ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಜನ ಸಾಮಾನ್ಯರ ಪಾಲಿನ ಸಚಿವ: ಮಂಕಾಳ ವೈದ್ಯ

Published 4 ಜೂನ್ 2023, 23:38 IST
Last Updated 4 ಜೂನ್ 2023, 23:38 IST
ಅಕ್ಷರ ಗಾತ್ರ

ದಾಖಲೆಯ 1 ಲಕ್ಷ ಮತಗಳನ್ನು ಪಡೆದು ಭಟ್ಕಳ ಕ್ಷೇತ್ರಕ್ಕೆ ಎರಡನೇ ಬಾರಿಗೆ ಶಾಸಕರಾಗಿರುವ ಮಂಕಾಳ ವೈದ್ಯ ಈಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಖಾತೆ ಸಚಿವರಾಗಿಯೂ ನೇಮಕಗೊಂಡಿದ್ದಾರೆ. ರಾಜಕೀಯ ನಡೆ, ಅಭಿವೃದ್ಧಿಯ ಮುನ್ನೋಟದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

* ನಿಮಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತೇ?

ಸಚಿವ ಸ್ಥಾನ ಸಿಗುವ ನಿರೀಕ್ಷೆ ಇರಲಿಲ್ಲ. ಅದಕ್ಕಾಗಿ ಯಾವ ಲಾಬಿಯನ್ನೂ ಮಾಡಿದವನಲ್ಲ. ಸಂಭಾವ್ಯ ಸಚಿವರ ಪಟ್ಟಿಯಲ್ಲಿ ನನ್ನ ಹೆಸರು ಇರುವುದನ್ನು ನೋಡಿ ನಾನೇ ಅಚ್ಚರಿ ಪಟ್ಟಿದ್ದೆ. ಪಕ್ಷದ ವರಿಷ್ಠರು ನನ್ನ ಮೇಲೆ ವಿಶ್ವಾಸ ಇರಿಸಿ ಸಚಿವ ಸ್ಥಾನ ನೀಡಿದ್ದಾರೆ. ಅವರೆಲ್ಲರಿಗೂ ನಾನು ಚಿರಋಣಿ.

* ದಾಖಲೆ ಮಟ್ಟದ ಗೆಲುವು ಹೇಗಾಯ್ತು?

ಕಳೆದ ಚುನಾವಣೆಯಲ್ಲಿ ವಿರೋಧಿಗಳ ನಿರಂತರ ಅಪಪ್ರಚಾರ, ಸುಳ್ಳಿನಕಂತೆ ಹರಡಿಸಿದ್ದರಿಂದ ನಾನು ಸೋಲುವಂತಾಯಿತು. ಆದರೆ ಈ ಬಾರಿ ವಿರೋಧಿಗಳ ಯಾವುದೇ ತಂತ್ರ ಫಲಿಸಲಿಲ್ಲ. ನಾನು ಕ್ಷೇತ್ರದ ಪ್ರತಿ ಬೂತ್‌ಗೂ ತೆರಳಿ ಕಳೆದ ಚುನಾವಣೆಯಲ್ಲಾದ ನನ್ನ ಸೋಲಿನ  ಕಾರಣದ ಸತ್ಯದ ಕುರಿತು ಮನವರಿಕೆ ಮಾಡಿದ್ದೆ. ಕ್ಷೇತ್ರದಲ್ಲಿ ನಾನು ಈ ಹಿಂದೆ ಶಾಸಕನಿದ್ದ ಸಂದರ್ಭದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು ಮತ್ತು ನಾನು ಮಾಡಿದ ಸಹಾಯ ಸಹಕಾರವನ್ನು ಜನತೆ ನೆನಪಿಸಿಕೊಂಡು ಮತ್ತೊಮ್ಮೆ ನಾನೇ ಶಾಸಕನಾಗಿ ಆಯ್ಕೆಯಾಗಬೇಕು ಎಂದು ನಿರ್ಧಾರ ಮಾಡಿ ಚುನಾವಣೆಯಲ್ಲಿ 1 ಲಕ್ಷಕ್ಕೂ ಅಧಿಕ ಮತ ನೀಡಿ ಆಯ್ಕೆ ಮಾಡಿದ್ದಾರೆ.

* ಸಚಿವ ಸ್ಥಾನವನ್ನು ಹೇಗೆ ಬಳಸಿಕೊಳ್ಳುತ್ತೀರಿ?

ನಾನು ಬಡವರು, ಜನಸಾಮಾನ್ಯರ ಮಂತ್ರಿಯಾಗಿ ಕೆಲಸ ಮಾಡುತ್ತೇನೆ. ನನಗೆ  ಸಚಿವ ಸ್ಥಾನ ನೀಡಿರುವುದರಿಂದ ಕ್ಷೇತ್ರ ಮತ್ತು ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ ಮಾಡಲು ಅನುಕೂಲವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳ ಫಲ ಲಭಿಸಬೇಕು ಎನ್ನುವುದು ನನ್ನ ಆಶಯವಾಗಿದೆ. ಆ ನಿಟ್ಟಿನಲ್ಲಿ ನನ್ನ ಕೆಲಸ ಸಾಗಲಿದೆ.

* ನಿಮಗೆ ಕೊಟ್ಟಿರುವ ಖಾತೆ ಬಗ್ಗೆ ಖುಷಿ ಇದೆಯೇ?

ನಾನು ಮೀನುಗಾರ ಸಮುದಾಯದವನಾಗಿರುವುದರಿಂದ ಮೀನುಗಾರಿಕೆ ಬಗ್ಗೆ ನನಗೆ ಸ್ಪಷ್ಟವಾದ ಅರಿವಿದೆ. ಮುಖ್ಯಮಂತ್ರಿಯವರು ನಾನು ಈ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆಂಬ ವಿಶ್ವಾಸದಿಂದಲೇ ಮೀನುಗಾರಿಕೆ ಮತ್ತು ಬಂದರು, ಒಳನಾಡು ಸಾರಿಗೆ ಖಾತೆಯನ್ನು ಕೊಟ್ಟಿದ್ದಾರೆ. ನನಗೆ ಕೊಟ್ಟಿರುವ ಖಾತೆ ಮಹತ್ವದ ಖಾತೆಯಾಗಿದ್ದು, ಸಮರ್ಥವಾಗಿ ನಿಭಾಯಿಸುತ್ತೇನೆ. ನನಗೆ ಈ ಖಾತೆ ಕೊಟ್ಟಿರುವ ಬಗ್ಗೆ ಖುಷಿ ಇದೆ.

* ಜಿಲ್ಲೆಯ ಸಮಸ್ಯೆ ಬಗೆಹರಿಸಲು ಏನು ಕ್ರಮ ಕೈಗೊಳ್ಳುತ್ತೀರಿ?

ಜಿಲ್ಲೆಯಲ್ಲಿ ಹಲವು ಸಮಸ್ಯೆಗಳಿದ್ದು, ಇದರ ಕುರಿತು ಪಟ್ಟಿ ಮಾಡಿ ಬಗೆಹರಿಸಲು ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ಮತ್ತು ಹಿರಿಯರ ಸಹಕಾರದಿಂದ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

* ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ನಿಮ್ಮ ಸಂದೇಶ ಏನು?

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಸಂಪೂರ್ಣ ಬಹುಮತದಿಂದ  ಆಡಳಿತಕ್ಕೆ ಬಂದಿದೆ. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸರ್ಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಸ್ಥಳೀಯವಾಗಿ ಜನರ ಸಂಕಷ್ಟಕ್ಕೆ ಸ್ಪಂದಿಸಿದರೆ ಅವರು ನಮ್ಮ ಜತೆ ಯಾವಾಗಲೂ ಇರುತ್ತಾರೆ.

* ನೀವೀಗ ಸಚಿವರಾಗಿರುವುದರಿಂದ ಜನರ ಕೈಗೆ ಅಷ್ಟಾಗಿ ಸಿಗುವುದಿಲ್ಲ ಎನ್ನುವ ಮಾತಿದೆ?

ನಾನು ಮೊದಲೇ ಹೇಳಿದ್ದೇನೆ. ನಾನೊಬ್ಬ ಬಡವರ ಮತ್ತು ಜನಸಾಮಾನ್ಯರ ಸಚಿವ. ನಾನು ಸಚಿವನಾದರೂ ಜನರ ಜತೆಯೇ ಇರುತ್ತೇನೆ.  ನನ್ನ ಮನೆ, ಕಚೇರಿ ಬಾಗಿಲು ಸದಾ ತೆರೆದಿರುತ್ತದೆ. ಜನರ ಕೈಗೆ ಸಿಗುವುದಿಲ್ಲ ಎಂಬ ಕಲ್ಪನೆ ಬೇಡ.

ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆ ಶತಃಸಿದ್ಧ * ನೀವು ಸಚಿವರಾದ ಬಳಿಕ ಮತ್ತೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕೂಗು ಎದ್ದಿದೆ? – ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯ ಅತೀ ಅವಶ್ಯವಿದೆ. ಪ್ರಮಾಣ ವಚನ ಸ್ವೀಕರಿಸಿದ ದಿನವೇ ನಾನು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಬಗ್ಗೆ ಭರವಸೆ ನೀಡಿದ್ದು ಖಂಡಿತ ಎಲ್ಲರ ಸಹಕಾರದಿಂದ ಆಸ್ಪತ್ರೆ ನಿರ್ಮಾಣ ಮಾಡೇ ಮಾಡುತ್ತೇನೆ. * ಸರಕಾರದ ಗ್ಯಾರಂಟಿ ಕಾರ್ಡ್ ಅನುಷ್ಠಾನದ ಕುರಿತು ಏನಂತೀರಿ? – ಈಗಾಗಲೇ ಮುಖ್ಯಮಂತ್ರಿಯವರು ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಗೊಳಿಸುವುದರ ಮೂಲಕ ನುಡಿದಂತೆ ನಡೆದಿದ್ದಾರೆ. ಗ್ಯಾರಂಟಿ ಕಾರ್ಡ್‍ನಿಂದ ಬಡವರು ಸಾಮಾನ್ಯ ವರ್ಗದವರಿಗೆ ಅನುಕೂಲವಾಗಲಿದೆ. ಸರ್ಕಾರ ಇದನ್ನು ರಾಜ್ಯದಾದ್ಯಂತ ಸಮರ್ಪಕವಾಗಿ ಅನುಷ್ಠಾನ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT