ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಹಾನಿಗೆ ಪರಿಹಾರ ನೀಡಲು ಮುಖ್ಯಮಂತ್ರಿ ಭರವಸೆ: ಯಡಿಯೂರಪ್ಪ 

Last Updated 18 ನವೆಂಬರ್ 2021, 9:28 IST
ಅಕ್ಷರ ಗಾತ್ರ

ಕಾರವಾರ: 'ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಬೆಳೆಗೆ ಹಾನಿಯಾಗಿದೆ. ಅದರಲ್ಲೂ ಉತ್ತರ ಕನ್ನಡದಲ್ಲಿ ಶೇ 90ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಭತ್ತದ ಪೈರು ನಾಶವಾಗಿದೆ. ಈ ವಿಚಾರವನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರ ಗಮನಕ್ಕೆ ತರಲಾಗಿದೆ. ರೈತರಿಗೆ ಪರಿಹಾರ ನೀಡುವ ಬಗ್ಗೆ ಅವರು ಭರವಸೆ ನೀಡಿದ್ದಾರೆ' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಯಲ್ಲಾಪುರದಲ್ಲಿ ಗುರುವಾರ ಹಮ್ಮಿಕೊಳ್ಳಲಾದ 'ಜನ ಸ್ವರಾಜ್ ಸಮಾವೇಶ'ದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

'ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಚಾಲಕರ ಕೊರತೆಯ ಬಗ್ಗೆ ಗಮನಕ್ಕೆ ಬಂದಿದೆ. ಕಾಯಂ ಅಲ್ಲದಿದ್ದರೂ ತಾತ್ಕಾಲಿಕ ಆಧಾರದಲ್ಲಿ ಚಾಲಕರನ್ನು ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳಬಹುದು' ಎಂದು ಜೊತೆಯಲ್ಲಿದ್ದ ಸಾರಿಗೆ ಸಚಿವ ಶ್ರೀರಾಮು ಅವರಿಗೆ ತಿಳಿಸಿದರು.

'ವಿಧಾನಪರಿಷತ್‌ನ 25 ಸ್ಥಾನಗಳ ಪೈಕಿ 20 ಸ್ಥಾನಗಳಿಗೆ ಬಿ.ಜೆ.ಪಿ ಸ್ಪರ್ಧಿಸುತ್ತಿದೆ. ಕನಿಷ್ಠ 12 ಸ್ಥಾನಗಳನ್ನು ಜಯಿಸಿ ವಿಧಾನಪರಿಷ‌ತ್‌ನಲ್ಲಿ ಬಹುಮತ ಪಡೆಯುತ್ತೇವೆ. ಇದರಿಂದ ಶೇ 100ರ ಬಲದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೆಲಸಗಳನ್ನು ಮನೆಮನೆಗೆ ತಲುಪಿಸುತ್ತೇವೆ. ರಾಜ್ಯದಲ್ಲಿ ಮುಂದಿನ ಬಾರಿಯೂ ಮತ್ತೆ ಬಿ.ಜೆ ಪಿ ಸರ್ಕಾರ ರಚಿಸುತ್ತದೆ' ಎಂದು ಹೇಳಿದರು.

'ಮುಂದಿನ ಚುನಾವಣೆಯಲ್ಲಿ ಯಾರ ನೇತೃತ್ವ ಎಂಬುದಕ್ಕಿಂತ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ನಮ್ಮ ಗುರಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯಗಳಿಗೆ ನಮ್ಮ ಸಂಪೂರ್ಣ ಬೆಂಬಲ ನೀಡುತ್ತೇವೆ' ಎಂದರು.

ಮಾಹಿತಿ ಕೊಡಿ:'ಬಿಟ್ ಕಾಯಿನ್ ಹಗರಣದ ಬಗ್ಗೆ ಕಾಂಗ್ರೆಸ್ ಮುಖಂಡರು ಸೇರಿದಂತೆ ಯಾರದೇ ಬಳಿಯಾದರೂ ಮಾಹಿತಿಗಳಿದ್ದರೆ ಸರ್ಕಾರದೊಂದಿಗೆ ಹಂಚಿಕೊಳ್ಳಿ. ಇದರಿಂದ ತನಿಖೆಗೆ ಸಹಕಾರಿಯಾಗುತ್ತದೆ. ಈ ಪ್ರಕರಣದಲ್ಲಿ ಯಾವುದೇ ಪಕ್ಷದವರೇ ಆಗಿದ್ದರೂ ಯಾರನ್ನೂ ರಕ್ಷಿಸುವುದಿಲ್ಲ. ಅಪರಾಧ ಮಾಡಿದವರಿಗೆ ಶಿಕ್ಷೆ ಖಂಡಿತ ಆಗುತ್ತದೆ' ಎಂದು ಭರವಸೆ ನೀಡಿದರು.

ಸಚಿವರಾದ ಶ್ರೀರಾಮುಲು, ಶಿವರಾಮ ಹೆಬ್ಬಾರ, ವಿಧಾನ ಪರಿಷತ್ ಸದಸ್ಯರಾದ ಶಾಂತರಾಮ ಸಿದ್ದಿ, ಎನ್.ರವಿಕುಮಾರ್, ಶಾಸಕರಾದ ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ಸುನೀಲ ನಾಯ್ಕ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ, ಪ್ರಮುಖರಾದ ಗಣಪತಿ ಉಳ್ವೇಕರ, ಸುನೀಲ ಹೆಗಡೆ, ಪ್ರಮೋದ ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT