ಶಿರಸಿ: ಕೋವಿಡ್ ಕಾರಣದಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೂ, ಮಾ.28 ರಿಂದ ಆರಂಭಗೊಳ್ಳಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಸೇವೆ ಒದಗಿಸಲು ಕೆಲವು ಆಟೊ ಚಾಲಕರು ನಿರ್ಧರಿಸಿದ್ದಾರೆ.
ಶಿರಸಿ ನಗರ ಮತ್ತು 10 ಕಿ.ಮೀ. ವ್ಯಾಪ್ತಿಯ ಹಳ್ಳಿಗಳ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳಲು ಆಟೊ, ಟ್ಯಾಕ್ಸಿ ವ್ಯವಸ್ಥೆ ಕಲ್ಪಿಸಲಾಗಿದೆ. 21 ಮಂದಿ ಆಟೊ ಚಾಲಕರು, 6ಕ್ಕೂ ಹೆಚ್ಚು ಟ್ಯಾಕ್ಸಿ ಚಾಲಕರು ಈ ಸೇವೆ ನೀಡಲಿದ್ದಾರೆ.
2020, 2021ರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ಇದೇ ಚಾಲಕರು ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದರು. 1,400ಕ್ಕೂ ಹೆಚ್ಚು ಮಕ್ಕಳು ಇದರ ಲಾಭ ಪಡೆದಿದ್ದರು.
‘ಚಾಲಕರ ದೂರವಾಣಿ ಸಂಖ್ಯೆಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಕೇಂದ್ರಕ್ಕೆ ತೆರಳಲು ವಾಹನ ವ್ಯವಸ್ಥೆ ಇಲ್ಲದವರು ಕರೆ ಮಾಡಿದರೆ ಅವರನ್ನು ಕೇಂದ್ರಕ್ಕೆ ಕರೆದೊಯ್ಯುವ, ಪರೀಕ್ಷೆ ಮುಗಿದ ಬಳಿಕ ಮನೆಗೆ ತಂದುಬಿಡುವ ಕೆಲಸ ಮಾಡಲಾಗುತ್ತದೆ’ ಎಂದು ಆಟೊ ಯೂನಿಯನ್ ಪ್ರಮುಖ ವಿಶ್ವನಾಥ ಗೌಡ ತಿಳಿಸಿದರು.
‘ಕೋವಿಡ್ ಕಾರಣದಿಂದ ಕೆಲ ಪಾಲಕರು ಸಂಕಷ್ಟದಲ್ಲಿದ್ದರು. ಮನೆಯಿಂದ ದೂರ ಇರುವ ಪರೀಕ್ಷಾ ಕೇಂದ್ರಕ್ಕೆ ದಿನವೂ ಆಟೊ ಮಾಡಿ ಕಳಿಸುವುದು ಅವರಿಗೆ ಕಷ್ಟವಾಗಿತ್ತು. ಆದ್ದರಿಂದ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿಗೂ ಹಾಗೆಯೇ ಮಾಡುತ್ತೇವೆ. ಪಾಲಕರು ಹಣ ನೀಡಲು ಮುಂದೆ ಬಂದರೂ, ಸ್ವೀಕರಿಸಬಾರದು ಎಂದು ನಿರ್ಧರಿಸಿದ್ದೇವೆ’ ಎಂದರು.
‘ಕಳೆದ ವರ್ಷ ಆದಾಯವಿಲ್ಲದೆ ಪೈಸೆಯನ್ನೂ ಲೆಕ್ಕ ಹಾಕುವ ಸ್ಥಿತಿಯಲ್ಲಿದ್ದಾಗ ಮಗನನ್ನು ಖರ್ಚಿಲ್ಲದೆ ಪರೀಕ್ಷೆ ಕೇಂದ್ರಕ್ಕೆ ಕಳುಹಿಸಲು ಸಿಕ್ಕ ನೆರವನ್ನು ಮರೆಯಲು ಸಾಧ್ಯವಿಲ್ಲ’ ಎಂದು ಬಾಬು ಮೊಗೇರ ಹೇಳಿದರು.