ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ | ಜಲಾಶಯದ ಹೂಳೆತ್ತಲು ಹೆಚ್ಚಿದ ಬೇಡಿಕೆ

Published 20 ಡಿಸೆಂಬರ್ 2023, 5:08 IST
Last Updated 20 ಡಿಸೆಂಬರ್ 2023, 5:08 IST
ಅಕ್ಷರ ಗಾತ್ರ

ಮುಂಡಗೋಡ: ಕಳೆದ ಒಂದೂವರೆ ದಶಕದಲ್ಲಿ ಅರೆಮಲೆನಾಡು ತಾಲ್ಲೂಕಿನಲ್ಲಿ ಬರದ ಛಾಯೆ ಪದೇ ಪದೆ ಆವರಿಸುತ್ತಿದೆ. 70ರ ದಶಕದಲ್ಲಿ ತಾಲ್ಲೂಕಿನಲ್ಲಿ ನಿರ್ಮಾಣಗೊಂಡಿರುವ ಜಲಾಶಯಗಳು, ದೊಡ್ಡ ಕೆರೆಗಳೇ ಅನ್ನದಾತನಿಗೆ ಇಂದಿಗೂ ಜೀವನಾಡಿ ಆಗಿವೆ. ಆದರೆ ಅವುಗಳ ನಿರ್ವಹಣೆ ಹಾಗೂ ಹೂಳೆತ್ತಬೇಕೆಂಬ ಬೇಡಿಕೆಯ ಕೂಗು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.

ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು ಏಳು ಜಲಾಶಯಗಳಿವೆ. ಕೆಲವನ್ನು ದೊಡ್ಡ ಕೆರೆಗಳೆಂದು ವಿಂಗಡಿಸಲಾಗಿದೆ. ಬಹುತೇಕ ಜಲಾಶಯ, ದೊಡ್ಡ ಕೆರೆಗಳು ರೈತರ ಜಮೀನುಗಳಿಗೆ ನೀರುಣಿಸುತ್ತಿವೆ. ಆದರೆ, ಸನವಳ್ಳಿ ಜಲಾಶಯ ಮಾತ್ರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವುದರ ಜೊತೆಗೆ, ರೈತರ ಗದ್ದೆಗಳಿಗೂ ಹರಿಯುತ್ತಿದೆ. ಬರದ ಛಾಯೆ ಹೆಚ್ಚುತ್ತಿರುವುದರಿಂದ, ಕುಡಿಯುವ ನೀರಿಗೂ ಸಮಸ್ಯೆ ಆಗಬಹುದೆಂಬ ಆತಂಕ ಈ ವರ್ಷವೂ ಕಾಡುತ್ತಿದೆ. ಅದರ ಜೊತೆಗೆ ಸನವಳ್ಳಿ ಜಲಾಶಯದ ಹೂಳೆತ್ತಬೇಕೆಂಬ ರೈತರ ಕೂಗು ಮತ್ತಷ್ಟು ಜೋರಾಗುತ್ತಿದೆ.

'ಕಳೆದ ಐದು ದಶಕಗಳ ಹಿಂದೆ ನಿರ್ಮಾಣಗೊಂಡಿರುವ ಸನವಳ್ಳಿ ಜಲಾಶಯದಿಂದ ನೂರಾರು ಎಕರೆ ಜಮೀನುಗಳಿಗೆ ನೀರುಣಿಸುತ್ತಿದೆ. ಬೇಸಿಗೆ ಬೆಳೆಗೂ ಅನುಕೂಲವಾಗುತ್ತಿದೆ. ಪಟ್ಟಣದ ಜನರಿಗೆ ಕುಡಿಯುವ ನೀರು ಸಹ ಪೂರೈಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಬರಗಾಲವು ರೈತರ ಬೆನ್ನು ಹತ್ತಿದಂತೆ ಗೋಚರಿಸುತ್ತಿದೆ. ಇಂತಹ ಸಮಯದಲ್ಲಿ ಜಲಮೂಲಗಳಲ್ಲಿ ನೀರಿನ ಪ್ರಮಾಣ ಹೆಚ್ಚಿಸುವುದಕ್ಕೆ ಕಾಮಗಾರಿ ಕೈಗೊಳ್ಳಬೇಕಿದೆ' ಎನ್ನುತ್ತಾರೆ ಸನವಳ್ಳಿ ರೈತ ರಾಜು ಗುಬ್ಬಕ್ಕನವರ್.

'ಸನವಳ್ಳಿ ಜಲಾಶಯದಲ್ಲಿ ಹೂಳೆತ್ತಿದ್ದರೆ ಕುಡಿಯುವ ನೀರು ಪೂರೈಕೆಗೆ ಬರಪರಿಸ್ಥಿತಿಯಲ್ಲಿಯೂ ತೊಂದರೆ ಆಗುವುದಿಲ್ಲ. ವಿಶಾಲವಾದ ಹಿನ್ನೀರಿನ ಪ್ರದೇಶವಿದ್ದು, ಅಲ್ಲಿ ಹೂಳೆತ್ತಲು ಪಟ್ಟಣ ಪಂಚಾಯಿತಿ, ಸಣ್ಣ ನೀರಾವರಿ ಇಲಾಖೆ ಜಂಟಿಯಾಗಿ ಕ್ರಮ ಕೈಗೊಳ್ಳಬೇಕು. ಅರಣ್ಯ ಇಲಾಖೆಯ ಸಹಕಾರವನ್ನು ಪಡೆದರೆ ಶಾಶ್ವತ ಯೋಜನೆ ಕೈಗೊಳ್ಳಬಹುದಾಗಿದೆ. ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಬೇಕಿದೆ' ಎಂದು ಪಟ್ಟಣ ಪಂಚಾಯಿತಿ ಸದಸ್ಯ ಮಂಜುನಾಥ ಹರಮಲಕರ್ ಹೇಳಿದರು.

'ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಳಗೊಂಡರೆ ಬೇಸಿಗೆ ಅವಧಿಯಲ್ಲಿಯೂ ಅರಣ್ಯ ಇಲಾಖೆಯವರು ಬೋಟ್ ಸಂಚಾರ ಪುನರಾರಂಭಿಸಬಹುದು. ಉತ್ತಮ ಪ್ರವಾಸಿ ತಾಣ ಆಗಲು ಇದರಿಂದ ಸಹಕಾರಿ ಆಗಲಿದೆ' ಎಂದು ಸ್ಥಳೀಯ ನಿವಾಸಿ ಪರುಶುರಾಮ ಹೇಳಿದರು.

'ಸನವಳ್ಳಿ ಜಲಾಶಯವು 10ಮೀಟರ್ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಹಿನ್ನೀರಿನ ಜಾಗದಲ್ಲಿ ಹೂಳೆತ್ತಲು ಅವಕಾಶವಿದೆ. ಅನುದಾನದ ಲಭ್ಯತೆ ಮೇಲೆ ಪ್ರಸ್ತಾವನೆ ಕಳಿಸಬಹುದು. ಹೂಳೆತ್ತಿದರೆ ಹೆಚ್ಚಿನ ಪ್ರಮಾಣದ ನೀರು ಸಂಗ್ರಹಗೊಂಡರೂ, ಈಗಿನ ಜಲಾಶಯದ ದಂಡೆಗೆ ಯಾವುದೇ ಧಕ್ಕೆ ಆಗದು. ಜಲಾಶಯದ ಏರಿಯ ಒಟ್ಟು ಎತ್ತರ ಎಷ್ಟಿರುತ್ತದೆ, ಅದರ ನಾಲ್ಕು ಪಟ್ಟು ಅಂತರದಲ್ಲಿ ಹೂಳೆತ್ತಬೇಕಾಗುತ್ತದೆ' ಎಂದು ಸಣ್ಣ ನೀರಾವರಿ ಇಲಾಖೆಯ ಎಇಇ ಆರ್.ಎಂ.ಧಪೇದಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT