ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಡೇಲಿ | ವರ್ಷ ನಾಲ್ಕು: ಪರಿಪೂರ್ಣವಾಗದ ತಾಲ್ಲೂಕು

ಹಲವು ಇಲಾಖೆಗಳ ಕಚೇರಿಗಳಿಲ್ಲ, ಹಳಿಯಾಳದ ಹೆಸರು ಬಿಟ್ಟಿಲ್ಲ!
Last Updated 13 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ದಾಂಡೇಲಿ: ತಾಲ್ಲೂಕು ಎಂದು ಘೋಷಣೆಯಾಗಿ ನಾಲ್ಕು ವರ್ಷಗಳೇ ಕಳೆದಿವೆ. ಆದರೆ, ಇನ್ನೂ ಕೆಲವು ಸರ್ಕಾರಿ ಕಡತಗಳು ಹಾಗೂ ಕಾರ್ಯಕ್ರಮಗಳಲ್ಲಿ ‘ದಾಂಡೇಲಿ’ ಹೆಸರಿನ ಬದಲು ಹಳಿಯಾಳ ತಾಲ್ಲೂಕು ಎಂದೇ ಉಲ್ಲೇಖಿಸಲಾಗುತ್ತಿದೆ. ನೂತನ ತಾಲ್ಲೂಕು ಎಂಬ ಸಂತಸದ ಜೊತೆಗೇ ಜನರಿಗೆ ಈ ಕೊರಗು ಕೂಡ ಕಾಡುತ್ತಿದೆ.

2017ರ ಮಾರ್ಚ್ 15ರಂದು ನಡೆದ ರಾಜ್ಯ ಬಜೆಟ್ ಅಧಿವೇಶನದಲ್ಲಿ ದಾಂಡೇಲಿಯನ್ನು ನೂತನ ತಾಲ್ಲೂಕು ಎಂದು ಘೋಷಣೆ ಮಾಡಲಾಯಿತು. ಇದಾದ ನಂತರ ಕಂದಾಯ ಇಲಾಖೆಯ 2018ರ ಜನವರಿಯಿಂದ ಅನ್ವಯವಾಗುವಂತೆ ನೂತನ ತಾಲ್ಲೂಕು ರಚನೆ ಮಾಡಿ ಆಡಳಿತಾತ್ಮಕವಾಗಿ ಅನುಮೋದನೆಯನ್ನು ನೀಡಿತ್ತು. ಹಳಿಯಾಳ ಮತ್ತು ಜೊಯಿಡಾ ತಾಲ್ಲೂಕುಗಳ ನಾಲ್ಕು ಗ್ರಾಮ ಪಂಚಾಯಿತಿಗಳನ್ನು ಒಟ್ಟು ಸೇರಿಸಿ ತಾಲ್ಲೂಕು ರಚಿಸಲಾಯಿತು. ಫೆ.11ರಂದು ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ತಾಲ್ಲೂಕನ್ನು ಉದ್ಘಾಟಿಸಿದ್ದರು. ಅದರ ಮೂಲಕ ಉತ್ತರ ಕನ್ನಡದ 12ನೇ ತಾಲ್ಲೂಕಿನ ಉದಯವಾಗಿತ್ತು.

ನೂತನ ತಾಲ್ಲೂಕಿಗೆ ಅವಶ್ಯವಿರುವ ಕಚೇರಿಯನ್ನು ತೆರೆಯಲು ತಗಲುವ ವೆಚ್ಚವನ್ನು 2017– 18ನೇ ಆಯವ್ಯಯ ಲೆಕ್ಕ ಶೀರ್ಷಿಕೆ ಅಡಿಯಲ್ಲಿ ಭರಿಸಲು ಆಗಲೇ ನಿರ್ದೇಶಿಸಲಾಗಿತ್ತು. ಆದರೆ, ತಹಶೀಲ್ದಾರರ ಕಾರ್ಯಾಲಯ ಸೇರಿದಂತೆ ಕೆಲವೊಂದು ಕಚೇರಿಗಳನ್ನು ಹೊರತು ಪಡಿಸಿ, ತಾಲ್ಲೂಕಿನಲ್ಲಿ ಇರಬೇಕಾದ ಹತ್ತಾರು ಪೂರ್ಣ ಪ್ರಮಾಣದ ಕಚೇರಿಗಳು, ಸಂಬಂಧಿಸಿದ ಇಲಾಖೆಗಳು ದಾಂಡೇಲಿಗೆ ಇನ್ನೂ ಬಂದಿಲ್ಲ.

ನಗರಸಭೆಯ ಕಟ್ಟಡದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯಾಲಯವು ಹೆಸರಿಗೆ ಮಾತ್ರ ಪ್ರಭಾರಿ ಮುಖ್ಯಸ್ಥರ ಆಡಳಿತದಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ, ಪೂರ್ಣ ಪ್ರಮಾಣದ ಸಿಬ್ಬಂದಿ ಕೊರತೆಯಿದೆ.

ತಾಲ್ಲೂಕಿನಲ್ಲಿ ಅವಶ್ಯ ಇರುವ ಇಲಾಖೆಗಳಾದ ಉಪ ನೋಂದಣಿ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ತೋಟಗಾರಿಕೆ ಇಲಾಖೆ, ಭೂ ಮಾಪನ ಇಲಾಖೆ, ಸಹಾಯಕ ನಿರ್ದೇಶಕ ಕೃಷಿ ಇಲಾಖೆ, ಮೀನುಗಾರಿಕೆ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಲೋಕೋಪಯೋಗಿ ಸಹಾಯಕ ಎಂಜಿನಿಯರ್ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳನ್ನು ನೂತನ ತಾಲ್ಲೂಕು ರಚನೆಯಾಗಿ ನಾಲ್ಕು ವರ್ಷಗಳು ಕಳೆದರೂ ಕಂಡಿಲ್ಲ.

ಸರ್ಕಾರಿ ಆಸ್ಪತ್ರೆಯನ್ನು ತಾಲ್ಲೂಕು ಆಸ್ಪತ್ರೆ ದರ್ಜೆಗೆ ಏರಿಸಿ ತಾಲ್ಲೂಕು ಆರೋಗ್ಯಾಧಿಕಾರಿ ನೇಮಕಕ್ಕೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಂದ ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ನೀಡಲಾಗಿದೆ. ಆ ನಿಟ್ಟಿನಲ್ಲಿ ಸರ್ಕಾರ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ರಕ್ತ ನಿಧಿ ಸ್ಥಾಪನೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಹೊಂದಿದ್ದರೂ ಸರ್ಕಾರದ ಅನುಮೋದನೆಗಾಗಿ ಕಾಯಲಾಗುತ್ತಿದೆ.

ನಿರ್ಮಾಣ ಹಂತದಲ್ಲಿ ಮಿನಿ ವಿಧಾನಸೌಧ..:

ನಗರದ ಅಂಬೇವಾಡಿಯ ಗಣಪತಿ ದೇವಸ್ಥಾನ ಎದುರಿನಲ್ಲಿ ಐದು ಎಕರೆ ಜಾಗದಲ್ಲಿ ₹ 10 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣದ ಹಂತದಲ್ಲಿದೆ. ಮುಂದಿನ ಜುಲೈ ತಿಂಗಳಲ್ಲಿ ಸೇವೆಗೆ ಸಿದ್ಧವಾಗಬಹುದು ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.

‘ತಾಲ್ಲೂಕಿನಲ್ಲಿ ಅವಶ್ಯವಿರುವ ಕೆಲಸಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುತ್ತದೆ. ದಾಂಡೇಲಿ ಮಾದರಿ ತಾಲ್ಲೂಕು ಆಗುವ ನಿಟ್ಟಿನಲ್ಲಿ ನಾಯಕರಾದ ಸುನೀಲ ಹೆಗಡೆ ನೇತೃತ್ವದಲ್ಲಿ ಕಾರ್ಯ ಪ್ರವೃತ್ತರಾಗುತ್ತೇವೆ’ ಎನ್ನುತ್ತಾರೆ ಬಿ.ಜೆ.ಪಿ.ಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಕಲ್ಲಶೆಟ್ಟಿ.

‘ಅಗತ್ಯ ಇರುವ ಕಚೇರಿಗಳ ನಿರ್ಮಾಣ ಜಮೀನು ಕೊರತೆ ಇದೆ. ಸ್ಥಗಿತಗೊಂಡ ಕಾರ್ಖಾನೆಯ ಜಾಗವನ್ನು ತಾಲ್ಲೂಕಾಡಳಿತ ಅಥವಾ ನಗರಾಡಳಿತಕ್ಕೆ ವಶ ಪಡಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಇನ್ನೂ ಹಳಿಯಾಳ ಎಂದೇ ಬರುತ್ತದೆ. ಅದನ್ನು ಬದಲಾಯಿಸಿ ದಾಂಡೇಲಿ ತಾಲ್ಲೂಕು ಎಂದು ಉಲ್ಲೇಖಿಸುವಂತಾಗಬೇಕು’ ಎನ್ನುತ್ತಾರೆ ಡಿ.ವೈ.ಎಫ್.ಐ ಜಿಲ್ಲಾ ಘಟಕದ ಕಾರ್ಯದರ್ಶಿ ಡಿ.ಸ್ಯಾಮ್ಸನ್.

2020– 21ರ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ತಾಲ್ಲೂಕಿನ ವಿವಿಧ ಕಡೆ ₹ 46.73 ಲಕ್ಷ ಮೌಲ್ಯದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಶಾಸಕರ ಕಚೇರಿ ಮೂಲಗಳು ತಿಳಿಸಿವೆ.

ತಾಲ್ಲೂಕು ಎಂದು ಘೋಷಣೆ ಮಾಡಿ ನಾಲ್ಕು ವರ್ಷಗಳಾದರೂ ಜನರಿಗೆ ಮಾತ್ರ ತಾಲ್ಲೂಕಿನ ಸಕಲ ಸೌಕರ್ಯಗಳು ಸಿಗುತ್ತಿಲ್ಲ. ಅನುದಾನದ ಕೊರತೆ, ಜಾಗದ ಅಭಾವ, ಅಧಿಕಾರಿಗಳು ಮತ್ತು ಇಲಾಖಾ ಮಟ್ಟದಲ್ಲಿ ಸಮನ್ವಯದ ಕೊರತೆಯಿಂದ ಘೋಷಣೆ ಆದ ತಾಲ್ಲೂಕು, ಕಾಗದದಲ್ಲಿ ಮಾತ್ರವೇ ಕಾಣಿಸುತ್ತಿದೆ. ಪೂರ್ಣ ಪ್ರಮಾಣದಲ್ಲಿ ಕಾರ್ಯ ರೂಪಕ್ಕೆ ಬರಲು ಮತ್ತೆಷ್ಟು ಸಮಯ ಬೇಕಾದೀತು ಎಂದು ಜನ ಪ್ರಶ್ನಿಸುವಂತಾಗಿದೆ.

‘ಇಲಾಖೆಗಳು ಶುರುವಾದಾಗಲೇ ಫಲ’:

‘25 ವರ್ಷಗಳ ಹೋರಾಟದ ಫಲವಾಗಿ ದಾಂಡೇಲಿಯನ್ನು ತಾಲ್ಲೂಕು ಎಂದು ಘೋಷಣೆ ಮಾಡಲಾಗಿದೆ. ಜನರ ಬಹು ದಿನಗಳ ಬೇಡಿಕೆ ಇನ್ನೂ ಪೂರ್ಣಗೊಂಡಿಲ್ಲ. ಎಲ್ಲ ಇಲಾಖೆಗಳ ಕಾರ್ಯಾರಂಭ ಮಾಡಿದಾಗ ನಮ್ಮ ಹೋರಾಟಕ್ಕೆ ನಿಜವಾದ ಫಲ ಸಿಗುತ್ತದೆ’ ಎನ್ನುತ್ತಾರೆ ದಾಂಡೇಲಿ ತಾಲ್ಲೂಕು ರಚನಾ ಸಮಿತಿ ಪ್ರಧಾನ ಕಾರ್ಯದರ್ಶಿ ರೋಷನ್ ನೇತ್ರವಳಿ.

‘ದಾಂಡೇಲಿ ಜನತೆಯು ಭೂ ವ್ಯಾಜ್ಯ ಹಾಗೂ ನೋಂದಣಿ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಶೀಘ್ರವಾಗಿ ಸರ್ವೆ ಇಲಾಖೆಯನ್ನು ಸ್ಥಾಪಿಸುವಂತೆ ಕಂದಾಯ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ. ತಾಲ್ಲೂಕಿನ ಇಲಾಖೆ ಕಚೇರಿಗಳಿಗೆ ಅವಶ್ಯ ಇರುವ ಭೂಮಿಯನ್ನು ಈಗಲೇ ಖರೀದಿಸಲು ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ’ ಎಂದು ಹೇಳಿದರು.

‘ಏನು ಪ್ರಯೋಜನ?’:

‘ಪಡಿತರ ಚೀಟಿ, ಹಾಗೂ ಬಸ್ ಪಾಸ್ ಸೇರಿದಂತೆ ಇತರ ದಾಖಲೆಗಳನ್ನು ಪಡೆಯುವಾಗ ದಾಂಡೇಲಿ ತಾಲ್ಲೂಕು ಎಂದು ನಮೂದಿಸಿದರೆ ಅರ್ಜಿ ಚಲಾವಣೆ ಆಗುತ್ತಿಲ್ಲ. ಮತ್ತೆ ಹಳಿಯಾಳದ ಕಚೇರಿಗೆ ಅಲೆಯಬೇಕು. ಹೀಗಾದರೆ ನಮ್ಮದು ತಾಲ್ಲೂಕು ಎಂದು ಹೇಳಿ ಏನು ಪ್ರಯೋಜನ’ ಎಂದು ಸ್ಥಳೀಯರಾದ ಸಲೀಂ ಸೈಯದ್ ಪ್ರಶ್ನಿಸುತ್ತಾರೆ.

* ನೂತನ ತಾಲ್ಲೂಕಿನ ಗಡಿ ನಿರ್ಧಾರ ಆಗಬೇಕು. ಪತ್ರ ವ್ಯವಹಾರದಲ್ಲಿ ಹಳಿಯಾಳ ಬದಲಾಗಿ ದಾಂಡೇಲಿ ತಾಲ್ಲೂಕಿನ ಪ್ರತ್ಯೇಕ ಪಿನ್ ಕೋಡ್ ಬಳಸುವಂತೆ ಆಗಬೇಕು.

– ಡಿ.ಸ್ಯಾಮ್ಸನ್, ಜಿಲ್ಲಾ ಕಾರ್ಯದರ್ಶಿ, ಡಿ.ವೈ.ಎಫ್.ಐ

* ಅಗತ್ಯ ಕೆಲಸಗಳನ್ನು ನೂತನ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಗಮನಕ್ಕೆ ತರಲಾಗುವುದು. ಹೆಚ್ಚಿನ ಅನುದಾನಕ್ಕೆ ಮನವಿ ಮಾಡಲಾಗುವುದು.

– ಬಸವರಾಜ ಕಲ್ಲಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬಿ.ಜೆ.ಪಿ. ಜಿಲ್ಲಾ ಘಟಕ

––––––

ಪ್ರಜಾವಾಣಿ ತಂಡ: ಸದಾಶಿವ ಎಂ.ಎಸ್ ಮತ್ತು ಪ್ರವೀಣಕುಮಾರ ಸುಲಾಖೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT