ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ | ಬಿಸಿಲ ಝಳ: ಹೆಚ್ಚುತ್ತಿದೆ ಅಗ್ನಿ ಅವಘಡ!

Published 18 ಮೇ 2024, 6:24 IST
Last Updated 18 ಮೇ 2024, 6:24 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಾದ್ಯಂತ ಒಂದೆಡೆ ತಾಪಮಾನ ಏರಿಕೆಯಾಗುತ್ತಿದ್ದರೆ, ಇನ್ನೊಂದೆಡೆ ಬೆಂಕಿ ಅವಘಡಗಳ ಘಟನೆಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ.

ವರ್ಷದಿಂದ ವರ್ಷಕ್ಕೆ ಉಷ್ಣಾಂಶದ ಪ್ರಮಾಣ ಏರಿಕೆಯಾಗುತ್ತಿದ್ದು, ಈ ಬಾರಿ ದಾಖಲೆಯ 41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಶಿರಸಿ ಸೇರಿ ಹಲವು ಭಾಗದಲ್ಲಿ ದಾಖಲಾಗಿತ್ತು. ಕರಾವಳಿ ಭಾಗದಲ್ಲಿ ಉಷ್ಣತೆ ಕಡಿಮೆ ಇದ್ದರೂ ಆರ್ದೃತೆ ಅಧಿಕವಾಗಿರುವುದರಿಂದ ಸೆಕೆಯೂ ಹೆಚ್ಚುತ್ತಿದೆ. ಈ ರೀತಿಯ ವಾತಾವರಣ ಅಗ್ನಿ ಅವಘಡಗಳಿಗೆ ಪೂರಕವಾಗಿ ಪರಿಣಮಿಸಿದೆ.

ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ (2024ರ ಜ. 1 ರಿಂದ ಏ. 30) ಜಿಲ್ಲೆಯಲ್ಲಿ 326 ಅಗ್ನಿ ಅವಘಡಗಳು ಸಂಭವಿಸಿವೆ. ಈ ಪೈಕಿ ಒಂದು ದೊಡ್ಡ ಘಟನೆಯಾದರೆ, 322 ಸಣ್ಣ ಪ್ರಮಾಣದ ಬೆಂಕಿ ಅವಘಡಗಳಾಗಿವೆ. ಹಿಂದಿನ ಮೂರು ವರ್ಷಗಳಿಗೆ ಹೋಲಿಸಿದರೆ ಸತತ ಎರಡು ವರ್ಷಗಳಿಂದ ಬೆಂಕಿ ಅವಘಡ ಹೆಚ್ಚುತ್ತಿರುವುದು ಮನದಟ್ಟಾಗುತ್ತಿದೆ ಎನ್ನುತ್ತಾರೆ ಅಗ್ನಿಶಾಮಕ ದಳದ ಅಧಿಕಾರಿಗಳು.

2023ನೇ ಸಾಲಿನಲ್ಲಿ 963 ಅಗ್ನಿಅವಘಡದ ಕರೆಗಳು ಅಗ್ನಿಶಾಮಕ ದಳಕ್ಕೆ ಬಂದಿದ್ದವು. ಇದಕ್ಕೂ ಮುಂಚಿನ ವರ್ಷಗಳಲ್ಲಿ ಸರಾಸರಿ 350 ರಿಂದ 450 ಕರೆಗಳು ಮಾತ್ರ ದಾಖಲಾಗುತ್ತಿದ್ದವು. 2024ರಲ್ಲಿ ಕೇವಲ ನಾಲ್ಕು ತಿಂಗಳ ಅವಧಿಯಲ್ಲೇ 326 ಕರೆಗಳು ದಾಖಲಾಗಿರುವುದು ಅಗ್ನಿಶಾಮಕ ದಳವನ್ನೂ ಚಿಂತೆಗೀಡು ಮಾಡಿದೆ.

‘ಬೆಂಕಿ ಅವಘಡ ಸಂಭವಿಸಲು ಕೇವಲ ವಾತಾವರಣದಲ್ಲಿ ತಾಪಮಾನ ಏರಿಕೆಯೇ ಕಾರಣವಲ್ಲ. ಮನುಷ್ಯನ ನಿರ್ಲಕ್ಷ್ಯದಿಂದ ಬೆಂಕಿ ಅವಘಡ ಸಂಭವಿಸುವ ಪ್ರಮಾಣವೇ ಹೆಚ್ಚು. ಸಾಧ್ಯವಾದಷ್ಟು ಎಚ್ಚರಿಕೆ ವಹಿಸಿದರೆ ಬೆಂಕಿ ಅವಘಡ ನಡೆಯುವುದನ್ನು ತಪ್ಪಿಸಬಹುದು’ ಎನ್ನುತ್ತಾರೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸುನೀಲಕುಮಾರ್.

‘ಅತಿಯಾದ ತಾಪಮಾನದಿಂದ ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದ ಘಟನೆ ನಡೆದಿದೆ. ಆದರೆ, ಅರಣ್ಯ ಇಲಾಖೆಯ ಸಿಬ್ಬಂದಿ ಅಂತಹ ಅವಘಡವನ್ನು ನಿಯಂತ್ರಿಸಿದ್ದಾರೆ. ಅವರ ಕೈಲಿ ಸಾಧ್ಯವಾಗದಿದ್ದಾಗ ಅಗ್ನಿಶಾಮಕ ದಳವು ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡಿದೆ. ಇದರ ಹೊರತಾಗಿ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್, ಹುಲ್ಲಿನ ಬಣವೆಗೆ ಬೆಂಕಿ, ಕಸಕಡ್ಡಿ ಸುಡಲು ಹಚ್ಚಿದ ಬೆಂಕಿ ಗಾಳಿಗೆ ಹರಡಿ ಉಂಟಾದ ಅವಘಡಗಳೇ ಈ ಬಾರಿ ಹೆಚ್ಚು ನಡೆದಿವೆ. ಅವುಗಳ ಜತೆಗೆ ಜನ, ಜಾನುವಾರು ಅಪಾಯದಲ್ಲಿದ್ದಾಗ ರಕ್ಷಣೆ ಮಾಡಿದ ಪ್ರಕರಣಗಳು ಸಾಕಷ್ಟಿವೆ’ ಎಂದು ವಿವರಿಸಿದರು.

ಬಿಸಿಲ ಝಳ ಹೆಚ್ಚಿರುವ ಹಿನ್ನೆಲೆಯಲ್ಲಿ ಜನರು ಮುನ್ನೆಚ್ಚರಿಕೆ ವಹಿಸುತ್ತಿರಬೇಕು. ಜನರು ಎಚ್ಚರದಿಂದ ಇದ್ದರೆ ಅಗ್ನಿ ಅವಘಡ ತಪ್ಪಿಸಲು ಸಾಧ್ಯ
ಸುನೀಲಕುಮಾರ್,ಜಿಲ್ಲಾ ಅಗ್ನಿಶಾಮಕ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT