯಲೂ ಇಲ್ಲಿಗೆ ಜನ ಬರುತ್ತಾರೆ. ಸ್ವಚ್ಛತೆ, ನಾವೀನ್ಯತೆಯಿಂದ ಕಂಗೊಳಿಸುವ ತಂಗುದಾಣದಲ್ಲಿ ಪುಸ್ತಕಗಳ ಭಂಡಾರವಿದೆ. ಅದನ್ನು ಓದಲು ಅನುಕೂಲಕರ ವಾತಾವರಣವೂ ರೂಪುಗೊಂಡಿದೆ.

ಕುಮಟಾ ತಾಲ್ಲೂಕು ಹೆಗಡೆ ಗ್ರಾಮ ಪಂಚಾಯ್ತಿಯ ಲುಕ್ಕೇರಿ ಸಮೀಪದ ಹೊಸ್ಕೇರಿ ಗ್ರಾಮದ ತಂಗುದಾಣದ ಚಿತ್ರಣವನ್ನು ಸ್ಥಳೀಯರೇ ಸೇರಿ ರಚಿಸಿಕೊಂಡ ‘ಪುನೀತ್ ರಾಜ್‍ಕುಮಾರ್ ಅಭಿಮಾನಿ ಬಳಗ’ ಬದಲಿಸಿದೆ. ಕಳೆದ ಅಕ್ಟೋಬರ್ 29 ರಂದು ನಡೆದ ಪುನೀತ್ ಮೊದಲ ವರ್ಷದ ಪುಣ್ಯಸ್ಮರಣೆಯ ದಿನ ಬಳಗವು ತಂಗುದಾಣದಲ್ಲಿ ಗ್ರಂಥಾಲಯ ವ್ಯವಸ್ಥೆ ರೂಪಿಸಿದೆ. ನಿತ್ಯ ಹತ್ತಾರು ಜನರು ವಿವಿಧ ಪುಸ್ತಕಗಳನ್ನು ಓದುತ್ತಿದ್ದಾರೆ.

‘ಪುನೀತ್ ಅಭಿಮಾನಿಗಳು ಗ್ರಾಮದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದೇವೆ. ಅವರು ಮಾಡಿದ ಒಳ್ಳೆಯ ಕೆಲಸಗಳು ನಮಗೂ ಮಾದರಿಯಾಗಿದ್ದವು. ಹೀಗಾಗಿ ಅವರ ನೆನಪಿಗೆ ಜನರಿಗೆ ಉಪಯೋಗವಾಗುವಂತೆ ತಂಗುದಾಣದಲ್ಲಿ ಓದುವ ವ್ಯವಸ್ಥೆ ರೂಪಿಸಿದ್ದೇವೆ. ಇದಕ್ಕೆ ರೈಲ್ವೆ ಇಲಾಖೆಯಲ್ಲಿರುವ ಜಯಂತ್ ಪಟಗಾರ ಆರ್ಥಿಕ ನೆರವನ್ನೂ ಒದಗಿಸಿದ್ದಾರೆ’ ಎನ್ನುತ್ತಾರೆ ಬಳಗದ ಸದಸ್ಯ ರವಿ ಪಟಗಾರ.

ತಂಗುದಾಣದಲ್ಲಿ ಪುಸ್ತಕಗಳನ್ನು ಇಡಲು ಆರಂಭಿಸಿದ ಬಳಿಕ ಇಲ್ಲಿಗೆ ಓದುವ ಉದ್ದೇಶಕ್ಕಾಗಿಯೇ ಬರುವವರ ಸಂಖ್ಯೆ ಹೆಚ್ಚಿದೆ.
ರವಿ ಪಟಗಾರ, ಪುನೀತ್ ರಾಜ್‍ಕುಮಾರ್ ಅಭಿಮಾನಿ ಬಳಗದ ಸದಸ್ಯ

‘ತಂಗುದಾಣಕ್ಕೆ ಪ್ರತಿ ವರ್ಷ ಸ್ಥಳೀಯ ಗಣೇಶೋತ್ಸವ ಸಮಿತಿಯಿಂದ ಬಣ್ಣ ಬಳಿಯಲಾಗುತ್ತದೆ. ಬಳಗದಿಂದ ಪುಸ್ತಕ ಇಡಲು ಕಪಾಟು ಅಳವಡಿಸಿದ್ದೇವೆ. ಜನರಿಗೆ ಪ್ರೇರಣೆಯಾಗಬಲ್ಲ ರಾಷ್ಟ್ರ ನಾಯಕರ ಭಾವಚಿತ್ರಗಳನ್ನು ತೂಗು ಹಾಕಿದ್ದೇವೆ. ಡಾ.ಬಿ.ಆರ್.ಅಂಬೇಡ್ಕರ್, ಭಗತ್ ಸಿಂಗ್, ಸ್ವಾಮಿ ವಿವೇಕಾನಂದ ಸೇರಿದಂತೆ ಹಲವು ಮಹನೀಯರ ಜೀವನಗಾಥೆ ಸಾರುವ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕ ಸೇರಿದಂತೆ 40ಕ್ಕೂ ಹೆಚ್ಚು ಪುಸ್ತಕ ತಂಗುದಾಣದಲ್ಲಿ ಇಡಲಾಗಿದೆ’ ಎಂದು ವಿವರಿಸಿದರು.

‘ನಿತ್ಯ ಈ ಮಾರ್ಗದಲ್ಲಿ ಐದಕ್ಕೂ ಹೆಚ್ಚು ಬಸ್‍ಗಳು, ಮ್ಯಾಕ್ಸಿ ಕ್ಯಾಬ್‍ಗಳ ಓಡಾಟ ನಡೆಸುತ್ತವೆ. ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರು ಪೇಟೆಗೆ ತೆರಳಲು ತಂಗುದಾಣಕ್ಕೆ ಬಂದು ಕಾಯುತ್ತಾರೆ. ಅನಗತ್ಯವಾಗಿ ಸಮಯ ವ್ಯರ್ಥ ಮಾಡುವ ಬದಲು ಪುಸ್ತಕ ಓದಲಿ ಎಂಬ ಉದ್ದೇಶಕ್ಕೆ ಈ ವ್ಯವಸ್ಥೆ ರೂಪಿಸಲಾಯಿತು. ವಿದ್ಯಾರ್ಥಿಗಳಿಗೆ ಮನೆಗೆ ಪುಸ್ತಕ ಒಯ್ಯಲು ಅವಕಾಶ ಕೊಡಲಾಗಿದೆ’ ಎಂದೂ ಹೇಳಿದರು.

ತಂಗುದಾಣದಲ್ಲಿ ಪುಸ್ತಕ ಇಡಲು ಕಪಾಟು ಅಳವಡಿಸಿರುವುದು.
ತಂಗುದಾಣದಲ್ಲಿ ಪುಸ್ತಕ ಇಡಲು ಕಪಾಟು ಅಳವಡಿಸಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT