ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುರ್ತು ಪರಿಸ್ಥಿತಿಯ ದೌರ್ಜನ್ಯ ಸಂವಿಧಾನ ರೀತಿ ನಡೆದಿದೆಯೇ: ನಾರಾಯಣ ಭಟ್ ಪ್ರಶ್ನೆ

Published 26 ಜೂನ್ 2024, 14:00 IST
Last Updated 26 ಜೂನ್ 2024, 14:00 IST
ಅಕ್ಷರ ಗಾತ್ರ

ಶಿರಸಿ: ‘ದೇಶದಲ್ಲಿ 1975ರಲ್ಲಿನ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಾಮಾನ್ಯ ನಾಗರಿಕನ ಮೇಲಾದ ದೌರ್ಜನ್ಯಗಳು ಸಂವಿಧಾನದ ರೀತಿಯೇ ನಡೆದಿವೆಯೇ? ಇಂಥ ಹೇಯ ಕೃತ್ಯಕ್ಕೆ ಕಾಂಗ್ರೆಸ್ಸಿಗರು ಏನು ಉತ್ತರ ನೀಡುತ್ತಾರೆ?’ ಎಂದು ತುರ್ತು ಪರಿಸ್ಥಿತಿ ಹೋರಾಟಗಾರ ನಾರಾಯಣ ಭಟ್ ಬಳ್ಳಿ ಪ್ರಶ್ನಿಸಿದರು. 

ಮಂಗಳವಾರ ಬಿಜೆಪಿ ಉತ್ತರ ಕನ್ನಡ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರ ವೇದಿಕೆ ವತಿಯಿಂದ ನಗರದ ದೀನದಯಾಳ ಭವನದಲ್ಲಿ ‘ತುರ್ತು ಪರಿಸ್ಥಿತಿ ಸಂವಿಧಾನಕ್ಕೆ ಮಾಡಿದ ಅಪಚಾರ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸೆರೆಮನೆ ವಾಸದಲ್ಲಿ ಇದ್ದವರಿಗೆ ವಿಪರೀತ ಹಿಂಸೆ ನೀಡಿದ ಘಟನೆಗಳು ಭಾರತದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿ ಆದ ಘೋರ ಅಪಚಾರ. ಇಷ್ಟೇ ಅಲ್ಲದೆ ತುರ್ತು ಪರಿಸ್ಥಿತಿಯ ಹೋರಾಟಗಾರರಿಗೆ ಸಹಕಾರ ನೀಡಿದವರ ಮೇಲೆ ಕೂಡ ದೌರ್ಜನ್ಯಗಳು ನಡೆದಿವೆ. ಇವೆಲ್ಲವೂ ಸಂವಿಧಾನದ ರೀತ್ಯಾ ನಡೆದಿವೆಯೇ ಎಂದು ಪ್ರಶ್ನಿಸಿದರು. ಇದ್ಯಾವುದರ ಪರಿವೆಯೇ ಇಲ್ಲದೆ ಈಗಿನ ಕಾಂಗ್ರೆಸ್ಸಿಗರು ಮಾತನಾಡುವುದನ್ನು ನೋಡಿದರೆ ಕೋಪ, ಬೇಸರವೂ ಆಗುತ್ತದೆ’ ಎಂದರು.

ಸಂವಿಧಾನ ಕುರಿತಾಗಿ ವಿಷಯ ಮಂಡನೆ ಮಾಡಿದ ನ್ಯಾಯವಾದಿ ನಾಗರಾಜ ನಾಯಕ, ‘ಸರ್ಕಾರದ ಮುಂದೆ ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನದ ಬದಲಾವಣೆ ಮಾಡುವ ಯಾವುದೇ ಪ್ರಸ್ತಾವ ಇಲ್ಲ ಎಂದು ಪ್ರಧಾನಿ ಮೋದಿ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೂ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತದೆ ಎನ್ನುವ ಸುಳ್ಳನ್ನೇ ಪ್ರಚಾರ ಮಾಡುವ ಕೆಲಸ ಕಾಂಗ್ರೆಸ್ ಈಗಲೂ ಮುಂದುವರೆಸಿದೆ’ ಎಂದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಉತ್ತರಕನ್ನಡ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್.ಹೆಗಡೆ ಕರ್ಕಿ, ‘ಐವತ್ತು ವರ್ಷಗಳ ಹಿಂದೆ ತುರ್ತು ಪರಿಸ್ಥಿತಿ ಹೇರಿ ಇಂದಿರಾ ಗಾಂಧಿ ಸಂವಿಧಾನಕ್ಕೆ ಘೋರ ಅಪಚಾರ ಎಸಗಿದ್ದರು. ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು ಹಾಗೂ ಬಿಜೆಪಿ ಸೇರಿ ಈ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ’ ಎಂದರು.

ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು ವೇದಿಕೆಯ ನಾಗರಾಜ ನಾಯಕ, ಮಾಜಿ ಶಾಸಕ ಸುನಿಲ್ ಹೆಗಡೆ, ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಹ ಸಂಯೋಜಕ ಭೋಜರಾಜ ಕರೂದಿ, ಸಾಮಾಜಿಕ ಕಾರ್ಯಕರ್ತ ಭವಾನಿಶಂಕರ ನಾಯ್ಕ, ಜಿಲ್ಲಾ ಬಿಜೆಪಿ ಎಸ್.ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ನಂದನ ಬೋರ್ಕರ, ಎಸ್ಟಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಾಂತ ಬಳ್ಳಾರಿ, ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಶಿವಾನಿ ಶಾಂತಾರಾಮ, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮಕುಮಾರ ನಾಯ್ಕ, ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT