ಭಟ್ಕಳ: ತಾಲ್ಲೂಕಿನಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನ ವರೆಗೆ ಸುರಿದ ಧಾರಾಕಾರ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡು ಹಲವು ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.
ಕಾಯ್ಕಿಣಿ ಜನತಾ ಕಾಲೊನಿ ನಿವಾಸಿ ಕುಪ್ಪಯ್ಯ ದೇವಾಡಿಗ ಮನೆ ಕುಸಿದು ಹಾನಿಯಾಗಿದೆ. ಕಿತ್ರೆಯ ನಿವಾಸಿ ಮಾಸ್ತಿ ಗೊಂಡ ಮನೆಯ ಚಾವಣಿ ಹಾಗೂ ಆಸರಕೇರಿ ನಿವಾಸಿ ಶಾರದಾ ಹೊನ್ನಪ್ಪ ನಾಯ್ಕ ಮನೆಯ ಚಾವಣಿ ಕುಸಿದಿದೆ.
ಮುಲ್ಲಿಗದ್ದೆ ಹಡೀನ ನಿವಾಸಿ ಮಾದಿ ದುರ್ಗಪ್ಪ ನಾಯ್ಕ ಮನೆಯೂ ಭಾಗಶಃ ಕುಸಿದು ಹಾನಿಯಾಗಿದೆ. ಮಳೆಯಿಂದ ತಾಲ್ಲೂಕಿನ ಪ್ರಮುಖ ನದಿಗಳು ಉಕ್ಕಿಬಂದ ಕಾರಣ ಪುರವರ್ಗ, ಮೂಡಭಟ್ಕಳ ತಲಾಂದ ಹಾಗೂ ಬಿಳಲಖಂಡ ಪ್ರದೇಶಗಳಲ್ಲಿ ಅಲ್ಲಲ್ಲಿ ಮನೆಯೊಳಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.
ಪಟ್ಟಣದ ರಂಗಿನಕಟ್ಟೆ ರಾಷ್ಟ್ರೀಯ ಹೆದ್ದಾರಿ ಹಾಗೂ ಶಂಸುದ್ದೀನ್ ವೃತ್ತ ಮಳೆನೀರಿನಿಂದ ಕೆರೆಯಾಗಿ ಮಾರ್ಪಟ್ಟು ಹೆದ್ದಾರಿ ಸವಾರರು ಪರದಾಡುವಂತಾಯಿತು. ಚೌಥನಿಯ ಸರಾಬಿ ನದಿಯೂ ತುಂಬಿ ಹರಿಯಿತು. ಹಾನಿ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭಟ್ಕಳದ ಪುರವರ್ಗದಲ್ಲಿ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದ್ದು ಅಧಿಕಾರಿಗಳು ಪರಿಶೀಲನೆ ನಡೆಸಿದರು