ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕನ್ನಡ|‘ರಾಜಕಾರಣ’: ಅಭಿವೃದ್ಧಿ ಯೋಜನೆಗಳಿಗೆ ಗ್ರಹಣ; ಆಮೆಗತಿಯಲ್ಲಿ ಕಾಮಗಾರಿ

Published : 23 ಸೆಪ್ಟೆಂಬರ್ 2024, 5:03 IST
Last Updated : 23 ಸೆಪ್ಟೆಂಬರ್ 2024, 5:03 IST
ಫಾಲೋ ಮಾಡಿ
Comments

ಕಾರವಾರ: ಜಿಲ್ಲೆಗೆ ಹಿಂದಿನ ರಾಜ್ಯ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳ ಪೈಕಿ ಹಲವು ಅನುದಾನದ ಕೊರತೆ ಸೇರಿದಂತೆ ನಾನಾ ಕಾರಣದಿಂದ ನನೆಗುದಿಗೆ ಬಿದ್ದಿರುವ ದೂರು ಹೆಚ್ಚುತ್ತಿದೆ.

‘ಗ್ಯಾರಂಟಿ ಯೋಜನೆ ಜಾರಿಯ ನೆಪದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಭಿವೃದ್ಧಿ ಯೋಜನೆಗಳನ್ನು ಸ್ಥಗಿತಗೊಳಿಸಿದೆ’ ಎಂದು ಬಿಜೆಪಿ ಆರೋಪಿಸುತ್ತಿದ್ದರೆ, ‘ಅನುದಾನ ಲಭ್ಯತೆ ಇಲ್ಲದೆಯೂ ಚುನಾವಣೆ ಸಮೀಪಿಸಿದ ಹೊತ್ತಲ್ಲಿ ತರಾತುರಿಯಲ್ಲಿ ಹಲವು ಕಾಮಗಾರಿಗೆ ಚಾಲನೆ ನೀಡಿದ್ದ ಬಿಜೆಪಿ ಸರ್ಕಾರ ಜನರಿಗೆ ವಂಚಿಸಲು ಮುಂದಾಗಿತ್ತು’ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ.

ಕಾರವಾರದ ಸರ್ಕಾರಿ ಪದವಿ ಕಾಲೇಜು, ಗುರುಭವನ, ಮಾಲಾದೇವಿ ಮೈದಾನ ಅಭಿವೃದ್ಧಿ, ಗ್ರಾಮೀಣ ರಸ್ತೆ, ದೇವಾಲಯಗಳ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳಿಗೆ ಮಂಜೂರಾಗಿದ್ದ ಅನುದಾನ ಬಿಡುಗಡೆಗೊಳಿಸದೆ ಕೆಲಸಗಳು ಆಮಗೆತಿಯಲ್ಲಿ ಸಾಗುತ್ತಿರುವ ದೂರು ಹೆಚ್ಚಿದೆ.

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ಯೋಜನೆಯನ್ನು ಉದ್ದೇಶಪೂರ್ವಕವಾಗಿ ತಡೆಹಿಡಿಯುವ ಕೆಲಸ ಈಗಿನ ಸರ್ಕಾರದಿಂದ ನಡೆಯುತ್ತಿದೆ. ಕಾರವಾರ ಸರಿದಂತೆ ಜಿಲ್ಲೆಯ ಹಲವು ಕ್ಷೇತ್ರದಲ್ಲಿ ಹತ್ತಾರು ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಆರೋಪಿಸುತ್ತಾರೆ.

ಶಿರಸಿ ತಾಲ್ಲೂಕಿನ ಗಣೇಶಪಾಲ್ ಸೇತುವೆ ಕಾಮಗಾರಿ ಸ್ಥಗಿತಗೊಂಡಿದೆ. ಬನವಾಸಿ ಹೋಬಳಿಯಲ್ಲಿ ವಿದ್ಯುತ್ ವೋಲ್ಟೇಜ್ ಸಮಸ್ಯೆ ನಿವಾರಿಸಲು ಅನುಷ್ಠಾನಗೊಂಡ ಗ್ರಿಡ್ ಕಾಮಗಾರಿ ಮುಗಿದರೂ ತಾಂತ್ರಿಕ ಸಮಸ್ಯೆಯಿಂದ ಕಾರ್ಯಾರಂಭ ಮಾಡಿಲ್ಲ. ಶಿರಸಿ ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಣ ಉದ್ದೇಶಕ್ಕೆ ಮಂಜೂರಾದ ಟ್ರಾಫಿಕ್ ಪೊಲೀಸ್ ಠಾಣೆಗೆ ಗ್ರಹಣ ಹಿಡಿದಿದೆ.

‘ಬನವಾಸಿ ಗ್ರಿಡ್‍ಗೆ ಜಡೆಯಿಂದ ವಿದ್ಯುತ್ ಸಂಪರ್ಕ ನೀಡಲು ಖಾಸಗಿ ಜಾಗದಲ್ಲಿ ಕಂಬ ಹೂಳಬೇಕು. ಜಾಗದ ಮಾಲೀಕರು ಪ್ರಕರಣ ಹೂಡಿದ್ದು, ಅದು ಮುಗಿದ ನಂತರ ವಿದ್ಯುತ್ ನೀಡಲು ಕ್ರಮವಹಿಸಲಾಗುವುದು’ ಎಂಬುದಾಗಿ ಶಾಸಕ ಶಿವರಾಮ ಹೆಬ್ಬಾರ ಹೇಳುತ್ತಾರೆ.

ಯಲ್ಲಾಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಸಭಾಭವನ ಕಾಮಗಾರಿ ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿದೆ. ಅಂಬೇಡ್ಕರ್ ನಗರ ವಾರ್ಡಿನ ಮಚ್ಚಿಗಲ್ಲಿ ಪ್ರಾಥಮಿಕ ಶಾಲೆಯ ಹತ್ತಿರ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಪೌರಕಾರ್ಮಿಕರ ವಸತಿಗೃಹದ ಕಟ್ಟಡ ಅನುದಾನದ ಕೊರತೆಯಿಂದ ಪೂರ್ಣಗೊಂಡಿಲ್ಲ.

ಮುಂಡಗೋಡ ತಾಲ್ಲೂಕಿನಲ್ಲಿ ಕಳೆದ ಒಂದು ವರ್ಷದಿಂದ ರಸ್ತೆಗಳ ಅಭಿವೃದ್ಧಿ ಕುಂಠಿತಗೊಂಡಿದೆ. ಬಹುದಿನಗಳ ಬೇಡಿಕೆಯಾಗಿದ್ದ ಬಸ್‌ ಡಿಪೋ ಉದ್ಘಾಟಿಸಿದರೂ, ಪೂರ್ಣ ಪ್ರಮಾಣದ ಕಾಮಗಾರಿ ಆಗದಿರುವುದರಿಂದ ಇನ್ನೂ ತನಕ ಸಾರ್ವಜನಿಕ ಬಳಕೆಗೆ ಲಭ್ಯವಾಗಿಲ್ಲ.

ಸಂತೆ ಮಾರುಕಟ್ಟೆಗೂ ಅನುದಾನದ ಕೊರತೆ ಕಾಡದೇ ಬಿಟ್ಟಿಲ್ಲ. ಕಳೆದ ಎರಡು ವರ್ಷಗಳ ಹಿಂದೆಯೇ ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ವಿಧಾನಸಭಾ ಚುನಾವಣೆಯ ನಂತರ ಕಾಮಗಾರಿ ಬಹುತೇಕ ಸ್ಥಗಿತಗೊಂಡಿತ್ತು. ಬಸವಣ್ಣ ಹೊಂಡದ ಅಭಿವೃದ್ಧಿ ಕಾಮಗಾರಿಯೂ ಆಮೆಗತಿಯಲ್ಲಿ ಸಾಗಿದೆ. ಕಳೆದ ಒಂದು ವರ್ಷದ ಈಚೆಗೆ ದೊಡ್ಡ ಕಾಮಗಾರಿಗಳು ತಾಲ್ಲೂಕಿನಲ್ಲಿ ನಡೆದಿಲ್ಲ. ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯೂ ಕುಂಟುತ್ತಾ ಸಾಗಿದೆ.

ಭಟ್ಕಳ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಮೃತ ನಗರ ಯೋಜನೆಯಡಿ ಪೂರ್ಣವಾಗಬೇಕಾಗಿದ್ದ ನಗರೋತ್ಥಾನ ಕಾಮಗಾರಿ ಅನುದಾನ ಬಿಡುಗಡೆಯಾಗದ ಗುತ್ತಿಗೆದಾರ ಕಾಮಗಾರಿ ನಿಲ್ಲಿಸಿದ್ದಾರೆ. ತಾಲ್ಲೂಕಿನಲ್ಲಿ ಬಹುತೇಕ ರಸ್ತೆಗಳು ಹೊಂಡಮಯವಾಗಿದ್ದು, ಸರ್ಕಾರದ ಗ್ಯಾರಂಟಿ ಯೋಜನೆಯಿಂದಾಗಿ ಅನುದಾನ ಬರುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

ಹಳಿಯಾಳ ಪಟ್ಟಣದಲ್ಲಿ ₹7.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಖೇಲೊ ಇಂಡಿಯಾದ ಕಟ್ಟಡ ಕಾಮಗಾರಿ ಮಂದಗತಿಯಿಂದ ಸಾಗಿದೆ. 2022ರಲ್ಲಿಯೇ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಇನ್ನೂ ಮುಗಿದಿಲ್ಲ. ಧಾರವಾಡ ರಸ್ತೆಯ ಮುರ್ಕವಾಡ ತಿರುವಿನ ಹತ್ತಿರ ಸುಮಾರು ₹4 ಕೋಟಿ ವೆಚ್ಚದ ಸಮಾವೇಶ ಕೇಂದ್ರ ಕಾಮಗಾರಿಯೂ ಆಮೆಗತಿಯಲ್ಲಿ ಸಾಗಿದೆ.

‘ಸಮಾವೇಶ ಕೇಂದ್ರ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಶಾಸಕ ಆರ್.ವಿ.ದೇಶಪಾಂಡೆ ಸೂಚಿಸಿದ್ದಾರೆ. ಕೆಲಸಕ್ಕೆ ವೇಗ ನೀಡಲಾಗುವುದು’ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಸಂಜು ನಾಯ್ಕ ಹೇಳಿದರು.

ಗೋಕರ್ಣ ಭಾಗದ ಜನರ ನಿರೀಕ್ಷೆಯ ಗಂಗಾವಳಿ- ಮಂಜಗುಣಿ ನಡುವಿನ ಸೇತುವೆ ಕಾಮಗಾರಿ ಏಳು ವರ್ಷ ಕಳೆದರೂ ಪೂರ್ಣಗೊಳ್ಳದಿರುವುದು ನಿರಾಸೆ ಮೂಡಿಸಿದೆ. ಸೇತುವೆ ಕೆಲಸ ಪೂರ್ಣಗೊಂಡಿದ್ದರೂ ಎರಡೂ ಬದಿಯಲ್ಲಿ ಸಂಪರ್ಕ ರಸ್ತೆ ನಿರ್ಮಿಸಿಲ್ಲ. ಗಂಗಾವಳಿ ಬದಿಗೆ ಮಣ್ಣನ್ನು ತುಂಬಿ ತಾತ್ಕಾಲಿಕವಾಗಿ ವಾಹನ ಸಂಚರಿಸುವಂತೆ ಮಾಡಲಾಗಿದೆ. ಆದರೆ ಮಂಜಗುಣಿ ಭಾಗದಲ್ಲಿ ಇದುವರೆಗೂ ಅಂಡರ್‌ಪಾಸ್ ಮಾಡಿಲ್ಲ.

ಅಂಕೋಲಾ ತಾಲ್ಲೂಕಿನ ಪೂಜಗೇರಿ ಸೇತುವೆ ಸೇರಿದಂತೆ ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಸುಮಾರು 20ಕ್ಕೂ ಹೆಚ್ಚು ಕಾಮಗಾರಿಗಳು ನನೆಗುದಿಗೆ ಬಿದ್ದಿರುವ ಆರೋಪ ಎದುರಾಗಿದೆ. ಗಾಬೀತ ಕೇಣಿ, ಬೆಳಂಬಾರ ಭಾಗಗಳಲ್ಲಿ ಕಡಲ ಕೊರೆತ ಆಗುತ್ತಿರುವ ಪ್ರದೇಶಗಳಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಹಣ ಬಿಡುಗಡೆ ಆಗಬೇಕಿದೆ.

‘ಸೇತುವೆ ನಿರ್ಮಾಣ ಮಾಡಲು ಈ ಹಿಂದೆ ಟೆಂಡರ್ ಕರೆಯಲಾಗಿತ್ತು. ಅನಿವಾರ್ಯ ಕಾರಣದಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಶೀಘ್ರದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಪ್ರಯತ್ನಿಸಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಎಇಇ ಇಸಾಕ್ ಸೈಯದ್ ಹೇಳುತ್ತಾರೆ.

ಉದ್ಘಾಟನೆಗೊಂಡರೂ ಕಾಮಗಾರಿ ಬಾಕಿಯಿಂದ ಸಾರ್ವಜನಿಕ ಸೇವೆಗೆ ಲಭ್ಯವಾಗದ ಮುಂಡಗೋಡದ ಸಾರಿಗೆ ಘಟಕ
ಉದ್ಘಾಟನೆಗೊಂಡರೂ ಕಾಮಗಾರಿ ಬಾಕಿಯಿಂದ ಸಾರ್ವಜನಿಕ ಸೇವೆಗೆ ಲಭ್ಯವಾಗದ ಮುಂಡಗೋಡದ ಸಾರಿಗೆ ಘಟಕ
ಶಿರಸಿಯ ಗಣೇಶಪಾಲ್ ಬಳಿ ಸೇತುವೆ ಕಾಮಗಾರಿ ಅರೆಬರೆ ಆಗಿರುವುದು
ಶಿರಸಿಯ ಗಣೇಶಪಾಲ್ ಬಳಿ ಸೇತುವೆ ಕಾಮಗಾರಿ ಅರೆಬರೆ ಆಗಿರುವುದು
ಹಳಿಯಾಳದ ಸಾರಿಗೆ ಘಟಕದ ಹತ್ತಿರ ನೂತನವಾಗಿ ನಿರ್ಮಿಸಲಾಗುತ್ತಿರುವ ಖೇಲೋ ಇಂಡಿಯಾ ಕೇಂದ್ರದ ಕೆಲಸ ಪೂರ್ಣಗೊಳ್ಳದೆ ಸ್ಥಗಿತಗೊಂಡಿದೆ
ಹಳಿಯಾಳದ ಸಾರಿಗೆ ಘಟಕದ ಹತ್ತಿರ ನೂತನವಾಗಿ ನಿರ್ಮಿಸಲಾಗುತ್ತಿರುವ ಖೇಲೋ ಇಂಡಿಯಾ ಕೇಂದ್ರದ ಕೆಲಸ ಪೂರ್ಣಗೊಳ್ಳದೆ ಸ್ಥಗಿತಗೊಂಡಿದೆ
ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಕಟ್ಟಡ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ
ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಕಟ್ಟಡ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ

₹12 ಕೋಟಿ ಅನುದಾನ ಬಾಕಿ

ಕುಮಟಾ ತಾಲ್ಲೂಕಿನಲ್ಲಿ ಲೋಕೋಪಯೋಗಿ ಇಲಾಖೆಯ ಗ್ರಾಮೀಣ ರಸ್ತೆ ಕಾಮಗಾರಿಗಳಿಗೆ ಬಿಡುಗಡೆಯಾಗಬೇಕಾದ ಸುಮಾರು ₹12 ಕೋಟಿ ಬಿಡುಗಡೆಯಾಗದೆ ಬಾಕಿ ಉಳಿದುಕೊಂಡಿದೆ ಎಂಬುದಾಗಿ ಶಾಸಕ ದಿನಕರ ಶೆಟ್ಟಿ ಹೇಳಿದ್ದಾರೆ. ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ತಾಲ್ಲೂಕಿಗೆ ಮಂಜೂರಾದ ಸುಮಾರು 300 ಮನೆಗಳಿಗೆ ಈವರೆಗೆ ಒಂದು ಕಂತಿನ ಹಣ ಮಾತ್ರ ಬಿಡುಗಡೆಯಾಗಿದೆ. ₹3 ಕೋಟಿ ವೆಚ್ಚದ ನೂತನ ಪ್ರವಾಸಿ ಮಂದಿರ ಕಟ್ಟಡಕ್ಕೆ ಈರೆಗೆ ₹18 ಲಕ್ಷ ಮಾತ್ರ ಬಿಡುಗಡೆಯಾಗಿದೆ. ಬಾಸೋಳ್ಳಿ ಬಳಿ ₹2.50 ಕೋಟಿ ಮೊತ್ತದ ಸೇತುವೆ ಕಾಮಗಾರಿಗೆ ಇನ್ನೂ ಕಾರ್ಯಾದೇಶ ನೀಡಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ಪುರಸಭೆ ರಸ್ತೆಗಾಗಿ ವಿಶೇಷ ನಿಧಿಯಿಂದ ಮಂಜೂರಾದ ಮಂಜೂರಾದ ಮೊತ್ತ ಪೂರ್ತಿ ಬಿಡುಗಡೆ ಆಗಿಲ್ಲ’ ಎಂದು ತಿಳಿಸಿದ್ದಾರೆ.

ನನೆಗುದಿಗೆ ಬಿದ್ದ ಯೋಜನೆಗಳು

ಸಿದ್ದಾಪುರ ತಾಲ್ಲೂಕಿನಲ್ಲಿ ಹಿಂದಿನ ಬಿಜೆಪಿ ಸರ್ಕಾರದಿಂದ ಮಂಜೂರಾದ ಹಲವು ಕೆಲಸಗಳು ನೆನೆಗುದಿಗೆ ಬಿದ್ದಿವೆ ಎಂಬ ದೂರು ಹೆಚ್ಚಿದೆ. ₹2 ಕೋಟಿ ವೆಚ್ಚದ ಇಟಗಿ–ಲಂಬಾಪುರ ರಸ್ತೆ ಅರೆಂದೂರು ಈಶ್ವರ ದೇವಸ್ಥಾನದ ರಸ್ತೆ ನೆಜ್ಜೂರು ಬೋವಿ ಕೇರಿ ರಸ್ತೆ ಸೇರಿದಂತೆ ಹಲವು ರಸ್ತೆಗಳ ಕೆಲಸ ಮುಗಿದಿಲ್ಲ. ಹಸುವಂತೆಯ ಹಾಲೆಹೊಳೆ ಸೇತುವೆಗೆ ₹2.60 ಕೋಟಿ ಕಾವೇರಿ ನಿಗಮದಿಂದ ಮಂಜೂರಿಯಾಗಿದ್ದು ಕೆಲಸ ಪೂರ್ಣಗೊಳ್ಳದೇ ಅರ್ಧಕ್ಕೆ ನಿಂತಿದೆ. ‘ತಾಲ್ಲೂಕಿನ 23 ಗ್ರಾಮ ಪಂಚಾಯಿತಿಗಳಲ್ಲಿಯೂ ಹಿಂದಿನ ಸರ್ಕಾದ ಅನುಮೋದನೆ ನೀಡಿದ ಹಲವು ಕೆಲಸಗಳು ನೆನೆಗುದಿಗೆ ಬಿದ್ದಿವೆ’ ಎಂದು ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ ಆರೋಪಿಸಿದರು.

ಕಾಂಗ್ರೆಸ್ ಸರ್ಕಾರವೂ ಈ ಹಿಂದಿನಂತೆ ಸ್ಥಳೀಯ ಸಂಸ್ಥೆಗಳಿಗೆ ಅಭಿವೃದ್ಧಿ ಅನುದಾನ ಬಿಡುಗಡೆ ಮಾಡದೆ ಅಭಿವೃದ್ಧಿ ಯೋಜನೆಗಳು ಕುಂಠಿತವಾಗುತ್ತಿವೆ
-ಸಂತೋಷ ನಾಯ್ಕ, ಭಟ್ಕಳ ಸಾಮಾಜಿಕ ಕಾರ್ಯಕರ್ತ
ಸಂತೆ ಮಾರುಕಟ್ಟೆ ಕಾಮಗಾರಿ ವಿಳಂಬದಿಂದ ಪ್ರತಿ ವಾರ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದುಕೊಂಡು ರಾಜ್ಯ ಹೆದ್ದಾರಿ ಮೇಲೆ ಸಂತೆ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ
-ಮಂಜುನಾಥ ಹರಮಲಕರ, ಮುಂಡಗೋಡ ಪಟ್ಟಣ ಪಂಚಾಯಿತಿ ಸದಸ್ಯ
ಗಂಗಾವಳಿ–ಮಂಜುಗುಣಿ ಸೇತುವೆ ವಾಹನ ಸಂಚಾರಕ್ಕೆ ಮುಕ್ತವಾಗುವಂತೆ ಆದಷ್ಟು ಶೀಘ್ರದಲ್ಲಿ ಕ್ರಮ ಕೈಗೊಳ್ಳಬೇಕು. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಒತ್ತಡ ಕಡಿಮೆಯಾಗಬಹುದು
-ವಿನೋದ ಗೌಡ, ಗೋಕರ್ಣ ವಾಹನ ಚಾಲಕ
ಖೇಲೋ ಇಂಡಿಯಾ ಹಾಗೂ ಸಮಾವೇಶ ಕೇಂದ್ರ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದೆ ಇರುವುದರಿಂದ ತಾಲ್ಲೂಕಿನಲ್ಲಿ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಸಮಸ್ಯೆ ಉಂಟಾಗುತ್ತಿದೆ
-ವಿ.ವಿ.ರೆಡ್ಡಿ ಹಳಿಯಾಳ, ವಕೀಲ

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ಶಾಂತೇಶ ಬೆನಕನಕೊಪ್ಪ, ರವಿ ಸೂರಿ, ಎಂ.ಜಿ.ನಾಯ್ಕ, ಮೋಹನ ನಾಯ್ಕ, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ, ಮೋಹನ ದುರ್ಗೇಕರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT