ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡದಲ್ಲಿ ಹೆಚ್ಚುತ್ತಿರುವ ಬಿಸಿಲ ಝಳ | ನೀರು ಖರೀದಿಸಿ, ಅಡಿಕೆ ಬೆಳೆ ರಕ್ಷಣೆ

ಟ್ಯಾಂಕರ್ ನೀರಿಗೆ ಏರಿದ ಬೇಡಿಕೆ
Published 6 ಏಪ್ರಿಲ್ 2024, 6:10 IST
Last Updated 6 ಏಪ್ರಿಲ್ 2024, 6:10 IST
ಅಕ್ಷರ ಗಾತ್ರ

ಮುಂಡಗೋಡ: ವಾರಕ್ಕೆ ಎಂಟರಿಂದ ಹತ್ತು ಟ್ಯಾಂಕರ್‌ ನೀರು ತರಿಸಿ ಬೆಳೆ ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ. ಟ್ಯಾಂಕರ್‌ನಿಂದ ನೇರವಾಗಿ ಗಿಡಕ್ಕೆ ನೀರು ಹಾಯಿಸಿದರೇ, ನೀರು ಜಾಸ್ತಿ ಖರ್ಚಾಗುತ್ತಿದೆ. ಹೊಂಡದಲ್ಲಿ ನೀರು ಸಂಗ್ರಹಿಸಿಕೊಂಡು ಪೈಪ್‌ಲೈನ್‌ ಮೂಲಕ ನೀರುಣಿಸಿದರೆ, ನೀರಿನ ಉಳಿತಾಯದೊಂದಿಗೆ ಹಣವೂ ತುಸು ಉಳಿಯುತ್ತದೆ. ಬರದ ಪರಿಸ್ಥಿತಿಯಲ್ಲಿ ಸಾಲ ಮಾಡಿಯಾದರೂ, ನೀರು ಖರೀದಿಸಿ ಬೆಳೆ ಉಳಿಸಿಕೊಳ್ಳಬೇಕಾಗಿದೆ’

ಇದು ತಾಲ್ಲೂಕಿನಲ್ಲಿ ಅಡಿಕೆ ಬೆಳೆದಿರುವ ಹಲವು ರೈತರು ಸದ್ಯದ ಸ್ಥಿತಿಯಲ್ಲಿ ವ್ಯಕ್ತಪಡಿಸುತ್ತಿರುವ ಅಭಿಪ್ರಾಯ. ಅಂತರ್ಜಲ ಕುಸಿತದಿಂದ ತೋಟದಲ್ಲಿದ್ದ ಕೊಳವೆಬಾವಿಗಳು ನೀರು ಹೊರಹಾಕುವ ಪ್ರಮಾಣ ಕಡಿಮೆಯಾಗಿದೆ. ಬಿಸಿಲಿನ ಝಳಕ್ಕೆ ಅಡಿಕೆ ಮರಗಳು ಹೆಚ್ಚಿನ ಪ್ರಮಾಣದ ನೀರನ್ನು ಬೇಡುತ್ತಿವೆ. ಕೆರೆಕಟ್ಟೆಗಳೂ ಬತ್ತಿವೆ. ಇಂತ ಪರಿಸ್ಥಿತಿಯಲ್ಲಿ ಟ್ಯಾಂಕರ್‌ ನೀರು ಖರೀದಿಸುವ ರೈತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ಬೇಡಿಕೆ ಹೆಚ್ಚಾದಂತೆ ಟ್ಯಾಂಕರ್‌ ನೀರಿನ ದರದಲ್ಲಿಯೂ ಏರಿಕೆ ಆಗುತ್ತಿರುವುದು, ಅಡಿಕೆ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗುತ್ತಿದೆ ಎಂಬುದು ರೈತರ ದೂರು.

‘ಕಳೆದ ಎರಡು ವಾರದಿಂದ ಅಡಿಕೆ ತೋಟಕ್ಕೆ ಟ್ಯಾಂಕರ್‌ ಮೂಲಕ ನೀರು ಹಾಯಿಸುತ್ತಿದ್ದೇನೆ. ಪ್ರತಿ ಟ್ಯಾಂಕರ್‌ ನೀರಿಗೆ ₹450-₹500 ಕೊಡಬೇಕು. ನಾಲ್ಕು ಎಕರೆ ಅಡಿಕೆ ಪ್ರದೇಶಕ್ಕೆ ವಾರಕ್ಕೆ 8 ರಿಂದ10 ಟ್ಯಾಂಕರ್‌ ನೀರು ಬೇಕೆ ಬೇಕು. ಐದಾರು ವರ್ಷದ ಅಡಿಕೆ ಗಿಡಗಳಿದ್ದು, ಈಗ ಸಾಲ ಮಾಡಿಯಾದರೂ ಉಳಿಸಿಕೊಳ್ಳಬೇಕು. ಇಲ್ಲವಾದರೆ, ಇಷ್ಟು ವರ್ಷದ ಶ್ರಮ ಹಾಗೂ ಮಾಡಿದ ಖರ್ಚು ವ್ಯರ್ಥವಾದಂತಾಗುತ್ತದೆ’ ಎನ್ನುತ್ತಾರೆ ರೈತ ಯಲ್ಲಪ್ಪ.

‘ಪಾಳಾ ಭಾಗದಲ್ಲಿ ಕೊಳವೆಬಾವಿಗಳಲ್ಲಿ ಬಹುತೇಕ ಅಂತರ್ಜಲ ಮಟ್ಟ ಕುಸಿದಿದೆ. ಈ ಹಿಂದೆ 400 ಅಡಿವರೆಗೆ ಕೊರೆಸಿದ್ದ ಕೊಳವೆ ಬಾವಿಗಳಲ್ಲಿ, ಆಗ ನೀರಿನ ಲಭ್ಯತೆಗನುಸಾರವಾಗಿ 200 ಅಡಿವರೆಗೆ ಮಾತ್ರ ಪೈಪ್‌ಗಳನ್ನು ಅಳವಡಿಸಿ ನೀರು ಹಾಯಿಸಿದ್ದರು. ಈಗ ಹೆಚ್ಚುವರಿಯಾಗಿ 400ಅಡಿವರೆಗೆ ಪೈಪ್‌ಗಳನ್ನು ಇಳಿಸಿ, ನೀರು ಹೊರತೆಗೆಯುವುದರಲ್ಲಿ ರೈತರು ನಿರತರಾಗಿದ್ದಾರೆ. ಕೆಲವು ರೈತರು ಇದರಲ್ಲಿ ಯಶಸ್ಸು ಕಾಣುತ್ತಿದ್ದರೆ, ಕೆಲವರಿಗೆ ಇಲ್ಲಿಯೂ ನೀರು ಸಿಗುತ್ತಿಲ್ಲ’ ಎಂದು ಪ್ರಗತಿಪರ ಕೃಷಿಕ ಶಿವಕುಮಾರ ಪಾಟೀಲ ಹೇಳಿದರು.

ಮುಂಡಗೋಡ ತಾಲ್ಲೂಕಿನ ಕರಗಿನಕೊಪ್ಪ ಸನಿಹ ರೈತರೊಬ್ಬರು ಕೊಳವೆಬಾವಿಗೆ ಟ್ಯಾಂಕರ್‌ ನೀರು ಹಾಕಿಸಿ ನಂತರ ಕೊಳವೆ ಬಾವಿಯಿಂದ ಅಡಿಕೆ ಗಿಡಗಳಿಗೆ ನೀರು ಹಾಯಿಸುತ್ತಿರುವುದು
ಮುಂಡಗೋಡ ತಾಲ್ಲೂಕಿನ ಕರಗಿನಕೊಪ್ಪ ಸನಿಹ ರೈತರೊಬ್ಬರು ಕೊಳವೆಬಾವಿಗೆ ಟ್ಯಾಂಕರ್‌ ನೀರು ಹಾಕಿಸಿ ನಂತರ ಕೊಳವೆ ಬಾವಿಯಿಂದ ಅಡಿಕೆ ಗಿಡಗಳಿಗೆ ನೀರು ಹಾಯಿಸುತ್ತಿರುವುದು

‘ಅಡಿಕೆ ತೋಟಗಳಿಗೆ ಟ್ಯಾಂಕರ್‌ ನೀರು ಹಾಕಲು ಹೆಚ್ಚಿನ ಬೇಡಿಕೆ ಇದೆ. ನೀರು ತುಂಬಿಸಿಕೊಳ್ಳುವ ಸ್ಥಳ ಹಾಗೂ ತೋಟಗಳ ನಡುವಿನ ಅಂತರದ ಮೇಲೆ ದರ ನಿಗದಿಪಡಿಸಲಾಗುತ್ತದೆ. ಕೆಲವು ರೈತರು ಕೊಳವೆ ಬಾವಿಗಳಿಗೆ ನೀರು ಹಾಕಿಸಿಕೊಂಡು, ನಂತರ ಕೊಳವೆ ಬಾವಿ ಚಾಲೂ ಮಾಡಿ ತೋಟಕ್ಕೆ ಹಾಯಿಸುತ್ತಿದ್ದಾರೆʼ ಎಂದು ಟ್ಯಾಂಕರ್‌ ಚಾಲಕ ವಿರೇಶ ಹೇಳಿದರು.

ಅಂಕಿ-ಅಂಶ

ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳದ ಅಡಿಕೆ ಬೆಳೆಗಾರರಿಗೆ ನೀರಿನ ಸಮಸ್ಯೆ ಎದುರಾಗಿದೆ. ಲಭ್ಯವಿರುವ ಜಲಮೂಲಗಳನ್ನು ಬಳಸಿಕೊಂಡು ಅಡಿಕೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರತಿ ವರ್ಷ ಅಡಿಕೆ ಬೆಳೆಯುವ ರೈತರ ಸಂಖ್ಯೆ ಶೇ 20ರಷ್ಟು ಹೆಚ್ಚಾಗುತ್ತಿದೆ.
– ಕೃಷ್ಣ ಕುಲ್ಲೂರು ಸಹಾಯಕ ತೋಟಗಾರಿಕಾ ನಿರ್ದೇಶಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT