ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಂಎಸ್‌ಪಿ: ಭತ್ತ ಮಾರಾಟಕ್ಕೆ ರಾಜ್ಯದಲ್ಲಿ 81 ರೈತರ ನೋಂದಣಿ

ಬರಗಾಲದ ಪರಿಣಾಮ ಇಳುವರಿ ಕುಂಠಿತ: ಮುಕ್ತ ಮಾರುಕಟ್ಟೆಯಲ್ಲಿ ದರ ಏರಿಕೆ
Published 20 ಜನವರಿ 2024, 20:52 IST
Last Updated 20 ಜನವರಿ 2024, 20:52 IST
ಅಕ್ಷರ ಗಾತ್ರ

ಶಾಂತೇಶ ಬೆನಕನಕೊಪ್ಪ

ಮುಂಡಗೋಡ (ಉತ್ತರ ಕನ್ನಡ): ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ಸಾಮಾನ್ಯ ಭತ್ತ ಖರೀದಿ ಪ್ರಕ್ರಿಯೆ ಆರಂಭವಾಗಿ ಒಂದೂವರೆ ತಿಂಗಳಾದರೂ  ರಾಜ್ಯದಲ್ಲಿ 81 ರೈತರು ಮಾತ್ರ ಭತ್ತ ಮಾರಾಟಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ಕಳೆದ ಡಿಸೆಂಬರ್‌ ತಿಂಗಳಿಂದ ಭತ್ತ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಹಾಸನ, ಕೊಡಗು, ಮಂಡ್ಯ, ಮೈಸೂರು, ಉತ್ತರ ಕನ್ನಡ ಈ ಐದು ಜಿಲ್ಲೆಗಳ ಭತ್ತ ಖರೀದಿ ಕೇಂದ್ರದಲ್ಲಿ ಹೆಸರು ನೋಂದಣಿಯಾಗಿದೆ. ಜನವರಿ 19ರ ವರೆಗೆ ಲಭ್ಯವಾದ ಮಾಹಿತಿಯಂತೆ ರಾಜ್ಯದ 28 ಜಿಲ್ಲೆಗಳಲ್ಲಿ ರೈತರ ನೋಂದಣಿ ಪ್ರಕ್ರಿಯೆ ಶೂನ್ಯ ಇದೆ.

ಹೆಸರು ನೋಂದಾಯಿಸಿಕೊಂಡ ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಲ್‌ನಂತೆ ಗರಿಷ್ಠ 40 ಕ್ವಿಂಟಲ್ ಭತ್ತ ಖರೀದಿಸಲಾಗುತ್ತದೆ. ಕನಿಷ್ಠ ಬೆಂಬಲ ಬೆಲೆಯಡಿ ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ ₹2,183 ಹಾಗೂ ‘ಎ’ ಗ್ರೇಡ್‌ ಭತ್ತಕ್ಕೆ ₹2,203 ದರ ನಿಗದಿ ಮಾಡಲಾಗಿದೆ.

‘ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ನಿಗದಿ ಮಾಡಿರುವ ದರಕ್ಕಿಂತ ಮುಕ್ತ ಮಾರುಕಟ್ಟೆಯಲ್ಲಿ ಭತ್ತಕ್ಕೆ ಹೆಚ್ಚಿನ ದರ ಸಿಗುತ್ತಿದೆ. ಕುಚಲಕ್ಕಿ ಭತ್ತದ ತಳಿಗೆ ಈ ಹಿಂದೆ ನೀಡಲಾಗುತ್ತಿದ್ದ ಸಹಾಯಧನವೂ ನಿಂತಿದೆ. ಸಮೀಪದ ಅಕ್ಕಿ ಗಿರಣಿಗಳಲ್ಲೇ ಭತ್ತ ಖರೀದಿಗೆ ಅವಕಾಶ ನೀಡದಿರುವುದು, ತಾಲ್ಲೂಕು ಕೇಂದ್ರಕ್ಕೆ ರೈತರೇ ಸಾಗಾಣಿಕಾ ವೆಚ್ಚ ಭರಿಸಿ, ಭತ್ತ ನೀಡಬೇಕಿರುವುದು ರೈತರ ನಿರಾಸಕ್ತಿಗೆ ಕಾರಣವಾಗಿದೆ’ ಎಂದು ರಾಜ್ಯ ಅಕ್ಕಿಗಿರಣಿ ಮಾಲೀಕರ ಸಂಘದ ಸದಸ್ಯ ಶಿವಕುಮಾರ ಪಾಟೀಲ ಸಮಸ್ಯೆ ವಿವರಿಸಿದರು.

‘ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ವರ್ಷ ಭತ್ತದ ಇಳುವರಿ ಶೇ 20ರಷ್ಟು ಕಡಿಮೆಯಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ ಭತ್ತಕ್ಕೆ ₹2,800 ರಿಂದ ₹3 ಸಾವಿರದವರೆಗೆ ದರ ಏರಿದೆ. ಕೆಲವೆಡೆ ರೈತರಿಂದಲೇ ನೇರವಾಗಿ ವ್ಯಾಪಾರಸ್ಥರು ಖರೀದಿ ಮಾಡುತ್ತಿದ್ದಾರೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ಪ್ರತಿಕ್ರಿಯಿಸಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ನೋಂದಣಿ ಪ್ರಕ್ರಿಯೆಯಲ್ಲಿ ರೈತರ ಪಾಲ್ಗೊಳ್ಳುವಿಕೆ ಕಡಿಮೆಯಿದೆ. ಭತ್ತ ಖರೀದಿ ನೊಂದಣಿಗೆ ಮಾರ್ಚ್.31ರ ವರೆಗೆ ಅವಕಾಶ ಕಲ್ಪಿಸಲಾಗಿದೆ
–ಮಂಜುನಾಥ ರೇವಣಕರ ಉಪನಿರ್ದೇಶಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT