ಕಾರವಾರ: ತಾಲ್ಲೂಕಿನ ಚಿತ್ತಾಕುಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜು ಎಲ್.ತಾಂಡೇಲ (58) ಹೃದಾಯಾಘಾತದಿಂದ ಸೋಮವಾರ ತಡರಾತ್ರಿ ನಿಧನರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟ ಸಹಕಾರ ಫೆಡರೇಶನ್, ಉತ್ತರ ಕನ್ನಡ ಜಿಲ್ಲಾ ಪರ್ಸಿನ್ ಬೋಟ್ ಮಾಲೀಕರ ಸಂಘದ ಅಧ್ಯಕ್ಷರಾಗಿದ್ದ ಅವರು ಮೀನುಗಾರ ಸಮುದಾಯದ ಮುಖಂಡರಾಗಿ ಗುರುತಿಸಿಕೊಂಡಿದ್ದರು.
ಚಿತ್ತಾಕುಲ ಗ್ರಾಮ ಪಂಚಾಯಿತಿಗೆ ಸತತ ಮೂರು ಅವಧಿಗೆ ಸದಸ್ಯರಾಗಿ, ಎರಡು ಅವಧಿಗೆ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.
'ತಡರಾತ್ರಿ 1 ಗಂಟೆ ಸುಮಾರಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಜಿಲ್ಲಾಸ್ಪತ್ರೆಗೆ ಕರೆತರಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು' ಎಂದು ರಾಜು ಅವರ ಕುಟುಂಬ ಮೂಲಗಳು ತಿಳಿಸಿವೆ.
'ಜಿಲ್ಲಾಸ್ಪತ್ರೆಯ ಆವರಣದಿಂದ ಮೃತದೇಹವನ್ನು ಸದಾಶಿವಗಡದ ಆಜಾದ್ ಮೈದಾನದಕ್ಕೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಗುವುದು. ಅಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು. ಸಂಜೆ ಚಿತ್ತಾಕುಲದ ಸೀಬರ್ಡ್ ಕಾಲೊನಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ' ಎಂದು ಮೀನುಗಾರ ಸಮುದಾಯದ ಪ್ರಕಟಣೆ ತಿಳಿಸಿದೆ.