ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ: ಕಾಯಂ ಶಿಕ್ಷಕರನ್ನೇ ಕಾಣದ 139 ಶಾಲೆ

ಪಾಠಕ್ಕೆ ಅತಿಥಿ ಶಿಕ್ಷಕ, ಆಡಳಿತಕ್ಕೆ ಸಿ.ಆರ್.ಪಿ ಅವಲಂಬನೆ
Published 20 ಜೂನ್ 2024, 6:56 IST
Last Updated 20 ಜೂನ್ 2024, 6:56 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ 139 ಶಾಲೆಗಳಲ್ಲಿ ಒಬ್ಬರೂ ಕಾಯಂ ಶಿಕ್ಷಕರಿಲ್ಲ. ಈ ಶಾಲೆಗಳು ಪಾಠಕ್ಕೆ ಅತಿಥಿ ಶಿಕ್ಷಕರನ್ನು, ದೈನಂದಿನ ಆಡಳಿತ ನಿರ್ವಹಣೆಗೆ ಸಮೀಪದ ಇನ್ನೊಂದು ಶಾಲೆಯ ಶಿಕ್ಷಕ ಅಥವಾ ವಲಯ ಸಂಪನ್ಮೂಲ ವ್ಯಕ್ತಿ (ಸಿ.ಆರ್.ಪಿ) ಅವಲಂಬಿಸಬೇಕಾಗಿದೆ.

ಶಿರಸಿ ಶೈಕ್ಷಣಿಕ ಜಿಲ್ಲೆಯ 137 ಶಾಲೆಗಳಲ್ಲಿ, ಕಾರವಾರ ಶೈಕ್ಷಣಿಕ ಜಿಲ್ಲೆಯ ಹೊನ್ನಾವರದಲ್ಲಿ 2 ಶಾಲೆಗಳಿಗೆ ಒಬ್ಬರೂ ಕಾಯಂ ಶಿಕ್ಷಕರಿಲ್ಲದೆ ತೊಂದರೆ ಎದುರಿಸುತ್ತಿವೆ. ವಿದ್ಯಾರ್ಥಿಗಳಿಗೆ ಪಾಠ ಬೋಧಿಸುವ ಜತೆಗೆ ಬಿಸಿಯೂಟದಿಂದ ಶಾಲೆಯ ನಿರ್ವಹಣೆವರೆಗಿನ ಆಡಳಿತ ನೋಡಿಕೊಳ್ಳಲು ಈ ಶಾಲೆಗಳಲ್ಲಿ ಸಮಸ್ಯೆಗಳು ಎದುರಾಗುತ್ತಿವೆ.

ಒಬ್ಬರೂ ಶಿಕ್ಷಕರಿಲ್ಲದ ಶಾಲೆಗಳು ಬಹುತೇಕ ಕಿರಿಯ ಪ್ರಾಥಮಿಕ ಶಾಲೆಗಳಾಗಿದ್ದು, ಜನ ವಸತಿ ಕಡಿಮೆ ಇರುವ ಕುಗ್ರಾಮಗಳಲ್ಲಿ ಇರುವಂಥ ಶಾಲೆಗಳಾಗಿವೆ.

‘ಶಿಕ್ಷಕರ ನೇಮಕಾತಿಯ ವೇಳೆ ನಡೆಯುವ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಕುಗ್ರಾಮಗಳನ್ನು ಆಯ್ದುಕೊಳ್ಳಲು ಶಿಕ್ಷಕರು ಹಿಂದೇಟು ಹಾಕುತ್ತಾರೆ. ಶಾಲೆಗೆ ಸಾಗಲು ಬಸ್ ವ್ಯವಸ್ಥೆ, ರಸ್ತೆ ಸಂಪರ್ಕ, ದೂರವಾಣಿ ಸಂಪರ್ಕ, ವಸತಿಗೆ ವ್ಯವಸ್ಥೆ ಇಲ್ಲದ ಕಾರಣ ಶಿಕ್ಷಕರು ಈ ಶಾಲೆಗಳಿಗೆ ಬರಲು ಒಪ್ಪುತ್ತಿಲ್ಲ’ ಎನ್ನುತ್ತಾರೆ ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಪಿ. ಬಸವರಾಜ್.

‘ಶಿಕ್ಷಕರೇ ಇಲ್ಲದ ಪೈಕಿ ಜೊಯಿಡಾ ತಾಲ್ಲೂಕಿನಲ್ಲೇ 56 ಶಾಲೆಗಳಿವೆ. ಅಲ್ಲಿಯ ಗೋಡಸೇತ, ಭಾಮಣೆ, ಶಿರೋಳಿ, ಕುಮಗಾಳಿ, ತೇಲೋಲಿ ಸೇರಿದಂತೆ ಹಲವು ಕುಗ್ರಾಮಗಳಲ್ಲಿ ವಿದ್ಯಾರ್ಥಿಗಳಿದ್ದರೂ ಶಿಕ್ಷಕರಿಲ್ಲ. ಸಮೀಪದ ಗ್ರಾಮಗಳಲ್ಲಿರುವ ಅತಿಥಿ ಶಿಕ್ಷಕರನ್ನು ಹುಡುಕಿ ನೇಮಿಸಿಕೊಳ್ಳುವುದೂ ಕಷ್ಟವಾಗುತ್ತಿದೆ’ ಎಂದು ಹೇಳಿದರು.

‘ಕುಗ್ರಾಮಗಳ ಶಾಲೆಗೆ ನೇಮಕಗೊಂಡರೂ ಕನಿಷ್ಠ ಏಳು ವರ್ಷ ಕೆಲಸ ಮಾಡಿದ ಬಳಿಕ ಅಲ್ಲಿಂದ ವರ್ಗಾವಣೆ ಪಡೆದು ಬೇರೆಡೆಗೆ ತೆರಳುತ್ತಾರೆ. ಖಾಲಿಯಾದ ಹುದ್ದೆ ಭರ್ತಿಗೆ ಹರಸಾಹಸಪಡಬೇಕಾಗುತ್ತಿದೆ’ ಎಂದೂ ಹೇಳಿದರು.

ಕಾಯಂ ಶಿಕ್ಷಕರಿಲ್ಲದ ಶಾಲೆಗೆ ಸಮೀಪದ ಬೇರೊಂದು ಶಾಲೆಯ ಶಿಕ್ಷಕರನ್ನು ಆಡಳಿತಾತ್ಮಕ ನಿರ್ವಹಣೆಗೆ ನಿಯೋಜಿಸಲಾಗುತ್ತಿದೆ. ಪಾಠ ಬೋಧನೆಗೆ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ.
ಪಿ. ಬಸವರಾಜ್, ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ

‘ಜೊಯಿಡಾದ ಕುಗ್ರಾಮಗಳ ಶಾಲೆಗಳು ತೀರಾ ಒಳಪ್ರದೇಶಗಳಲ್ಲಿವೆ. ಪಟ್ಟಣದಿಂದ ಅಲ್ಲಿಗೆ ನಿತ್ಯ ಹೋಗಿ ಬರಲಾಗದು. ಸ್ಥಳೀಯವಾಗಿ ಉಳಿದುಕೊಳ್ಳಲು ಬಾಡಿಗೆ ಮನೆ ಸಿಗದು. ದೂರವಾಣಿ ಸಂಪರ್ಕ ದೂರದ ಮಾತು. ಹೀಗಾಗಿ ಅಲ್ಲಿ ಕರ್ತವ್ಯ ನಿರ್ವಹಿಸಲು ಶಿಕ್ಷಕರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಕಳೆದ ವರ್ಷವಷ್ಟೇ ಜೊಯಿಡಾದಿಂದ ವರ್ಗಾವಣೆ ಪಡೆದು ಬಂದ ಶಿಕ್ಷಕರೊಬ್ಬರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT