ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಸುಂದರ ಜಲಪಾತಗಳ ಬಳಿ ಆತಂಕದ ಛಾಯೆ

Published 11 ಜುಲೈ 2024, 4:22 IST
Last Updated 11 ಜುಲೈ 2024, 4:22 IST
ಅಕ್ಷರ ಗಾತ್ರ

ಶಿರಸಿ: ಅಬ್ಬರದ ಮಳೆಗೆ ಜಲಪಾತಗಳ ತವರಾದ ಶಿರಸಿಯ ಸುತ್ತಮುತ್ತ ಜಲಪಾತಗಳು ಉಕ್ಕೇರಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಆದರೆ ಅವುಗಳ ಬಳಿ ಪ್ರವಾಸಿಗರ ಸುರಕ್ಷತೆಗಾಗಿ ಯಾವುದೇ ಜೀವ ರಕ್ಷಕ ವ್ಯವಸ್ಥೆ ಇಲ್ಲದಿರುವುದು ಅವಘಡಗಳಿಗೆ ಎಡೆ ಮಾಡಿಕೊಡುತ್ತಿದೆ. 

ತಾಲ್ಲೂಕಿನ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ಜಲಪಾತಗಳಿವೆ. ಅವುಗಳಲ್ಲಿ ಶಿವಗಂಗಾ, ಶಿರ್ಲೆಬೈಲ್, ಕೆಪ್ಪಜೋಗ, ಮತ್ತಿಘಟ್ಟ, ಜಲಪಾತಗಳಿಗೆ ಪ್ರತಿ ವರ್ಷ ಮಳೆ ಆರಂಭದೊಂದಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ‘ಜಿಲ್ಲೆಯಷ್ಟೇ ಅಲ್ಲದೇ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ದೊಡ್ಡ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ. ಇವರಲ್ಲಿ ಬಹುತೇಕರು ಅಪಾಯ ಲೆಕ್ಕಿಸದೆ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಇದರ ಜತೆ ಆಕಸ್ಮಿಕವಾಗಿಯೂ ಅವಘಡಗಳು ಜರುಗುತ್ತಿವೆ. ಇದಕ್ಕೆ ಜಲಪಾತಗಳ ಬಳಿ ರಕ್ಷಣಾ ವ್ಯವಸ್ಥೆ ಇಲ್ಲದಿರುವುದೇ ಕಾರಣ’ ಎಂಬುದು ಪ್ರವಾಸಿಗರ ಆರೋಪವಾಗಿದೆ.

ನಗರದಿಂದ 40 ಕಿ.ಮೀ.ಗೂ ಹೆಚ್ಚಿನ ದೂರದಲ್ಲಿರುವ ಶಿವಗಂಗಾ ಜಲಪಾತವನ್ನು ಮೇಲ್ಭಾಗದಿಂದ ನೋಡಿ ಬರುವುದನ್ನು ಬಿಟ್ಟು ನೀರು ಹರಿವ ಪ್ರದೇಶಕ್ಕೆ ಪ್ರವಾಸಿಗರು ತೆರಳುತ್ತಾರೆ. ಅಲ್ಲಿನ ಅಪಾಯದ ಅರಿವಿಲ್ಲದೇ ಜೀವಹಾನಿಯಾದ ಘಟನೆಗಳು ಈ ಹಿಂದೆ ನಡೆದಿದೆ. ಜಲಪಾತ ವೀಕ್ಷಿಸಲು ಕೆಳಗಿಳಿಯಲು ಸರಿಯಾದ ಮೆಟ್ಟಿಲುಗಳಿಲ್ಲ. ಇದಕ್ಕಾಗಿ ಕೆಳಗಿಳಿಯದಂತೆ ಎಚ್ಚರಿಕೆಯ ತಾತ್ಕಾಲಿಕ ಬೋರ್ಡ್‌ ಅಷ್ಟೇ ಹಾಕಲಾಗಿದೆ. ಸಮೀಪದ ಕೆಪ್ಪಜೋಗ ನೋಡಲು ವೀಕ್ಷಣಾ ಗೋಪುರವಾಗಲೀ, ಸರ್ವ ಋತು ರಸ್ತೆಯಾಗಲೀ, ಜಲಪಾತದ ಬಳಿ ರಕ್ಷಾ ಬೇಲಿಯಾಗಲೀ ಯಾವುದೂ ಇಲ್ಲ. ಸ್ಥಳೀಯವಾಗಿ ಜೀವ ಹಾನಿಯಾಗುವಂಥ ಸಂದರ್ಭದಲ್ಲಿ ಜೀವ ರಕ್ಷಕ ವ್ಯವಸ್ಥೆಯೂ ಇಲ್ಲ. ಇದರಿಂದ ಈ ಜಲಪಾತ ವೀಕ್ಷಣೆಯು ವರ್ಷ ಕಳೆದಂತೆ ಜೀವಹಾನಿಯಾಗುವ ಪ್ರದೇಶವಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿವೆ. 

‘ತಾಲ್ಲೂಕಿನ ಸಾಲ್ಕಣಿ ಗ್ರಾಮ ಪಂಚಾಯಿತಿ ಮುರೇಗಾರ ಗ್ರಾಮದಲ್ಲಿರುವ ಶಿರ್ಲೆಬೈಲ್ (ಮುರೇಗಾರ) ಜಲಪಾತ ಮಳೆಗಾಲದ ಸಂದರ್ಭದಲ್ಲಿ ತೀರಾ ಅಪಾಯಕಾರಿಯಾಗಿ ಮಾರ್ಪಡುತ್ತದೆ. ಈ ಜಲಪಾತವನ್ನು ಮಳೆಗಾಲದಲ್ಲಿ  ಮೇಲ್ಭಾಗದಿಂದಲೇ ನೋಡಬೇಕಿದ್ದು, ಪ್ರವಾಸಿಗರ ಕಾಲು ಜಾರಿದರೆ ಸಾವಿನ ದವಡೆಗೆ ಸಿಲುಕುವುದು ನಿಶ್ಚಿತವಾಗಿದೆ. ಸ್ಥಳದಲ್ಲಿ ಅರಣ್ಯ ಇಲಾಖೆ ಕ್ಯಾಂಪ್ ಇದ್ದರೂ ಹೆಚ್ಚಿನ ಪ್ರವಾಸಿಗರು ಬಂದರೆ ಅವರ ಮೇಲೆ ನಿಗಾವಣೆ ಕಷ್ಟಸಾಧ್ಯ. ಜೀವಹಾನಿ ಆದ ಮೇಲೆ ಗೋಳಾಡುವ ಬದಲು ಮಳೆಗಾಲದಲ್ಲಿ ಕಡ್ಡಾಯವಾಗಿ ಜಲಪಾತ ವೀಕ್ಷಣೆ ನಿಷೇಧಿಸುವುದೇ ಉತ್ತಮ’ ಎನ್ನುತ್ತಾರೆ ಸ್ಥಳೀಯರಾದ ರಮಣ ಹೆಗಡೆ. 

ಬೆಣ್ಣೆಹೊಳೆ ಜಲಪಾತ, ಮತ್ತಿಘಟ್ಟ ಜಲಪಾತ, ದೇವನಮನೆ ಜಲಧಾರೆ ಸೇರಿ ಹೆಚ್ಚಿನ ಸ್ಥಳಗಳಲ್ಲಿ, ಪೊಲೀಸ್ ಅಥವಾ ಅರಣ್ಯ ಇಲಾಖೆ ಅಧಿಕಾರಿಗಳ ಸರಿಯಾದ ಮೇಲ್ವಿಚಾರಣೆ ಇಲ್ಲದಿರುವುದು ದುರಂತಗಳಿಗೆ ಕಾರಣವಾಗಿದೆ. ಹಾಗಾಗಿ ಹೆಚ್ಚಿನ ನೀರು ಬೀಳುವ ಸಂದರ್ಭದಲ್ಲಿ ಜಲಪಾತಗಳ ಬಳಿ ರಕ್ಷಣಾ ಸಿಬ್ಬಂದಿ ನೇಮಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. 

ಜಲಪಾತಗಳ ಬಳಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಈಗಾಗಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ನೀರಿರುವ ಪ್ರದೇಶಗಳಿಗೆ ಪ್ರವಾಸಿಗರೂ ಎಚ್ಚರಿಕೆಯಿಂದ ತೆರಳುವ ಅಗತ್ಯವಿದೆ
ರಮೇಶ ಹೆಗಡೆ ಪ್ರಭಾರಿ ತಹಶೀಲ್ದಾರ್ ಶಿರಸಿ

ವಿಶೇಷ ಸಿಬ್ಬಂದಿಯಿಲ್ಲ

ಪ್ರವಾಸಿ ಮಿತ್ರ ಅಥವಾ ಭದ್ರತಾ ಸಿಬ್ಬಂದಿಯನ್ನು ಗುರುತಿಸಲಾದ ಪ್ರವಾಸಿ ತಾಣಗಳಲ್ಲಿ ಮಾತ್ರ ನಿಯೋಜಿಸಲಾಗಿದೆ. ಮಳೆಗಾಲದಲ್ಲಿ ಮಾತ್ರ ಜೀವ ತುಂಬುವ ಜಲಪಾತಗಳಲ್ಲಿ ನಮ್ಮಲ್ಲಿ ವಿಶೇಷ ಸಿಬ್ಬಂದಿ ಇಲ್ಲ ಎಂಬುದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಸಮಜಾಯಿಷಿ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT