ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾವರ: ಕೆಕ್ಕಾರಿನ ನೆಲದಲ್ಲಿ ಡ್ರ್ಯಾಗನ್ ಫ್ರುಟ್ ಕಂಪು

Published 8 ಮಾರ್ಚ್ 2024, 5:45 IST
Last Updated 8 ಮಾರ್ಚ್ 2024, 5:45 IST
ಅಕ್ಷರ ಗಾತ್ರ

ಹೊನ್ನಾವರ: ತಾಲ್ಲೂಕಿನ ಕೆಕ್ಕಾರ ಗ್ರಾಮದ ನಾಗಪ್ಪ ಕುಪ್ಪು ಗೌಡ ಅವರ ತೋಟವೆಂದರೆ ಅದೊಂದು ಕೃಷಿಯ ಪ್ರಯೋಗಾಲಯ.

ಗೌಡರು ತಮ್ಮ ಆರು ಎಕರೆ ಭೂಮಿಯಲ್ಲಿ ನೀರು ಸಂಗ್ರಹದಿಂದ ಹಿಡಿದು ಬೆಳೆ ಬೆಳೆಯುವವರೆಗೆ ಅನೇಕ ಪ್ರಯೋಗಗಳನ್ನು ಕೈಗೊಂಡಿದ್ದಾರೆ. ಈ ಭಾಗಕ್ಕೆ ಅಪರೂಪವಾಗಿರುವ ಡ್ರ್ಯಾಗನ್ ಫ್ರುಟ್ ಬೆಳೆಯುತ್ತಿರುವುದು ವಿಶೇಷ.

ಹೊನ್ನಾವರದಿಂದ ಕುಮಟಾಕ್ಕೆ ಹೋಗುವ ಮಾರ್ಗದಲ್ಲಿ ಚಂದಾವರ ಸಮೀಪಿಸುತ್ತಿದ್ದಂತೆ ಎಡಕ್ಕೆ ತಿರುಗಿ ತುಸುವೇ ಸಾಗಿ ಬಲಕ್ಕೆ ಹೊರಳಿ ನೋಡಿದರೆ ಅಲ್ಲೊಂದು ಬೃಹತ್ ಕೆರೆ ಕಾಣಿಸುತ್ತದೆ. ಇದು ನಾಗಪ್ಪ ಗೌಡ ನರೇಗಾ ಯೋಜನೆಯಡಿ ನಾಲ್ಕು ವರ್ಷಗಳ ಹಿಂದೆ ನಿರ್ಮಿಸಿದ ಕೃತಕ ಕೆರೆ. ಅಲ್ಲಿ ಪ್ಲಾಸ್ಟಿಕ್ ಹೊದಿಕೆ ಹಾಕಿ ನೀರು ಸಂಗ್ರಹಿಸಲಾಗಿದೆ.

ಸುಮಾರು ಎರಡು ತಿಂಗಳ ಕಾಲ ಇವರ ತೋಟಕ್ಕೆ ನೀರುಣಿಸುವ ಕೆರೆ ಕೃಷಿ ಪ್ರಯೋಗಕ್ಕೆ ನಿಜವಾದ ಅರ್ಥದಲ್ಲಿ ನೀರೆರೆದಿದೆ. ಕೆರೆಯ ಏರಿಯ ಮೇಲೆ 15 ಗುಂಟೆ ಜಾಗದಲ್ಲಿ ಮೈತುಂಬ ಮುಳ್ಳಿರುವ ಡ್ರ್ಯಾಗನ್ ಫ್ರುಟ್ ಗಿಡಗಳನ್ನು ಬೆಳೆಸಿದ್ದಾರೆ.

‘ಡ್ರ್ಯಾಗನ್ ಫ್ರುಟ್ ಬೆಳೆಯುವ ಮುನ್ನ ಫಸಲು ಸಿಗಬಹುದೆ ಎಂಬ ಅಂಜಿಕೆ ಇತ್ತು. ಆದರೆ ಈಗಾಗಲೇ ಎರಡು ಬೆಳೆ ತೆಗೆದಿದ್ದು ಹಣ್ಣು ಲಕ್ಷಾಂತರ ರೂಪಾಯಿ ಲಾಭ ತಂದುಕೊಟ್ಟಿದೆ. ಇದರ ಜತೆಗೆ ಜಮೀನಿನಲ್ಲಿ ಪ್ರತ್ಯೇಕವಾಗಿ ಫ್ಯಾಶನ್ ಫ್ರುಟ್, ರಾಮಭೂತ, ನೋನಿ ಹಣ್ಣಿನ ಗಿಡಗಳನ್ನೂ ಬೆಳೆಸಿದ್ದೇನೆ. ಫ್ಯಾಶನ್, ಅಮೃತನೋನಿ ಹಣ್ಣುಗಳನ್ನು ಬಿಟ್ಟಿದ್ದು, ರಾಮಭೂತ ಗಿಡಗಳಲ್ಲಿ ಹೂ ಬಿಡುವ ನಿರೀಕ್ಷೆಯಿದೆ. ತೋಟದಲ್ಲೇ ಹಣ್ಣುಗಳು ಮಾರಾಟವಾಗುತ್ತಿದ್ದು, ಬೇಡಿಕೆ ಪೂರೈಸಲು ಸಾಧ್ಯವಾಗುತ್ತಿಲ್ಲ’ ಎಂದು ನಾಗಪ್ಪ ಗೌಡ ಸಂತಸದಿಂದಲೇ ಹೇಳುತ್ತಾರೆ.

ಸಾಂಪ್ರದಾಯಿಕ ಅಡಿಕೆ, ತೆಂಗು, ವೀಳ್ಯದೆಲೆ ಇರುವ ತೋಟಕ್ಕೆ ಹೊಂದಿಕೊಂಡಂತೆ ರಕ್ತಚಂದನ, ಬೀಟೆ ಗಿಡಗಳನ್ನು ಸಾಲಿನಲ್ಲಿ ನೆಟ್ಟಿದ್ದಾರೆ. ಎರಡು ತೊಟ್ಟಿಗಳಲ್ಲಿ ವರ್ಷವಿಡೀ ಎರೆಹುಳು ಗೊಬ್ಬರ ತಯಾರಾಗುತ್ತಲೇ ಇರುತ್ತದೆ. ಗೊಬ್ಬರಕ್ಕೆಂದು 16 ದನಗಳನ್ನು ಸಾಕಿರುವ ಇವರು ಕೋಳಿ, ಜೇನು ಸಾಕಣೆ ಕೈಗೊಂಡಿದ್ದಾರೆ.

‘ಯೂ ಟ್ಯೂಬ್‌ನಿಂದ ಮಾಹಿತಿ ಪಡೆದು ಹೊಸ ಕೃಷಿ ಪದ್ಧತಿ ಅಳವಡಿಸಿಕೊಂಡೆ. ವಿವಿಧ ಇಲಾಖೆಗಳ ಅಧಿಕಾರಿಗಳು ಅಗತ್ಯ ಸಹಕಾರ ನೀಡಿದರು. ಕೇವಲ ಸಾಂಪ್ರದಾಯಿಕ ಬೆಳೆಯನ್ನು ಅವಲಂಬಿಸದೆ ಮಿಶ್ರ ಬೇಸಾಯ ಕೈಗೊಂಡರೆ ಭೂಮಿ ನಮ್ಮ ಕೈ ಬಿಡುವುದಿಲ್ಲ’ ಎನ್ನುತ್ತಾರೆ ನಾಗಪ್ಪ ಗೌಡ.

ಹೊನ್ನಾವರ ತಾಲ್ಲೂಕಿನ ಕೆಕ್ಕಾರಿನಲ್ಲಿ ಕೃಷಿಕ ನಾಗಪ್ಪ ಗೌಡ ಅವರು ತೋಟಕ್ಕೆ ನೀರುಣಿಸಲು ನಿರ್ಮಿಸಿಕೊಂಡಿರುವ ಕೃತಕ ಕೆರೆ.
ಹೊನ್ನಾವರ ತಾಲ್ಲೂಕಿನ ಕೆಕ್ಕಾರಿನಲ್ಲಿ ಕೃಷಿಕ ನಾಗಪ್ಪ ಗೌಡ ಅವರು ತೋಟಕ್ಕೆ ನೀರುಣಿಸಲು ನಿರ್ಮಿಸಿಕೊಂಡಿರುವ ಕೃತಕ ಕೆರೆ.
ಕೂಲಿಯಾಳುಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಸ್ವಂತ ದುಡಿಮೆ ಮಾಡುತ್ತೇನೆ. ಜತೆಗೆ ಸುಧಾರಿತ ಕೃಷಿ ಪದ್ಧತಿಯನ್ನು ಅನುಸರಿಸುತ್ತೇನೆ.
- ನಾಗಪ್ಪ ಗೌಡ, ಪ್ರಗತಿಪರ ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT